ನಾಡಿಗೆ ರಾಜಕುಮಾರ್‌ ಕೊಡುಗೆ ಅಪಾರ

| Published : Apr 27 2025, 01:35 AM IST

ಸಾರಾಂಶ

ಮಾಗಡಿ: ಡಾ. ರಾಜಕುಮಾರ್ ಖಾಸಗಿ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಬರುತ್ತಿರಲಿಲ್ಲ. ಮಾಗಡಿಯಲ್ಲಿ ನಡೆದ ಸರ್ಕಾರದ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ರಾಜಕುಮಾರ್ ದಂಪತಿ ಬಂದು ಚಾಲನೆ ನೀಡಿದ್ದು ವಿಶೇಷವಾಗಿತ್ತು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ಮಾಗಡಿ: ಡಾ. ರಾಜಕುಮಾರ್ ಖಾಸಗಿ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಬರುತ್ತಿರಲಿಲ್ಲ. ಮಾಗಡಿಯಲ್ಲಿ ನಡೆದ ಸರ್ಕಾರದ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ರಾಜಕುಮಾರ್ ದಂಪತಿ ಬಂದು ಚಾಲನೆ ನೀಡಿದ್ದು ವಿಶೇಷವಾಗಿತ್ತು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ಪಟ್ಟಣದ ಕಲ್ಯಾಗೇಟ್‌ನಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳ ಸಂಘ ಆಯೋಜಿಸಿದ್ದ ಡಾ.ರಾಜಕುಮಾರ್ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡಾ. ರಾಜಕುಮಾರ್ ಅವರೊಂದಿಗೆ ನನಗೆ ಉತ್ತಮ ಒಡನಾಟವಿತ್ತು. ಚಿತ್ರರಂಗದ ಮೇಲಿನ ಪ್ರೀತಿ, ಅವರು ನಟಿಸುತ್ತಿದ್ದ ಪಾತ್ರ, ಕನ್ನಡ ಭಾಷೆಯ ಮೇಲೆ ಅವರಿಗಿದ್ದ ಹಿಡಿತ, ಅಭಿನಯ ಎಲ್ಲರೂ ಮೆಚ್ಚುವಂತಹದ್ದು. ಬಂಗಾರದ ಮನುಷ್ಯ, ಬಬ್ರುವಾಹನದಂತ ಅನೇಕ ಚಿತ್ರಗಳನ್ನು ಕನ್ನಡ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಮಹಾನ್ ಕಲಾವಿದರ ಜಯಂತಿ ಪ್ರತಿ ವರ್ಷವೂ ಅಭಿಮಾನಿಗಳ ಬಳಗ ಮಾಡುತ್ತಿರುವುದು ಉತ್ತಮ ಕೆಲಸ. ಮಾಗಡಿಗೆ ಡಾ. ರಾಜಕುಮಾರ್ ದಂಪತಿ ಬಂದಿದ್ದರು ಎಂಬುದೇ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಮಾಜಿ ಶಾಸಕ ಎ. ಮಂಜುನಾಥ್ ಮಾತನಾಡಿ, ಡಾ.ರಾಜಕುಮಾರ್ ಚಿತ್ರರಂಗ ಸೇರಿದಂತೆ ನಾಡು, ನುಡಿ, ಜಲದ ಬಗ್ಗೆ ಅವರು ಇಟ್ಟುಕೊಂಡಿದ್ದ ಗೌರವವನ್ನು ಎಲ್ಲರೂ ಸ್ಮರಿಸಬೇಕು. ಗೋಕಾಕ್ ಚಳವಳಿ ರಾಜ್ಯದಲ್ಲೇ ದೊಡ್ಡಮಟ್ಟದ ಚಳವಳಿ ಆಯಿತು. ಇದರ ನೇತೃತ್ವವನ್ನು ಡಾ. ರಾಜಕುಮಾರ್ ವಹಿಸಿಕೊಂಡ ಪರಿಣಾಮವೇ ಹೋರಾಟದ ಯಶಸ್ವಿಗೆ ಕಾರಣ. ಕಾವೇರಿ ವಿಚಾರದಲ್ಲಿ ಅವರ ಹೇಳಿಕೆ ಅವರ ಬದ್ಧತೆ ಕನ್ನಡಿಗರಾದ ನಾವು ಅವರ ಆದರ್ಶವನ್ನು ಪಾಲಿಸಬೇಕು. ಪ್ರತಿ ವರ್ಷವೂ ರಾಜ್‌ಕುಮಾರ್ ಹೆಸರಿನಲ್ಲಿ ಅನ್ನದಾಸೋಹ ಮಾಡುತ್ತಿರುವುದು ಒಳ್ಳೆಯ ಕಾರ್ಯ ಎಂದು ಹೇಳಿದರು.

ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ರಾಜಕುಮಾರ್ ನಟಿಸುತ್ತಿದ್ದ ಎಲ್ಲಾ ಚಿತ್ರಗಳನ್ನು ನೋಡಿದ್ದೇವೆ. ಅವರ ಆದರ್ಶ ಸರಳತೆಯನ್ನು ಇಂದಿನ ನಟರು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಎಂ ಎನ್ ಮಂಜು ಕೆ.ವಿ.ಬಾಲು, ರೂಪೇಶ್, ಕೆ.ಪಿ.ರಂಗಸ್ವಾಮಿ, ಜವರೇಗೌಡ, ತಗ್ಗೀಕುಪ್ಪೆ ಪಂಚೆ ರಾಮಣ್ಣ, ಎಲ್‌ಐಸಿ ಶಿವಕುಮಾರ್, ಅತ್ತಿಂಗೆರೆ ಮಹದೇವ್ ಇತರರು ಭಾಗವಹಿಸಿದ್ದರು.

(ಫೋಟೊ ಕ್ಯಾಪ್ಷನ್‌)

ಮಾಗಡಿ ಪಟ್ಟಣದ ಕಲ್ಯಾಗೇಟ್‌ನಲ್ಲಿ ಡಾ.ರಾಜಕುಮಾರ್ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಎ.ಮಂಜುನಾಥ್ ಚಾಲನೆ ನೀಡಿದರು.