ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ.ಗೋ. ಪ್ರಶಸ್ತಿಗೆ ವಿಜಯವಾಣಿಯ ಹಿರಿಯ ಉಪಸಂಪಾದಕ ರಾಜೇಶ್ ಶೆಟ್ಟಿ ದೋಟ ಆಯ್ಕೆಯಾಗಿದ್ದಾರೆ.2024ರ ಡಿ.26ರಂದು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ದಟ್ಟಡವಿಯಲ್ಲೊಂದು ದಾರಿಯ ಕೂಗು, ಮೂಲನಿವಾಸಿ ಕುಟುಂಬಕ್ಕೆ ಬೇಕಿದೆ ಮಾನವೀಯ ಕಾಳಜಿ’ ಎಂಬ ವಿಶೇಷ ವರದಿ ಈ ಪ್ರಶಸ್ತಿಗೆ ಆಯ್ಕೆಯಾಗಿದೆ.ವಿಜಯ ಕರ್ನಾಟಕದ ನಿವೃತ್ತ ಸ್ಥಾನೀಯ ಸಂಪಾದಕ ಯು.ಕೆ. ಕುಮಾರನಾಥ್, ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ, ಪತ್ರಿಕೋದ್ಯಮ ಉಪನ್ಯಾಸಕಿ ಸುಶ್ಮಿತಾ ಆಯ್ಕೆ ಸಮಿತಿಯಲ್ಲಿದ್ದರು. ಪ್ರಶಸ್ತಿಯು 10,001 ರು. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭ ಮೇ 24ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಲಿದೆ. ಕರ್ನಾಟಕ ಮಾಹಿತಿ ಆಯೋಗದ ಅಧ್ಯಕ್ಷ ಬದ್ರುದ್ದೀನ್ ಕೆ. ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸುವರು, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಗೌರವ ಉಪಸ್ಥಿತಿ ವಹಿಸಲಿದ್ದಾರೆ.