ಸಾರಾಂಶ
ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಜನರು ಬದುಕು ಕಟ್ಟಿಕೊಳ್ಳಲು ಕಾರಣವಾಗಿರುವ ಡಾ. ಶಿವಕುಮಾರಸ್ವಾಮೀಜಿ ಅವರ 118ನೇ ಗುರುವಂದನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ರಾಜನಾಥಸಿಂಗ್ ಆಗಮಿಸುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರು
ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಜನರು ಬದುಕು ಕಟ್ಟಿಕೊಳ್ಳಲು ಕಾರಣವಾಗಿರುವ ಡಾ. ಶಿವಕುಮಾರಸ್ವಾಮೀಜಿ ಅವರ 118ನೇ ಗುರುವಂದನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ರಾಜನಾಥಸಿಂಗ್ ಆಗಮಿಸುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಮಠದ ವತಿಯಿಂದ ಪ್ರತಿಬಾರಿಯಂತೆ ಈ ವರ್ಷವೂ ಗುರುವಂದನಾ ಕಾರ್ಯಕ್ರಮ ಜರುಗುತ್ತಿದೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಸಾರಿಗೆ ಮಂತ್ರಿಯಾಗಿದ್ದ ರಾಜನಾಥಸಿಂಗ್ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುವರ್ಣ ಚತುಸ್ಪಥ ರಸ್ತೆಗಳನ್ನು ನಿರ್ಮಿಸುವ ಮೂಲಕ ದೇಶದ ರಾಜಧಾನಿಗೆ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದರು ಎಂದರು.
ಅಂತಹವರು ಲಿಂಗೈಕ್ಯ ಸಿದ್ದಗಂಗಾ ಶ್ರೀಗಳ ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ಇಡೀ ದೇಶವೇ ಸಂತೋಷ ಪಡುವ ವಿಚಾರವಾಗಿದೆ ಎಂದರು. ಈ ಹಿಂದೆ ಡಾ. ಶಿವಕುಮಾರ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಬರುವವರಿದ್ದರು. ಆದರೆ ಅದೇ ದಿನ ಮಹಾರಾಷ್ಟ್ರದಲ್ಲಿ ಒಂದು ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರಣ, ಬೇರೊಂದು ದಿನ ನಿಗದಿಗೆ ಕೋರಿದ್ದರು. ಆದರೆ ಬೇರೆ ದಿನಗಳಲ್ಲಿ ಮಠದಲ್ಲಿ ಬೇಸಿಗೆ ರಜೆಯಿಂದ ವಿದ್ಯಾರ್ಥಿಗಳು ಇಲ್ಲದ ಕಾರಣ ಕಾರ್ಯಕ್ರಮ ಮುಂದೂಡಲು ಹಾಲಿ ಮಠಾಧ್ಯಕ್ಷರು ಒಪ್ಪದ ಕಾರಣ, ರಾಜನಾಥಸಿಂಗ್ ಆಗಮಿಸುತ್ತಿದ್ದಾರೆ.ಅಧಿವೇಶನ ಇರುವ ಕಾರಣ ನಾನು ಹೆಚ್ಚು ಕಾಲ ಜನರ ನಡುವೆ ಓಡಾಡಲು ಸಾಧ್ಯವಾಗುತ್ತಿಲ್ಲ. ಏಪ್ರಿಲ್ 4ಕ್ಕೆ ಅಧಿವೇಶನ ಮುಗಿದ ನಂತರ, 6ನೇ ತಾರೀಖು ಕಾವೇರಿ ವಿಚಾರವಾಗಿ ಆದಿಚುಂಚನಗಿರಿ ಸ್ವಾಮಿಜಿಗಳು ಕರೆದಿರುವ ಸಭೆಯಲ್ಲಿ ಭಾಗವಹಿಸಲಿದ್ದೇನೆ. ಏಪ್ರಿಲ್ 8ಕ್ಕೆ ತುಮಕೂರಿನಲ್ಲಿ ದಿಶಾ ಮೀಟಿಂಗ್ ಇದೆ. ಏ.9-10ರಂದು ಎರಡು ದಿನಗಳ ಕಾಲ ಕರಾವಳಿ ಪ್ರದೇಶದಲ್ಲಿ ಪ್ರವಾಸ ಮಾಡಿ, ರೈಲ್ವೆ ಇಲಾಖೆಗೆ ಸಂಬಂಧಿಸಿದ ಹಲವಾರು ಮನವಿಗಳಿಗೆ ಸ್ಪಂದಿಸಿ, ಅಧಿಕಾರಿಗಳ ಜೊತೆಗೆ ಕೆಲಸ ಮಾಡಲಿದ್ದೇನೆ ಎಂದರು.
ಕಳೆದ ವರ್ಷ ಘೋಷಣೆಯಾಗಿದ್ದ ರೈಲ್ವೆ ಅಂಡರ್ ಬ್ರಿಡ್ಜ್ ಗಳಲ್ಲಿ ಕೆಲವು ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಶೀಘ್ರದಲ್ಲಿಯೇ ತುಮಕೂರು ನಗರದ ಗೋಕುಲ ಬಡಾವಣೆ, ಬಟವಾಡಿ 80 ಅಡಿ ರಸ್ತೆ, ಮೈದಾಳ, ತಿಪಟೂರಿನ ಶಾರದಾ ನಗರದ ಅಂಡರ್ ಪಾಸ್‌ಗಳ ನಿಮಾರ್ಣಕ್ಕೆ ವರ್ಕ್ ಆರ್ಡರ್ ನೀಡಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಕ್ಯಾತ್ಸಂದ್ರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ಲೇ ಓವರ್ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ವಿ.ಸೋಮಣ್ಣ ನುಡಿದರು.