ಜಾನಪದ ಕಲೆಯ ವಿಶಿಷ್ಟ ಪ್ರಕಾರವಾದ ತೊಗಲುಗೊಂಬೆ ಕಲೆಯ ಉಳಿವು, ಬೆಳವಣಿಗೆ ಹಾಗೂ ಪ್ರದರ್ಶನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಬಳ್ಳಾರಿಯ ಹಿರಿಯ ತೊಗಲುಗೊಂಬೆ ಕಲಾವಿದೆ ಹುಲಿಗೆಮ್ಮ ಅವರು 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹುಲಿಗೆಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಬಳ್ಳಾರಿಯ ಜಾನಪದ ಕಲೆಗೆ ರಾಜ್ಯಮಟ್ಟದ ಮನ್ನಣೆ

ಕನ್ನಡಪ್ರಭವಾರ್ತೆ ಬಳ್ಳಾರಿ

ಜಾನಪದ ಕಲೆಯ ವಿಶಿಷ್ಟ ಪ್ರಕಾರವಾದ ತೊಗಲುಗೊಂಬೆ ಕಲೆಯ ಉಳಿವು, ಬೆಳವಣಿಗೆ ಹಾಗೂ ಪ್ರದರ್ಶನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಬಳ್ಳಾರಿಯ ಹಿರಿಯ ತೊಗಲುಗೊಂಬೆ ಕಲಾವಿದೆ ಹುಲಿಗೆಮ್ಮ ಅವರು 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹುಲಿಗೆಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ್, ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮ್ಮದ್, ಸಚಿವ ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುಶ್ರೀ, ಇಲಾಖೆಯ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ತೊಗಲುಗೊಂಬೆ ಕಲೆಯ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಜನರಿಗೆ ಪರಿಚಯಿಸುವಲ್ಲಿ ಹಾಗೂ ಈ ಅಪರೂಪದ ಜಾನಪದ ಕಲೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವಲ್ಲಿ ಅವರು ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ತೊಗಲುಗೊಂಬೆ ಪ್ರದರ್ಶನವು ಕರ್ನಾಟಕದ ಸಾಂಪ್ರದಾಯಿಕ ಜಾನಪದ ಕಲೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಚರ್ಮದಿಂದ ರೂಪಿಸಿದ ಗೊಂಬೆಗಳಿಗೆ ಬಣ್ಣ ಹಚ್ಚಿ, ಬೆಳಕಿನ ನೆರಳಿನ ಮೂಲಕ ಪರದೆಯ ಮೇಲೆ ಪಾತ್ರಗಳನ್ನು ಜೀವಂತಗೊಳಿಸುವ ಈ ಕಲೆಯಲ್ಲಿ ಕಲಾವಿದರ ಸೃಜನಶೀಲತೆ, ನಿರಂತರ ಪರಿಶ್ರಮ ಹಾಗೂ ಕಲಾ ನೈಪುಣ್ಯ ಅಡಗಿದೆ. ಇಂತಹ ಕಲೆಯನ್ನು ಹಲವು ವರ್ಷಗಳಿಂದ ಪ್ರದರ್ಶಿಸುತ್ತಾ ಬಂದಿರುವ ಹುಲಿಗೆಮ್ಮ ಅವರ ಸಾಧನೆಗೆ ರಾಜ್ಯಮಟ್ಟದ ಗೌರವ ಲಭಿಸಿರುವುದು ಬಳ್ಳಾರಿ ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ.