ರಾಜೇಂದ್ರ ಶ್ರೀಗಳು ಶಿವಾಂಶ ಸಂಭೂತರು ಹಾಗೂ ಸಿದ್ಧಿಪುರುಷರು. ಸಹನಶೀಲತೆ, ದೂರದರ್ಶಿತ್ವ, ವಿಶಾಲ ಮನೋಧರ್ಮ ಮತ್ತು ರಾಷ್ಟ್ರಪ್ರೇಮದಂತಹ ಸದ್ಗುಣಗಳು ಅವರಿಗೆ ಬಾಲ್ಯದಿಂದಲೇ ಸಿದ್ಧಿಸಿದ್ದವು. ಅವರೊಬ್ಬ ಶ್ರೇಷ್ಠ ಕರ್ಮಯೋಗಿಗಳು. ಮಾಡಿಯೂ ಮಾಡದ ಭಾವ ಅವರಲ್ಲಿತ್ತು. ಎಲೆಮರೆಯ ಕಾಯಿಯಂತೆ ಅವರು ಅನೇಕ ಕಾರ್ಯಗಳನ್ನು ಮಾಡಿದರು.
ಕನ್ನಡಪ್ರಭ ವಾರ್ತೆ ಮೈಸೂರು
ರಾಜೇಂದ್ರ ಶ್ರೀಗಳು ನಾಡಿನ ಸರ್ವತೋಮುಖ ಏಳಿಗೆಗೆ ಶ್ರಮಿಸಿದವರು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ಅನಂತರಾಮು ತಿಳಿಸಿದರು.ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳವರ 111ನೇ ಜಯಂತಿಯಲ್ಲಿ ಮಾತನಾಡಿದ ಅವರು, ರಾಜೇಂದ್ರ ಶ್ರೀಗಳು ಶಿವಾಂಶ ಸಂಭೂತರು ಹಾಗೂ ಸಿದ್ಧಿಪುರುಷರು. ಸಹನಶೀಲತೆ, ದೂರದರ್ಶಿತ್ವ, ವಿಶಾಲ ಮನೋಧರ್ಮ ಮತ್ತು ರಾಷ್ಟ್ರಪ್ರೇಮದಂತಹ ಸದ್ಗುಣಗಳು ಅವರಿಗೆ ಬಾಲ್ಯದಿಂದಲೇ ಸಿದ್ಧಿಸಿದ್ದವು. ಅವರೊಬ್ಬ ಶ್ರೇಷ್ಠ ಕರ್ಮಯೋಗಿಗಳು ಎಂದರು.
ಮಾಡಿಯೂ ಮಾಡದ ಭಾವ ಅವರಲ್ಲಿತ್ತು. ಎಲೆಮರೆಯ ಕಾಯಿಯಂತೆ ಅವರು ಅನೇಕ ಕಾರ್ಯಗಳನ್ನು ಮಾಡಿದರು. ಶ್ರೀಮಠಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿದರು. ಅವರ ವಿಚಾರಗಳು ದೇಶೋವಿಶಾಲವಾದುವು. ಅನ್ನ, ಜ್ಞಾನ, ಆರೋಗ್ಯ, ಧರ್ಮ ಮತ್ತು ಆತ್ಮ ದಾಸೋಹಗಳ ಮೂಲಕ ಅವರು ಪಂಚ ದಾಸೋಹಗಳಿಗೆ ಹೆಚ್ಚಿನ ಒತ್ತು ನೀಡಿದ್ದರು ಎಂದರು.ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಸಹಸ್ರಾರು ಜನರು ಬದುಕು ಕಟ್ಟಿಕೊಳ್ಳಲು ನೆರವಾದರು. ಜಗತ್ತಿನ ಭೂಪಟದಲ್ಲಿ ಸುತ್ತೂರಿಗೆ ಸ್ಥಾನ ಸಿಗುವಂತೆ ಮಾಡಿದರು. ಇವನಾರವ ಎನ್ನದೇ ಇವ ನಮ್ಮವನೆಂದು ಸರ್ವರ ಉದ್ಧಾರಕ್ಕೆ ಸೇವೆ ಸಲ್ಲಿಸಿದರು. ಇಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಅವರ ಕಾರ್ಯಗಳನ್ನು ಸಾವಿರಪಟ್ಟು ಹೆಚ್ಚಿಸಿದ್ದಾರೆ ಎಂದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಮಾತನಾಡಿ, ರಾಜೇಂದ್ರ ಶ್ರೀಗಳು ಅಪರೂಪದ ಜೀವನ ನಡೆಸಿದ ಸಿದ್ಧಿಪುರುಷರು. ಅವರ ಸಿದ್ಧಿಸಾಧನೆಗಳು ಉನ್ನತವಾದುವು. 1954 ರಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸಿ ಅದರ ಸೇವಾ ಕಾರ್ಯಗಳನ್ನು ವಿಸ್ತರಿಸಿ ಸಂಸ್ಥೆಯು ಬೃಹದಾಕಾರವಾಗಿ ಬೆಳೆಯಲು ಕಾರಣಕರ್ತರಾದರು. ಮಾನವನಾಗಿ ಹುಟ್ಟುವುದೇ ಒಂದು ಪುಣ್ಯ, ಅದರಲ್ಲಿಯೂ ಮಾನವನಾಗಿ ಹುಟ್ಟಿದ ಮೇಲೆ ಸೇವೆಯನ್ನು ಮಾಡುವ ಅವಕಾಶ ದೊರಕುವುದು ಸೌಭಾಗ್ಯ ಎಂದು ರಾಜೇಂದ್ರ ಶ್ರೀಗಳು ಹೇಳುತ್ತಿದ್ದರು ಎಂದು ಸ್ಮರಿಸಿದರು.ಇದೇ ವೇಳೆ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಸನ್ಮಾನಿಸಲಾಯಿತು. ಸುತ್ತೂರು ಮಠದ ಕಿರಿಯು ಶ್ರೀಗಳಾದ ಜಯರಾಜೇಂದ್ರರು, ಕಾರ್ಯದರ್ಶಿಗಳಾದ ಎಸ್.ಪಿ. ಮಂಜುನಾಥ್, ಎಸ್. ಶಿವಕುಮಾರಸ್ವಾಮಿ, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಇದ್ದರು. ಶಂಕರಪ್ಪ ಸ್ವಾಗತಿಸಿದರು. ಪ್ರೊ. ಮೊರಬದ ಮಲ್ಲಿಕಾರ್ಜುನ ಅತಿಥಿಗಳನ್ನು ಪರಿಚಯಿಸಿದರು. ಗೀತಾ ಮತ್ತು ತಂಡದವರು ಪ್ರಾರ್ಥಿಸಿದರು. ಬಿ. ನಿರಂಜನಮೂರ್ತಿ ವಂದಿಸಿದರು.