ರಾಮನಗರ: ರಾಜ್ಯ ಸರ್ಕಾರ ಶುಕ್ರವಾರ ಪ್ರಕಟಿಸಿರುವ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ ನಾಲ್ವರು ಸಾಧಕರಿಗೆ ಲಭಿಸಿದೆ
ರಾಮನಗರ: ರಾಜ್ಯ ಸರ್ಕಾರ ಶುಕ್ರವಾರ ಪ್ರಕಟಿಸಿರುವ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ ನಾಲ್ವರು ಸಾಧಕರಿಗೆ ಲಭಿಸಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಒಬ್ಬರು ಅಥವಾ ಇಬ್ಬರು ಸಾಧಕರಿಗೆ ಮಾತ್ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗುತ್ತಿತ್ತು. ಆದರೆ, ಈ ಬಾರಿ ಕನಕಪುರ ಮತ್ತು ಮಾಗಡಿ ತಾಲೂಕಿನ ತಲಾ ಇಬ್ಬರು ಸೇರಿದಂತೆ ಜಿಲ್ಲೆಯ ನಾಲ್ವರು ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.ಜಾನಪದ ಕ್ಷೇತ್ರದಿಂದ ಮಾಗಡಿ ಮೂಲದ ಎ.ಆರ್.ಸತ್ಯನಾರಾಯಣ, ರಂಗಭೂಮಿ ಕ್ಷೇತ್ರದಲ್ಲಿ ಕನಕಪುರದ ಎಚ್.ವಿ.ಪುಟ್ಟವೀರಪ್ಪ, ಕೃಷಿ ಕ್ಷೇತ್ರದಿಂದ ಕನಕಪುರದ ಎಚ್.ಕೆ.ಶ್ರೀಕಂಠು ಹಾಗೂ ಸಂಕೀರ್ಣ (ವಾಸ್ತುಶಾಸ್ತ್ರ) ಕ್ಷೇತ್ರದಿಂದ ಮಾಗಡಿ ಮೂಲದ ಬಿ.ಪಿ.ಆರಾಧ್ಯ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.
ಪ್ರಶಸ್ತಿ ಪುರಸ್ಕೃತರಾದ ನಾಲ್ವರಿಗೂ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ , ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ಅಭಿನಂದನೆ ಸಲ್ಲಿಸಿದ್ದಾರೆ.ಬಾಕ್ಸ್ ...........
ಎ.ಆರ್.ಸತ್ಯನಾರಾಯಣ ಪರಿಚಯ:ಮೂಲತಃ ಮಾಗಡಿ ತಾಲೂಕಿನ ಅಗಲಕೋಟೆ ಗ್ರಾಮದವರಾದ ಎ.ಆರ್. ಸತ್ಯನಾರಾಯಣ ಸೂತ್ರದ ಬೊಂಬೆಯಾಟ ಕಲಾವಿದರು.
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಮ್ಮ ನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಬೊಂಬೆಯಾಟದ ಕಲೆಯನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ಅದ್ಭುತ ಕಲಾಪ್ರತಿಭೆ ಹಾಗೂ ನಿರಂತರ ಕಲಾಸೇವೆಯ ಮೂಲಕ ಕರ್ನಾಟಕ ಮಾತ್ರವಲ್ಲದೆ, ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ಬೊಂಬೆಯಾಟದ ಪ್ರದರ್ಶನಗಳನ್ನು ನೀಡಿ ಕನ್ನಡ ನಾಡಿನ ಕಲಾ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ.ಬೊಂಬೆಗಳ್ನು ಆಡಿಸುವುದಲ್ಲದೆ ಪ್ರಸಂಗಗಳಿಗೆ ಸೂಕ್ತವಾದ ಬೊಂಬೆಗಳನ್ನು ಸ್ವತಃ ಮಾಡಿಕೊಳ್ಳುವುದರಲ್ಲಿಯುವ ಶುದ್ಧ ಹಸ್ತರು. ಇವರ ಬಳಿ ಇರುವ ಬೊಂಬೆಗಳು ಕರ್ನಾಟಕದಲ್ಲಿರುವ ಎಲ್ಲಾ ಬೊಂಬೆಗಳ ಪೈಕಿ ಅತ್ಯಂತ ಪ್ರಾಚೀನವಾದ ಹಾಗೂ ಸುಂದರವಾಗಿವೆ.
ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕಲಾಪ್ರಕಾರಗಳಿಗೆ ಹೊಸ ಜೀವ ತುಂಬಿ, ನಮ್ಮ ನೆಲದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಅವರ ಕೊಡುಗೆ ಅನನ್ಯವಾದುದು. ಸತ್ಯನಾರಾಯಣರವರ ದಶಕಗಳ ಸುದೀರ್ಘ ಕಲಾಸಾಧನೆ ಮತ್ತು ನಿಸ್ವಾರ್ಥ ಸೇವೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.ಬಾಕ್ಸ್ ............
ಡಾ.ಎಚ್.ವಿ.ಪುಟ್ಟವೀರಪ್ಪ ಪರಿಚಯ :ರಂಗಭೂಮಿ ಹಿರಿಯ ಕಲಾವಿದರಾದ ಡಾ.ಎಚ್.ವಿ.ಪುಟ್ಟವೀರಪ್ಪ ಮೂಲತಃ ಕನಕಪುರ ತಾಲೂಕು ಹುಣಸನ ಕೋಡಿಹಳ್ಳಿ ಗ್ರಾಮದವರು.
73 ವರ್ಷ ವಯಸ್ಸಿನ ಪುಟ್ಟವೀರಪ್ಪ ಬಾಲ್ಯದಿಂದಲೇ ಕಲಾ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದು, ಸುಮಾರು 22ನೇ ವಯಸ್ಸಿನಿಂದಲೇ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇಷ್ಟು ದೀರ್ಘಕಾಲದ ಕಲಾ ಸೇವೆಯ ಅವಧಿಯಲ್ಲಿ ಹಲವಾರು ನಾಟಕಗಳು, ಹರಿಕಥೆಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮೊಳಗಿನ ಕಲಾ ಪ್ರತಿಭೆ ಪ್ರದರ್ಶಿಸಿದ್ದಾರೆ.ರಂಗಭೂಮಿ ಕ್ಷೇತ್ರದಲ್ಲಿ ಹಾರ್ಮೋನಿಯಂ ವಾದಕರಾಗಿ, ಹಾಡುಗಾರರಾಗಿ, ಹಾರ್ಮೋನಿಯಂ ಮಾಸ್ಟರ್ ಆಗಿ ಹಾಗೂ ಹರಿಕಥೆ ದಾಸರಾಗಿ ಸೇವೆ ಸಲ್ಲಿಸಿದ್ದಾರೆ. ಇದುವರೆಗೆ ಸುಮಾರು 286 ನಾಟಕಗಳು ಹಾಗೂ 802 ಹರಿಕಥಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪುಟ್ಟವೀರಪ್ಪ ಕಲಾ ಸೇವೆ ಸಲ್ಲಿಸಿದ್ದಾರೆ.
ಇದನ್ನು ಗುರುತಿಸಿ ಈಗಾಗಲೇ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಗಡಿನಾಡು ಕನ್ನಡಿಗ ಪ್ರಶಸ್ತಿ ಸೇರಿದಂತೆ ವಿವಿಧ ಗೌರವಗಳು ದೊರೆತಿವೆ. ಅಲ್ಲದೆ, ಗೌರವ ಡಾಕ್ಟರೇಟ್ ಸಂದಿದೆ. ಗ್ರಾಮೀಣ ಹಾಗೂ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಪುಟ್ಟವೀರಪ್ಪ, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಕನ್ನಡ ನಾಡು, ನುಡಿ, ಕಲೆ ಮತ್ತು ಸಂಸ್ಕೃತಿಯ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬಂದವರು.51 ವರ್ಷಗಳ ಸುದೀರ್ಘ ರಂಗಭೂಮಿ ಮತ್ತು ಕನ್ನಡ ಕಲಾ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರವು "ಕನ್ನಡ ರಾಜ್ಯೋತ್ಸವ ಪ್ರಶಸ್ತಿ " ಗೆ ಪುಟ್ಟವೀರಪ್ಪ ಅವರನ್ನು ಆಯ್ಕೆ ಮಾಡಿದೆ.
ಬಾಕ್ಸ್............ಬಿ.ಪಿ.ಆರಾಧ್ಯ ಪರಿಚಯ :
ಮಾಗಡಿ ತಾಲೂಕು ಕುದೂರು ಹೋಬಳಿ ಬಿಸ್ಕೂರು ಗ್ರಾಮದ ಡಾ.ಬಿ.ಪಿ.ಆರಾಧ್ಯ ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರ ಹಾಗೂ ಸಮಾಜ ಸೇವೆಯಲ್ಲಿ ವಿಶಿಷ್ಟ ಸಾಧನೆ ಮಾಡಿದವರು.ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಪರಿಣತಿ ಹೊಂದಿರುವ ಆರಾಧ್ಯರವರು, ಒಂದು ಲಕ್ಷಕ್ಕೂ ಅಧಿಕ ಜನರಿಗೆ ಜ್ಯೋತಿಷ್ಯ ಸಲಹೆ ಹಾಗೂ ಪರಿಹಾರೋಪಾಯಗಳನ್ನು ಸೂಚಿಸಿದ್ದು, ಸುಮಾರು 50ಕ್ಕೂ ಹೆಚ್ಚು ಶಾಸಕರಿಗೆ ಮಾರ್ಗದರ್ಶನ ನೀಡಿ ರಾಜಕೀಯ ವಲಯದಲ್ಲಿಯೂ ಗುರುತಿಸಿಕೊಂಡಿದ್ದಾರೆ.
ವಿಶೇಷ ಎಂದರೆ ಆರಾಧ್ಯರವರು ಮೊದಲಿನಿಂದಲೂ ಡಿ.ಕೆ.ಶಿವಕುಮಾರ್ ರವರು ಮುಖ್ಯಮಂತ್ರಿ ಆಗುತ್ತಾರೆಂದು ಭವಿಷ್ಯ ನುಡಿಯುತ್ತಲೇ ಬಂದಿದ್ದವರು.ಆಧ್ಯಾತ್ಮಿಕ ಚಿಂತನೆ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಸಮನ್ವಯಗೊಳಿಸುವ ಮೂಲಕ ಹಲವು ಸಮಾಜ ಮುಖಿ ಯೋಜನೆಗಳಿಗೆ ನೇತೃತ್ವ ವಹಿಸಿ, ಅವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಪ್ರಕೃತಿ ವಿಕೋಪದಂತಹ ವಿಪತ್ತುಗಳ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಸಂತ್ರಸ್ತ ಕುಟುಂಬಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.
ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರ ಹಾಗೂ ಸಮಾಜ ಸೇವೆಗೆ ನೀಡಿದ ಕೊಡುಗೆ ಗುರುತಿಸಿ 2018ರಲ್ಲಿ ಇಂಡಿಯನ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ವತಿಯಿಂದ ಗೌರವ ಡಾಕ್ಟರೇಟ್ ಪ್ರಾಪ್ತಿಯಾಗಿದೆ. 2025ರಲ್ಲಿ ಕರ್ನಾಟಕ ಸರ್ಕಾರ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ. ಇದೀಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.ಬಾಕ್ಸ್..........
ಎಚ್.ಕೆ.ಶ್ರೀಕಂಠು ಪರಿಚಯ :ಹೊನ್ನಗಾನಹಳ್ಳಿ ಕುನ್ನಮಾರಿಗೌಡ ಶ್ರೀಕಂಠು (ಎಚ್.ಕೆ.ಶ್ರೀಕಂಠು) ಮೂಲತಃ ಕನಕಪುರ ತಾಲೂಕು ಸಾತನೂರು ಹೋಬಳಿ ಹೊನ್ನಗಾನಹಳ್ಳಿ ಗ್ರಾಮದವರು.
ಜಿಕೆವಿಕೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಕಂಠು, ಕೃಷಿ ಉದ್ಯಮಿ, ಪ್ರಗತಿಪರ ರೈತ, ಶಿಕ್ಷಣ ಪ್ರೇಮಿ, ಸಮಾಜ ಸೇವಕರು ಹೌದು.ಕೃಷಿ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆದ ಬಳಿಕ ಉದ್ಯೋಗದ ಹಿಂದೆ ಹೋಗದೆ ಕೃಷಿಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ, ಕೃಷಿ ಕ್ಷೇತ್ರದಲ್ಲಿ ಸ್ವಂತ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ. ಅಲ್ಲದೆ, ಕನಕಪುರದ ರೂರಲ್ ಎಜುಕೇಷನಲ್ ಸೊಸೈಟಿ ಅಧ್ಯಕ್ಷರಾಗಿದ್ದಾರೆ.
ತೆಂಗು , ಮಾವು, ಅಡಿಕೆ ಸೇರಿದಂತೆ ವಿವಿಧ ಹಣ್ಣು ಮತ್ತು ತೋಟಗಾರಿಕಾ ಬೆಳೆಗಳಿಗೆ ನೈಜ ತಳಿಯ ಸಸಿಗಳು ದೊರೆಯುವುದು ರೈತರಿಗೆ ದೊಡ್ಡ ಸವಾಲಾಗಿತ್ತು. ಆಗ ಶ್ರೀಕಂಠುರವರು ಹೊನ್ನಗಾನಹಳ್ಳಿಯಲ್ಲಿ ನರ್ಸರಿ ಪ್ರಾರಂಭಿಸಿ, ಅದಕ್ಕೆ ಸೀ ಕೇ ಸೀಡ್ಸ್ ಅಂಡ್ ಸೀಡ್ಲಿಂಗ್ ಎಂದು ಹೆಸರಿಟ್ಟರು. ಹೈಬ್ರಿಡ್ ಬೀಜ ಉತ್ಪಾದನೆ ಉದ್ದೇಶದಿಂದ ಬಂಟನಾಳ ಗ್ರಾಮದಲ್ಲಿ ಜಮೀನು ಖರೀದಿಸಿ ಸಂಶೋಧನೆ ಮತ್ತು ಅಭಿವೃದ್ದಿ ಘಟಕ ಸ್ಥಾಪಿಸಿದರು.ಇಂಡಸ್ ಸೀಡ್ ಎಕ್ಸ್ ಪೋರ್ಟ್ ಹೆಸರಿನಲ್ಲಿ ವಿದೇಶಗಳಿಗೂ ಬೀಜಗಳನ್ನು ರಫ್ತು ಮಾಡಿದರು. ಈ ಎರಡೂ ಸಂಸ್ಥೆಗಳ ಮೂಲಕ ಅನೇಕ ಕೃಷಿ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸಿದರು.
ಆಧುನಿಕ ತಂತ್ರಜ್ಞಾನ ಆಧಾರಿತ ತೋಟಗಾರಿಕಾ ಕೃಷಿಗೆ ಆದ್ಯತೆ ನೀಡಿದ ಶ್ರೀಕಂಠು, ರೈತರು ದುಬಾರಿ ರಾಸಾಯನಿಕ ಕೀಟನಾಶಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ 1996ರಲ್ಲಿ ಬಯೋ ಪೆಸ್ಟ್ ಮ್ಯಾನೇಜ್ ಮೆಂಟ್ ಪ್ರೈ.ಲಿ. ಸಂಸ್ಥೆ ಸ್ಥಾಪಿಸಿದರು.ಗ್ರಾಮೀಣ ಮಹಿಳೆಯರು ಕೃಷಿ ಚಟುವಟಿಕೆಗಳ ಮೂಲಕ ಹೆಚ್ಚುವರಿ ಆದಾಯ ಗಳಿಸಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಕನಕಪುರದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟ ಎಂಬ ಸ್ವಸಹಾಯ ಸಂಘ ರಚಿಸಿದ್ದಾರೆ.ಈ ಒಕ್ಕೂಟದಲ್ಲಿ 7500ಕ್ಕೂ ಹೆಚ್ಚು ಮಹಿಳೆಯರು ಇದ್ದಾರೆ.
ಪಾಲಿ ಹೌಸ್ ಗಳಲ್ಲಿ ಹೂವಿನ ಕೃಷಿಯಲ್ಲು ತಮ್ಮನ್ನು ತೊಡಗಿಸಿರುವ ಶ್ರೀಕಂಠು, ಕೃಷಿ ಜಮೀನಿನಲ್ಲಿ ನೀರಿನ ಸಂರಕ್ಷಣೆ, ಉತ್ಪಾದಕತೆ ಹೆಚ್ಚಳ ಮತ್ತು ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ಹಲವಾರು ವಿನೂತನ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ವೀಕ್ಷಿಸಲು ವಿವಿಧ ಭಾಗಗಳಿಂದ ರೈತರು, ಕೃಷಿ ವಿವಿಯ ಬೋಧಕ ವರ್ದದವರು ಹಾಗೂ ವಿದ್ಯಾರ್ಥಿಗಳು ಭೇಟಿ ನೀಡುತ್ತಲೇ ಇರುತ್ತಾರೆ.ಕೃಷಿ ಕ್ಷೇತ್ರದ ಇತ್ತೀಚಿನ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿಂದ ಶ್ರೀಕಂಠುರವರು ವಿದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
30ಕೆಆರ್ ಎಂಎನ್ 5,6,7,8.ಜೆಪಿಜಿ5.ಎ.ಆರ್.ಸತ್ಯನಾರಾಯಣ
6.ಡಾ.ಎಚ್.ವಿ.ಪುಟ್ಟವೀರಪ್ಪ7.ಬಿ.ಪಿ.ಆರಾಧ್ಯ
8.ಎಚ್.ಕೆ.ಶ್ರೀಕಂಠು