ಕನ್ನಡಪ್ರಭ ವಾರ್ತೆ ಸಿದ್ದಾಪುರ
ತಾಲೂಕಿನ ಹಲಗೇರಿ ಗ್ರಾಮದ ರಾಜೇಶ್ವರಿ ನಾರಾಯಣ ಹೆಗಡೆ ಬೆಂಗಳೂರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಜೂ.೧ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.ಬೆಂಗಳೂರು ಹೈಕೋರ್ಟಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ರಾಜೇಶ್ವರಿ ಹೆಗಡೆಯವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭ ಮಾತನಾಡಿದ ರಾಜೇಶ್ವರಿ ಹೆಗಡೆ ನ್ಯಾಯಾಂಗ ಕ್ಷೇತ್ರದಲ್ಲಿ ತಾವು ನಡೆದುಬಂದ ದಾರಿಯನ್ನು ಸ್ಮರಿಸಿಕೊಂಡು ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಹಲಗೇರಿಯ ನಾರಾಯಣ ಹೆಗಡೆ ಹಾಗೂ ಭಾಗೀರಥಿ ಹೆಗಡೆ ದಂಪತಿಗಳ ಮಗಳಾಗಿ ಜನಿಸಿದ ರಾಜೇಶ್ವರಿ ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಹುಟ್ಟಿದೂರಿನಲ್ಲಿಯೇ ಪಡೆದರು. ಸಿದ್ದಾಪುರದ ಎಂಜಿಸಿ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಇವರು ಧಾರವಾಡ ಕಾನೂನು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಗಳಿಸಿದರು. ಪ್ರಾರಂಭಿಕ ಹಂತದಲ್ಲಿ ಸಿದ್ದಾಪುರ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಕೈಗೊಂಡ ನಂತರ ಬೆಂಗಳೂರಿಗೆ ತೆರಳಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಕಾರ್ಯನಿರ್ವಹಿಸಿದರು.೧೯೯೮ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ರಾಜೇಶ್ವರಿ ಹೆಗಡೆ ೨೦೦೬ರಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ, ೨೦೧೪ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದರು.
ಮೈಸೂರು, ರಾಮನಗರ, ಬೆಂಗಳೂರು, ರಾಯಚೂರು, ಮಂಡ್ಯ, ದಾವಣಗೆರೆ ಹಾಗೂ ಚಿಕ್ಕಮಗಳೂರು ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿ ದಕ್ಷತೆ ತೋರಿದ ಇವರು, ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಬದ್ಧ ತೀರ್ಮಾನ ನೀಡುವ ಮೂಲಕ ನ್ಯಾಯಾಂಗ ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ. ಇದೀಗ ರಾಜೇಶ್ವರಿ ಹೆಗಡೆ ಹೈಕೋರ್ಟಿನ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಸಿದ್ದಾಪುರ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.
---------
೨ಎಸ್ಡಿಪಿ೬- ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ ರಾಜೇಶ್ವರಿ ಹೆಗಡೆ ಹಲಗೇರಿ.