ಜಯಲಕ್ಷ್ಮಿ ಪಾಟೀಲ ಅವರಿಗೆ ಇದೀಗ 73 ವರ್ಷ. ಇವರ ತಾಯಿ ರಾಧಾಬಾಯಿ ಹಾಗೂ ತಂದೆ ಚನ್ನಬಸವರಾಜು ಇಬ್ಬರು ರಂಗಭೂಮಿ ಕಲಾವಿದರು. ತಾಯಿ ರಾಧಾಬಾಯಿ ಚಿತ್ರಾಂಗದಾ ನಾಟಕದಲ್ಲಿ ಅಭಿನಯಿಸುತ್ತಿದ್ದರು.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಚಿತ್ರಾಂಗದಾ ನಾಟಕದಲ್ಲಿ ತೊಟ್ಟಿಲಲ್ಲಿ ಹಾಕಲು ಬೊಂಬೆ ಸಿಗದ ಕಾರಣ ಕಲಾವಿದೆ ತನ್ನ ಮೂರು ತಿಂಗಳು ಮಗುವನ್ನೇ ತೊಟ್ಟಲಲ್ಲಿ ತೂಗಿ ಆ ದೃಶ್ಯ ಮುಗಿಸಿದ್ದಾರೆ. ಆ ದೃಶ್ಯದಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡ ಆ ಮೂರು ತಿಂಗಳ ಮಗುವಿಗೆ ವೃತ್ತಿ ರಂಗಭೂಮಿಯೇ ಬದುಕಾಯಿತು. ದೊಡ್ಡ ಕಲಾವಿದೆಯಾಗಿ ಬೆಳೆದು ಸರಿಸುಮಾರು 10 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ನಟಿ ಸೈ ಎನಿಸಿಕೊಂಡಿತು.
ಇದು ಹುಬ್ಬಳ್ಳಿ ಮೂಲದ ರಂಗಭೂಮಿ ಕಲಾವಿದೆ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಜಯಲಕ್ಷ್ಮಿ ಪಾಟೀಲ ಅವರ ಕುರಿತು ಸಂಕ್ಷಿಪ್ತ ಪರಿಚಯ.ಜಯಲಕ್ಷ್ಮಿ ಪಾಟೀಲ ಅವರಿಗೆ ಇದೀಗ 73 ವರ್ಷ. ಇವರ ತಾಯಿ ರಾಧಾಬಾಯಿ ಹಾಗೂ ತಂದೆ ಚನ್ನಬಸವರಾಜು ಇಬ್ಬರು ರಂಗಭೂಮಿ ಕಲಾವಿದರು. ತಾಯಿ ರಾಧಾಬಾಯಿ ಚಿತ್ರಾಂಗದಾ ನಾಟಕದಲ್ಲಿ ಅಭಿನಯಿಸುತ್ತಿದ್ದರು. ಆಗ ಜಯಲಕ್ಷ್ಮಿ 3 ತಿಂಗಳು ಮಗು. ನಾಟಕದಲ್ಲಿ ತೊಟ್ಟಿಲು ತೂಗುವ ದೃಶ್ಯವಿತ್ತು. ಅದರಲ್ಲಿ ಇಡಬೇಕಾದ ಬೊಂಬೆ ಇರಲಿಲ್ಲವಂತೆ. ಅದೇ ವೇಳೆ ತನ್ನದೇ ಮೂರು ತಿಂಗಳು ಮಗುವನ್ನು ತಂದು ತೂಗಿದ್ದರಂತೆ ತಾಯಿ ರಾಧಾಬಾಯಿ. ಆ ಘಳಿಗೆ ಬಾಲನಟಿಯಾಗಿ ಮಿಂಚಿದವರು ಜಯಲಕ್ಷ್ಮಿ. ಮುಂದೆ ಅದೇ ಅವರ ವೃತ್ತಿಯಾಯಿತು. ಹತ್ತಾರು ನಾಟಕ ಕಂಪನಿಗಳಲ್ಲಿ ಎಲ್ಲ ಬಗೆಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಇವರ ನಾಟಕಗಳು ಪ್ರದರ್ಶನಗೊಂಡಿವೆ. ತಮ್ಮ ವೃತ್ತಿ ಜೀವನದಲ್ಲಿ ಸರಿಸುಮಾರು 10 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಕಲಾವಿದೆಯಾಗಿ ನಟಿಸಿದವರು.ಬರೀ ನಾಟಕಕ್ಕಷ್ಟೇ ಸೀಮಿತವಾಗದೇ ಚಲನಚಿತ್ರಗಳಲ್ಲೂ ಪೋಷಕ ನಟಿಯಾಗಿ ನಟಿಸಿದವರು ಜಯಲಕ್ಷ್ಮಿ. ಗುಣ ನೋಡಿ ಹೆಣ್ಣು ಕೊಡು, ಸಿಂಹಘರ್ಜನೆ, ಕಣ್ಣು ತೆರೆಸಿದ ಹೆಣ್ಣು, ಬೆತ್ತಲೆ ಸೇವೆ, ಕಿಲಾಡಿ ಅಳಿಯ, ರಾಜಾ ನರಸಿಂಹ, ಸಾಹುಕಾರ... ಹೀಗೆ ಹತ್ತಾರು ಚಿತ್ರಗಳಲ್ಲಿ ನಟಿಸಿದವರು. ಜತೆಗೆ ಪಾಪಾ ಪಾಂಡು, ಬದುಕು, ವಾತ್ಸಲ್ಯ, ರಾಮಾಚಾರಿ, ಕಾದಂಬರಿ, ಕಲ್ಯಾಣಿ , ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ ಹೀಗೆ ಹತ್ತಾರು ಧಾರಾವಾಹಿಗಳಲ್ಲೂ ನಟಿಸಿ ಜನಮನ ಗೆದ್ದಿದ್ದಾರೆ.
ಬರೀ ಐದನೆಯ ತರಗತಿ ವರೆಗೆ ಕಲಿತಿರುವ ಜಯಲಕ್ಷ್ಮಿ ಪಾಟೀಲ, ನಾಟಕಗಳನ್ನು ರಚಿಸಿದವರು. ಶ್ರೀ ಓಂ ನಮೋ ಗುರು ಪುಟ್ಟರಾಜ, ಹಡೆದವ್ವ ಬರೆದ ಹಣೆ ಬರಹ, ಚಿತ್ರನಟಿ ಕಲ್ಪನಾ ಅವರ ಜೀವನ ಕುರಿತಾದ ಮಿನುಗು ತಾರೆ ಕಲ್ಪನಾ ಹೀಗೆ ಮೂರು ನಾಟಕಗಳನ್ನು ರಚಿಸಿದ್ದಾರೆ. ಇಳಿವಯಸ್ಸಿನಲ್ಲೂ ನಟನೆ ಬಗ್ಗೆ ಬಲು ಅಭಿರುಚಿ. ಕಳೆದ 6 ತಿಂಗಳ ಹಿಂದಿನ ವರೆಗೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರಂತೆ. ನಟನೆ ಬಿಟ್ಟು ಬರೀ ಆರು ತಿಂಗಳಾಗಿದೆ ಅಷ್ಟೇ. ನಟಿಸುವ ಆಸೆ; ಆದರೆ ವಯಸ್ಸು ಸಾಥ್ ನೀಡುತ್ತಿಲ್ಲ ಎಂಬ ಕೊರಗು ಅವರದು.ಏನೇ ಆದರೂ ರಂಗಭೂಮಿ, ಆಕಾಶವಾಣಿ, ಚಿತ್ರನಟಿ, ಕಿರುತೆರೆ ನಟಿಯಾಗಿ ಮಿಂಚುವ ಮೂಲಕ ಕಲಾವಿದೆಯಾಗಿ ತಮ್ಮದೇ ಆದ ಕೊಡುಗೆ ನೀಡಿರುವ ಜಯಲಕ್ಷ್ಮಿ ಅವರಿಗೆ ಈ ಸಲ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ.ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಬಹಳ ಖುಷಿಯಾಗಿದೆ. ಇಳಿವಯಸ್ಸಿನಲ್ಲಾದರೂ ನನ್ನ ಕಲೆಗೆ ಗುರುತಿಸಿ ಪ್ರಶಸ್ತಿ ಕೊಟ್ಟಿದ್ದಾರೆ. ಈ ಪ್ರಶಸ್ತಿ ಜೀವಿಸುವ ಆಸೆ ಹೆಚ್ಚಿಸಿದೆ.
ಜಯಲಕ್ಷ್ಮಿ ಪಾಟೀಲ, ನಟಿ