ಧಾರವಾಡ:
ತಾಲೂಕಿನ ರಾಮಾಪುರ ಬಳಿ ಮಂಗಳವಾರ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತ ದೇಹವು ಬೈಲಹೊಂಗಲದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಪುತ್ರ ರಾಜು ಬೋಳಶೆಟ್ಟಿ ಎಂಬುದು ಖಚಿತವಾಗಿದ್ದು, ಈ ಕೊಲೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಗ್ರಾಮೀಣ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರನ್ನು ಬಂಧಿಸಲಾಗಿದೆ.ತಾಲೂಕಿನ ರಾಮಾಪುರ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ವ್ಯಾಗನಾರ್ ಕಾರು ಹಾಗೂ ಅದರಲ್ಲಿ ಓರ್ವ ವ್ಯಕ್ತಿ ಸುಟ್ಟು ಕರಕಲಾಗಿದ್ದರು. ಈ ಘಟನೆ ಸುತ್ತಲಿನ ಪ್ರದೇಶದ ಜನರ ಆತಂಕಕ್ಕೆ ಕಾರಣವಾಗಿತ್ತು. ಪೊಲೀಸರು ತಕ್ಷಣ ಕಾರ್ ನಂಬರ್ ಜಾಡು ಹಿಡಿದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದ ರಾಜು ಬೋಳಶೆಟ್ಟಿ ಎಂಬುದನ್ನು ಪತ್ತೆ ಹಚ್ಚಿದರು. ಆದರೆ, ಶವ ಸಂಪೂರ್ಣವಾಗಿ ಸುಟ್ಟಿದ್ದರಿಂದ ಡಿಎನ್‌ಎ ಪರೀಕ್ಷೆ ನಂತರವೇ ಬುಧವಾರ ಖಚಿತಪಡಿಸಿದರು.
ಮಹಿಳೆಯೇ ಕೊಲೆಗೆ ಕಾರಣ?:ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದ ಮಹಿಳೆಯೊಂದಿಗೆ ರಾಜು ಹಣಕಾಸಿನ ವಿಚಾರವಾಗಿ ಜಗಳ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪೊಲೀಸರು ತನಿಖೆ ಶುರು ಮಾಡಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ, ಆ ಗ್ರಾಮದ ಮಹಿಳೆ ಹಾಗೂ ಆಕೆಯ ಮಗ ಮತ್ತು ಆಕೆಯ ಪ್ರಿಯಕರ ಸೇರಿ ಈ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕೊಲೆ ನಡೆದಿದ್ದು ಹೀಗೆ:
ಮಾ. 23ರ ಸಂಜೆ ಮಹಿಳೆಯನ್ನು ರಾಜು ತಮ್ಮ ಗ್ರಾಮದ ಹೊಲಕ್ಕೆ ಕರೆಯಿಸಿಕೊಂಡಿದ್ದರು. ಈ ವೇಳೆ ಕೆಲ ಕಾಲ ಇಬ್ಬರೂ ಜೊತೆಯಾಗಿದ್ದು, ನಂತರದಲ್ಲಿ ಅಲ್ಲಿಗೆ ಬಂದಿದ್ದ ಆಕೆಯ ಮಗ ಹಾಗೂ ಪ್ರಿಯಕರ ಸಲಿಕೆಯಿಂದ ರಾಜುನ ತಲೆಗೆ ಹೊಡೆದು ಕೊಂದು ಹಾಕಿದ್ದಾರೆ. ಬಳಿಕ ಶವವನ್ನು ಅಲ್ಲಿಂದ ಸೋಮವಾರ ರಾತ್ರಿಯೇ ತಾಲೂಕಿನ ರಾಮಾಪುರ ಗ್ರಾಮದ ಬಳಿಯ ಅರಣ್ಯ ಪ್ರದೇಶಕ್ಕೆ ಆತನದ್ದೇ ಕಾರಿನಲ್ಲಿ ತೆಗೆದುಕೊಂಡು ಬರುವಾಗ ಹತ್ತು ಲೀಟರ್ ಪೆಟ್ರೋಲ್ ತಂದಿದ್ದಾರೆ. ರಾತ್ರಿಯೇ ಬಂದು ಶವ ಹಾಗೂ ಕಾರಿನ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಬಳಿಕ ತಮ್ಮೊಂದಿಗೆ ತಂದಿದ್ದ ಕಾರಿನೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಈ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಘಟನೆಗೆ ಇರಬಹುದಾದ ಮತ್ತಷ್ಟು ಕಾರಣಗಳನ್ನು ಹುಡುಕಲಾಗುತ್ತಿದೆ. ಅಲ್ಲದೇ ಮತ್ತೊಬ್ಬ ಆರೋಪಿ ತಲೆ ಮರೆಯಿಸಿಕೊಂಡಿದ್ದು, ಆತನಿಗೂ ತಲಾಶ್ ನಡೆದಿದೆ. ಪ್ರಕರಣ ಬಗ್ಗೆ ಸ್ಪಷ್ಟ ಮಾಹಿತಿಯನ್ನು ತನಿಖೆ ಪೂರ್ಣಗೊಳಿಸಿದ ನಂತರ ಬಹಿರಂಗಗೊಳಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾಧ್ಯಮಗಳಿಗೆ ತಿಳಿಸಿದರು.ಈ ಮಧ್ಯೆ ರಾಜು ಬೋಳಶೆಟ್ಟಿಗೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರುವ ಬಗ್ಗೆಯೂ ಅನುಮಾನಗಳಿವೆ. ಈ ವಿಚಾರವಾಗಿಯೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಒಟ್ಟಿನಲ್ಲಿ ಮಾಜಿ ಶಾಸಕರೊಬ್ಬರ ಮಗ ಈ ರೀತಿಯಾಗಿ ಹತ್ಯೆಯಾಗಿದ್ದು ಅಚ್ಚರಿಗೊಳಿಸಿದ್ದಂತೂ ಸತ್ಯ.