ಕಲ್ಯಾಣದ 44 ಸ್ನಾತಕೋತ್ತರ ಪದವೀಧರರಿಗೆ ರಾಜೀವ ಗಾಂಧಿ ಫೆಲೋಶಿಪ್

| Published : Aug 21 2024, 12:37 AM IST

ಸಾರಾಂಶ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆಯ್ಕೆಯಾದ ಈ ಫೆಲೋಗಳಿಗೆ ಮಾಸಿಕ 60,000 ರು. ಫೆಲೋಶಿಪ್ ನೀಡಿ ಪ್ರದೇಶದ ವಿವಿಧ ತಾಲೂಕುಗಳಿಗೆ ನಿಯೋಜಿಸಲಾಗುತ್ತದೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಳೀಯ ಆಡಳಿತವನ್ನು ಬಲಪಡಿಸುವ ಗುರಿಯೊಂದಿಗೆ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಗ್ರಾಮೀಣಾಭಿವೃದ್ಧಿ, ಸಮಾಜಕಾರ್ಯ ಮತ್ತು ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ 44 ಪದವೀಧರರನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಯೋಜನೆಯಲ್ಲಿ ಫೆಲೋಗಳೆಂದು ಆಯ್ಕೆ ಮಾಡಲಾಗಿದೆ.

ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ನಿಭಾಯಿಸಲು, ಸ್ಥಳೀಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಸ್ಥಳೀಯ ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ತರಬೇತಿ ಪಡೆದ ಈ ಫೆಲೋಗಳು ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸಿ ಉತ್ತಮ ಗ್ರಾಮ ಆಡಳಿತಕ್ಕೆ ನೀತಿ, ನಿರೂಪಣೆ ತರಲು ಫೀಡ್‌ಬ್ಯಾಕ್ ನೀಡಲಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆಯ್ಕೆಯಾದ ಈ ಫೆಲೋಗಳಿಗೆ ಮಾಸಿಕ 60,000 ರು. ಫೆಲೋಶಿಪ್ ನೀಡಿ ಪ್ರದೇಶದ ವಿವಿಧ ತಾಲೂಕುಗಳಿಗೆ ನಿಯೋಜಿಸಲಾಗುತ್ತದೆ. ಗ್ರಾಪಂಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಇವರಿಗೆ ಮಾಸಿಕ 1,500 ರು. ಭತ್ಯೆ ಸಹ ನೀಡಲಾಗುತ್ತಿದೆ.

ಕಲಬುರಗಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ 44 ಜನರಿಗೆ ರಾಜೀವ ಗಾಂಧಿ ಫೆಲೋಶಿಪ್ ಆಯ್ಕೆ ಪತ್ರ ವಿತರಣೆ ಜೊತೆಗೆ ಸಾಂಕೇತಿಕವಾಗಿ ಆರ್.ಡಿ.ಪಿ.ಆರ್ ಇಲಾಖೆಯಿಂದ ಸಂಜೀವಿನಿ ಎನ್.ಆರ್.ಎಲ್.ಎಂ. ಸ್ವಚ್ಛ ಭಾರತ ಅಭಿಯಾನದಡಿ ಕಸ ಸಂಗ್ರಹಣೆಗೆ ಲಘು ಮೋಟಾರು ವಾಹನ ಚಾಲನಾ ತರಬೇತಿ ಪಡೆದ ಮಹಿಳೆಯರಿಗೆ ಚಾಲನಾ ಲೈಸೆನ್ಸ್, ಪೌರ ಕಾರ್ಮಿಕರಿಗೆ ಸೀರೆ ಮತ್ತು ಸುರಕ್ಷಾ ಕವಚಗಳು ಹಾಗೂ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಯಿತು.