ಶೃಂಗೇರಿ ಶಾರದೆಗೆ ರಾಜರಾಜೇಶ್ವರಿ ಅಲಂಕಾರ

| Published : Oct 01 2025, 01:00 AM IST

ಸಾರಾಂಶ

ಶೃಂಗೇರಿಶೃಂಗೇರಿಯಲ್ಲಿ ಶರನ್ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ಮೆರುಗು ಪಡೆದುಕೊಳ್ಳುತ್ತಿದ್ದು ಧಾರ್ಮಿಕ, ಸಾಂಸ್ಕೃತಿಕ ಕಲರವ ಕಳೆಗಟ್ಟಿದೆ. ನವರಾತ್ರಿ ಆರಂಭದಿಂದಲೂ ಮಳೆರಾಯ ಶೃಂಗೇರಿ ಬಿಟ್ಟು ಕದಲದಿದ್ದರೂ ದೇಶದ ನಾನಾ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತಲೆ ಇದೆ. ಶ್ರೀ ಶಾರದಾಂಬಾ ದೇವಾಲಯ, ಶ್ರೀ ಶ್ರೀಮಠದ ಆವರಣ, ನರಸಿಂಹವನ,ಬೋಜನಾ ಶಾಲೆ, ಶೃಂಗೇರಿ ಪಟ್ಟಣ ಹೀಗೆ ಎಲ್ಲೆಂದರಲ್ಲಿ ಜನಜಂಗುಳಿಯೇ ಹಬ್ಬಕ್ಕೆ ಕಳೆತಂದಿದೆ.

- ಕಳೆಗಟ್ಟಿದ ದಸರಾ । ರಾಜಬೀದಿ ಉತ್ಸವ, ಧಾರ್ಮಿಕ, ಸಾಂಸ್ಕೃತಿಕ ವೈಭವ । ಬುಧವಾರ ಚಾಮುಂಡಿಯಲಂಕಾರ, ಗಜಾಶ್ವಪೂಜೆ, ಮಹಾನವಮಿ.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಶೃಂಗೇರಿಯಲ್ಲಿ ಶರನ್ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ಮೆರುಗು ಪಡೆದುಕೊಳ್ಳುತ್ತಿದ್ದು ಧಾರ್ಮಿಕ, ಸಾಂಸ್ಕೃತಿಕ ಕಲರವ ಕಳೆಗಟ್ಟಿದೆ. ನವರಾತ್ರಿ ಆರಂಭದಿಂದಲೂ ಮಳೆರಾಯ ಶೃಂಗೇರಿ ಬಿಟ್ಟು ಕದಲದಿದ್ದರೂ ದೇಶದ ನಾನಾ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತಲೆ ಇದೆ. ಶ್ರೀ ಶಾರದಾಂಬಾ ದೇವಾಲಯ, ಶ್ರೀ ಶ್ರೀಮಠದ ಆವರಣ, ನರಸಿಂಹವನ,ಬೋಜನಾ ಶಾಲೆ, ಶೃಂಗೇರಿ ಪಟ್ಟಣ ಹೀಗೆ ಎಲ್ಲೆಂದರಲ್ಲಿ ಜನಜಂಗುಳಿಯೇ ಹಬ್ಬಕ್ಕೆ ಕಳೆತಂದಿದೆ.

ನವರಾತ್ರಿಯ 9 ನೇ ದಿನವಾದ ಮಂಗಳವಾರ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ರಾಜರಾಜೇಶ್ವರಿ ಅಲಂಕಾರ ಮಾಡಲಾಗಿತ್ತು. ಕಾಮೇಶ್ವರನ ಪ್ರಾಣಕಾಂತೆಯಾಗಿ ಪುಷ್ಪ ಬಾಣ ಹಿಡಿದು ಪಾಶ ,ಅಂಕುಶ, ಚಾಪದಾರಿಣಿಯಾಗಿ ಕರುಮಣಾಪೂರಿತ ದೃಷ್ಠಿಯುಳ್ಳವಳಾಗಿ ಸರ್ವಾಲಂಕಾರ ಭೂಷಿತಳಾಗಿ ಕಂಗೊಳಿಸುತ್ತಿದ್ದ ಶಾರದೆ ಅಲಂಕಾರ ಭಕ್ತರ ಮನಸೂರೆ ಗೊಳಿಸುವಂತೆ ನಯನ ಮನೋಹರವಾಗಿತ್ತು.

ಕರುಣಾಮೂರ್ತಿ, ಪಂಚಬ್ರಹ್ಮಸ್ವರೂಪಿಣಿ, ಕೈವಲ್ಯ ಪ್ರದಾಯಿನಿ, ಕ್ಷಿಪ್ರ ಪ್ರಸಾದಿನಿ ಆದ ರಾಜರಾಜೇಶ್ವರಿ ಸರ್ಪಶುಭಕಾರಿಣಿ ಯಾಗಿದ್ದಾಳೆ. ಪುರಾಣೇತಿಹಾಸಗಳ ಸಂಗಮ ಸ್ಥಳವಾದ ಶೃಂಗೇರಿ ಪರಶಿವನು ಸಂಚರಿಸಿದ ಸ್ಥಳ.ಆತ ಸತತ ನೆಲೆನಿಂತ ಬೆಟ್ಟದಲ್ಲಿ ಮಲಹಾನಿಕರೇಶ್ವರ ಮಂದಿರವಿದೆ. ಮಹರ್ಷಿ ವಿಭಾಂಡಕರು ತಪಸನ್ನಾಚರಿಸಿ ಲೋಕಕಲ್ಯಾಣ ಮಾಡಿ ಶಿವೈಕ್ಯರಾದ ಪುಣ್ಯಸ್ಥಳವಿದು.

ಬೆಳಿಗ್ಗೆ ಶ್ರೀ ಶಾರದಾಂಬೆ ಸನ್ನಿದಿಯಲ್ಲಿ ಉಭಯ ಜಗದ್ಗುರುಗಳು ಶ್ರೀ ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿ, ಶ್ರೀ ಶಂಕರಾಚಾರ್ಯ,ಶ್ರೀ ತೋರಣಗಣಪತಿ, ಶ್ರೀ ಸುಬ್ರಮಣ್ಯ,ಶ್ರೀ ಜನಾರ್ದನ ಸ್ವಾಮಿ,ಶ್ರೀ ವಿದ್ಯಾಶಂಕರ ಎಲ್ಲಾ ದೇವಾಲಯಗಳಲ್ಲಿ, ದುರ್ಗಾ ದೇವಸ್ಥಾನದ ಶ್ರೀ ಹರಾವರಿ ದುರ್ಗಾಂಬೆ, ಪಟ್ಟಣದ ಎಲ್ಲಾ ದೇವಾಲಯಗಳಲ್ಲಿ ನವರಾತ್ರಿ ವಿಶೇಷ ಪೂಜೆ ನಡೆಯಿತು.

ಶ್ರೀ ಶಾರದಾಂಬಾ ದೇವಾಲಯದ ಪ್ರಾಂಗಣದಲ್ಲಿ ಸ್ವರ್ಣರಥದಲ್ಲಿ ಶ್ರೀ ಶಾರದಾಂಬೆ ಮೂರ್ತಿಯನ್ನಿಟ್ಟು ಮೂರುಸುತ್ತು ಪ್ರದಕ್ಷಿಣೆ ಬರಲಾಯಿತು. ಶ್ರೀ ಶಾರದಾಂಬೆಗೆ ಪೂಜೆ ಸಲ್ಲಿಸಿದ ನಂತರ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಶ್ರೀ ಶಾರದಾಂಬೆಗೆ ಅಭಿಮುಖ ವಾಗಿರುವ ಸ್ವರ್ಣ ಸಿಂಹಾಸನದಲ್ಲಿ ಆಸೀನರಾಗಿ ನವರಾತ್ರಿ ದರ್ಬಾರ್ ನಡೆಸಿದರು.

ರಾಜಬೀದಿ ಉತ್ಸವದಲ್ಲಿ ಮರ್ಕಲ್ ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು,ಭಜನಾ ತಂಡಗಳು,ವಿವಿದ ಕಲಾ ತಂಡಗಳು ಪಾಲ್ಗೊಂಡು ಉತ್ಸವಕ್ಕೆ ವಿಶೇಷ ಮೆರಗು ನೀಡಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚೆನೈನ ವಿದುಷಿ ಗಾಯಿತ್ರಿ ತಂಡದವರಿಂದ ಹಾಡುಗಾರಿಕೆ ನಡೆಯಿತು.

ಬುಧವಾರ ಶಾರದೆಗೆ ಚಾಮುಂಡಿ ಅಲಂಕಾರ ನಡೆಯಲಿದೆ. ಜಗದ್ಗುರುಗಳು ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಲಿದ್ದು, ಶ್ರೀ ಮಠದ ಯಾಗಶಾಲೆಯಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ ಶತಚಂಡೀಯಾಗದ ಪೂರ್ಣಾಹುತಿ ನೆರವೇರಲಿದೆ. ಮಹಾನವಮಿ, ಗಜಾಶ್ವಪೂಜೆಗಳು ನೆರವೇರಲಿದೆ. ರಾಜಬೀದಿ ಉತ್ಸವದಲ್ಲಿ ಕೆರೆ ಪಂಚಾಯಿತಿ ವ್ಯಾಪ್ತಿ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ,ಕಲಾ ತಂಡಗಳು ಪಾಲ್ಗೊಳ್ಳಲಿದೆ. ನವರಾತ್ರಿ ಕೊನೆ ದಿನದ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಬೆಂಗಳೂರಿನ ವಿದ್ವಾನ್ ಮಧುಸೂದನ್ ಭಾಗವತರ್ ತಂಡದ ಹಾಡುಗಾರಿಕೆ ಇದೆ.

ಗುರುವಾರ ಶಾರದೆಗೆ ಗಜಲಕ್ಷ್ಮಿ ಅಲಂಕಾರ ನಡೆಯಲಿದ್ದು, ಅಂದು ವಿಜಯದಶಮಿ. ವಿಜಯೋತ್ಸವ, ಶಮಿಪೂಜೆ,ಶ್ರೀ ರಾಮ ಪಟ್ಟಾಭಿಷೇಕ ಸರ್ಗ ಪಾರಾಯಣೆ,ಲಕ್ಷ್ಮಿನಾರಾಯಣ ಹೃದಯಹೋಮ ನಡೆಯಲಿದೆ. ವಿಜಯದಶಮಿ ದಿನವಾದ ಗುರುವಾರ ಮಧ್ಯಾಹ್ನ ಶ್ರೀ ಮಠದ ಆಡಳಿತಾಧಿಕಾರಿ ನೇತೃತ್ವದಲ್ಲಿ ಶ್ರೀ ಮಠದಿಂದ ಅಮ್ಮನವರ ಉತ್ಸವ ಕಾಳಿಕಾಂಬಾ ದೇಗುಲಕ್ಕೆ ತೆರಳಲಿದೆ. ಅಲ್ಲಿ ಕಾಳಿಕಾಂಬೆಗೆ ವಿಶೇಷ ಪೂಜೆ, ಬನ್ನಿಪೂಜೆ ನಡೆಯಲಿದೆ.ರಾಜಬೀದಿ ಉತ್ಸವದಲ್ಲಿ ಸಮಸ್ತ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ.

30 ಶ್ರೀ ಚಿತ್ರ 1

ಶೃಂಗೇರಿ ಶಾರದೆಗೆ ಮಂಗಳವಾರ ರಾಜರಾಜೇಶ್ವರಿ ಅಲಂಕಾರ ಮಾಡಲಾಗಿತ್ತು.