ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹೊರವಲಯದ ಸ್ಥಳೀಯ ಸಂಸ್ಥೆಗಳು, ಗ್ರಾಪಂಗಳನ್ನು ಸೇರಿಸಿಕೊಂಡು ಮೈಸೂರು ಬೃಹತ್ ನಗರ ಪಾಲಿಕೆಯನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಭರವಸೆ ನೀಡಿದರು.ವಿಜಯನಗರ 3ನೇ ಹಂತದ ಸಿ ಬ್ಲಾಕ್ ಉದ್ಯಾನವನದಲ್ಲಿ ವಾರ್ಡ್ ನಂಬರ್ 8 ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರ ದೊಡ್ಡದಾದ ಮತ್ತು ವಿಶಾಲವಾಗಿದೆ. ಯಾವುದೇ ಕಡೆ ನಿಂತು ನೋಡಿದರೂ 50 ಕಿ.ಮೀ ತನಕ ವಿಸ್ತರಿಸಿಕೊಂಡಿದೆ. ಹೀಗಾಗಿ, ಅಭಿವೃದ್ಧಿ ಪಡಿಸುವುದು ದೊಡ್ಡ ಸವಾಲಾಗಿದೆ ಎಂದರು.
ಮುಡಾದವರು ಪ್ಲಾನ್ ಗೆ ಅನುಮೋದನೆ ನೀಡಿ ಎಲ್ಲಾ ರೀತಿಯ ಶುಲ್ಕಗಳನ್ನು ಕಟ್ಟಿಸಿಕೊಂಡರೂ ಯಾವುದೇ ಅಭಿವೃದ್ಧಿಪಡಿಸಿಲ್ಲ. ವಿಜಯನಗರ 3ನೇ ಹಂತ ಪಾಲಿಕೆಗೆ ಅಧಿಕೃತವಾಗಿ ಹಸ್ತಾಂತರವಾಗದೆ ಇದ್ದರೂ ಹೇಗೋ ಅನುಸರಿಸಿಕೊಂಡು ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.ಕುಡಿಯುವ ನೀರನ್ನು ಒದಗಿಸಲು 650 ಕೋಟಿ ರೂ. ವೆಚ್ಚದಲ್ಲಿ ಹಳೆಯ ಉಂಡುವಾಡಿ ಯೋಜನೆ ಆರಂಭಿಸಲಾಗಿದ್ದು, 2025ರ ಅಂತ್ಯಕ್ಕೆ ನೀರು ಕೊಡುವ ಗುರಿ ಹೊಂದಲಾಗಿದೆ. ಉದ್ಯಾನವನವನ್ನು ಅಭಿವೃದ್ಧಿಪಡಿಸುವ ಜೊತೆಗೆ ಚರಂಡಿ, ಒಳಚರಂಡಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ ಎಂದರು.
ವಿಜಯನಗರ 4ನೇ ಹಂತವನ್ನು ಬೋಗಾದಿ ಪಟ್ಟಣ ಪಂಚಾಯಿತಿಗೆ ಸೇರಿಸಿದಂತೆ ಅನೇಕ ಬಡಾವಣೆಗಳನ್ನು ಬೇರೆ ಬೇರೆ ಪಟ್ಟಣ ಪಂಚಾಯಿತಿಗೆ ಸೇರಿಸಲಾಗಿದೆ. ಪಾರ್ಕ್ ಅಭಿವೃದ್ಧಿ ಮಾಡುವುದರ ಜೊತೆಗೆ ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಮನೆ ಶುದ್ಧವಾಗಿದ್ದರೆ ಬೀದಿ ಶುದ್ಧವಾಗಿರುತ್ತದೆ. ಹೀಗಾಗಿ, ಕಸ ಸಂಗ್ರಹಣೆಗೂ ಬೇಕಾದ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.ನಾವೆಲ್ಲರೂ ಕನ್ನಡಿಗರೇ ಆಗಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಗಟ್ಟಿ ಧ್ವನಿಯಿಂದ ಮಾತೃಭಾಷೆಗೆ ಪ್ರಾತಿನಿಧ್ಯ ಕೊಡುತ್ತಾರೆ. ಆದರೆ, ಕನ್ನಡಿಗರು ಸಹೃದಯಿಗರು, ವಿಶಾಲ ಮನೋಭಾವದಿಂದ ಹೊಂದಿದವರು. ಕರ್ನಾಟಕದಲ್ಲಿ ನೆಲೆಸಿರುವವರಿಗೆ ಕನ್ನಡ ಕಲಿಸುವ ಮತ್ತು ಮಾತನಾಡುವ ಕೆಲಸ ಮಾಡಬೇಕು ಎಂದರು.
ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡವನ್ನು ಮರೆಯುತ್ತೇವೆ. ಕನ್ನಡದಲ್ಲಿ ಮಾತನಾಡುತ್ತೇವೆ, ಕನ್ನಡದಲ್ಲೇ ವ್ಯವಹಾರ ಮಾಡಬೇಕು. ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಕಲಿಸಬೇಕು. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಹೊಂದುವಂತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ರಾಜೀವ್ ನಗರ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಎಸ್. ಬಾಲಸುಬ್ರಹ್ಮಣ್ಯಂ ಮುಖ್ಯ ಭಾಷಣ ಮಾಡಿದರು.
ವಾರ್ಡ್ ನಂ.8 ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಎಸ್. ಮಂಜಪ್ಪ, ಕಾರ್ಯದರ್ಶಿ ಚೈತನ್ಯಕುಮಾರ್, ಖಜಾಂಚಿ ಟಿ.ಟಿ. ರಮೇಶ್, ಸಂಘಟನಾ ಕಾರ್ಯದರ್ಶಿ ಡಾ. ಮೋಹನ್ ಕುಮಾರ್, ನಿರ್ದೇಶಕರಾದ ಡಾ. ಮಹದೇವಯ್ಯ, ಡಾ.ಬಿ.ಪಿ. ಪರಶಿವಮೂರ್ತಿ, ಕೆ.ಸಿ. ಜವರೇಗೌಡ, ಕೆ. ನಂಜುಂಡಯ್ಯ, ಶಿವಕುಮಾರ್, ಆರ್.ಎನ್. ಶ್ರೀನಿವಾಸಮೂರ್ತಿ, ಸುವರ್ಣಾ ರೆಡ್ಡಿ, ವಿಜಯಕುಮಾರಿ, ಲತಾ ತಂಗಮ್ಮ ಇದ್ದರು.