ಮೂವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

| Published : Oct 31 2025, 01:45 AM IST

ಸಾರಾಂಶ

ಜಿಲ್ಲೆಯ ಮೂವರು ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ.ರಾಜೇಂದ್ರ ಚೆನ್ನಿ, ಜಾನಪದ ಕ್ಷೇತ್ರದಲ್ಲಿ ಬಿ.ಟಾಕಪ್ಪ ಕಣ್ಣೂರು ಹಾಗೂ ಸಮಾಜ ಸೇವೆ ಕ್ಷೇತ್ರದಿಂದ ತೀರ್ಥಹಳ್ಳಿ ಮಾಜಿ ಶಾಸಕ, ಹಿರಿಯ ರಾಜಕಾರಣಿ ಕೋಣಂದೂರು ಲಿಂಗಪ್ಪ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿವಮೊಗ್ಗ: ಜಿಲ್ಲೆಯ ಮೂವರು ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ.ರಾಜೇಂದ್ರ ಚೆನ್ನಿ, ಜಾನಪದ ಕ್ಷೇತ್ರದಲ್ಲಿ ಬಿ.ಟಾಕಪ್ಪ ಕಣ್ಣೂರು ಹಾಗೂ ಸಮಾಜ ಸೇವೆ ಕ್ಷೇತ್ರದಿಂದ ತೀರ್ಥಹಳ್ಳಿ ಮಾಜಿ ಶಾಸಕ, ಹಿರಿಯ ರಾಜಕಾರಣಿ ಕೋಣಂದೂರು ಲಿಂಗಪ್ಪ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರೊ.ರಾಜೇಂದ್ರ ಚೆನ್ನಿ:

ಪ್ರೊ.ರಾಜೇಂದ್ರ ಚೆನ್ನಿ ಅವರು ಪ್ರಾಧ್ಯಾಪಕರಾಗಿ, ಚಿಂತಕರಾಗಿ ಮತ್ತು ಬರಹಗಾರರಾಗಿ ಹೆಸರಾದವರು.

ರಾಜೇಂದ್ರ ಚೆನ್ನಿ ಅವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. ಇವರು 1955ರ ಅ. 21ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ ಪದವಿ ಹಾಗೂ ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದಿದ್ದಾರೆ.

ರಾಜೇಂದ್ರ ಚೆನ್ನಿ ಅವರು ಸಂಡೂರು, ಬೆಳಗಾವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.‍

ರಾಜೇಂದ್ರ ಚೆನ್ನಿ ಅವರು ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗಿಯಾದವರು. ಇವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ (2012), ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1987 ಮತ್ತು 2003), ಜಿಎಸ್‌ಎಸ್ ಪ್ರಶಸ್ತಿ (2009), ಬಿಎ ಶ್ರೀಧರ ಪ್ರಶಸ್ತಿ (2012), ವರ್ಧಮಾನ ಉದಯೋನ್ಮುಖ ಪ್ರಶಸ್ತಿ (1992), ಕಾವ್ಯಾನಂದ ಪ್ರಶಸ್ತಿ, ವಿ.ಎಂ.ಇನಾಂದಾರ್ ಪ್ರಶಸ್ತಿ, ದ.ರಾ. ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿವೆ.

ಕೋಣಂದೂರು ಲಿಂಗಪ್ಪ:

ವಿದ್ಯಾರ್ಥಿ ಜೀವನದಲ್ಲೇ ಮೈಸೂರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಕೋಣಂದೂರು ಲಿಂಗಪ್ಪ ಅವರು ಕನ್ನಡ ಯುವಜನ ಸಭಾ ಎಂಬ ಸಂಘಟನೆ ಸ್ಥಾಪಿಸಿ ಕನ್ನಡ ಚಳವಳಿಯಲ್ಲಿ ತೊಡಗಿದ್ದರು.

ದೇವರಾಜ ಅರಸು ಅವರ ಉಳುವವನೇ ಭೂಮಿಯ ಒಡೆಯ ಘೋಷವಾಕ್ಯದಡಿ ಭೂ ಸುಧಾರಣೆ ಪರ ಹೋರಾಟ ಮಾಡಿದ್ದರು. ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ್ದ ಇವರು ಅದಕ್ಕೂ ಮುನ್ನವೇ ಕಾಗೋಡು ತಿಮ್ಮಪ್ಪ, ಎಸ್.ಬಂಗಾರಪ್ಪ ಅವರ ಜತೆಗೂಡಿ ಗೇಣಿದಾರರ ಪರ ಹೋರಾಟದಲ್ಲಿ ತೊಡಗಿದ್ದರು. 1972ರಿಂದ 78ರವರೆಗೆ ಎರಡು ಅವಧಿಯಲ್ಲಿ ಶಾಸಕರಾಗಿದ್ದ ಲಿಂಗಪ್ಪ ಅವರು ಉತ್ತಮ ಸಂಸದೀಯ ಪಟುವೂ ಆಗಿದ್ದರು. ಹಾವನೂರು ವರದಿ ಜಾರಿಗೆ ಹೋರಾಟ ಮಾಡಿದ್ದರು. ಅಲ್ಲದೆ, ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಹಕ್ಕೊತ್ತಾಯವನ್ನೂ ಮಾಡಿದ್ದರು.

ಕರ್ನಾಟಕದ ಹಿರಿಯ ಸಮಾಜವಾದಿ ನಾಯಕರಾಗಿರುವ ಶ್ರೀ ಕೋಣಂದೂರು ಲಿಂಗಪ್ಪನವರು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ 1972 ರಿಂದ 1978 ರವರೆಗೆ ಶಾಸಕರಾಗಿ ಆಯ್ಕೆಯಾಗಿದ್ದವರು. ಇವರು ಹಿರಿಯ ಸಮಾಜವಾದಿ ನಾಯಕರಾದ ದಿ. ಶ್ರೀ ಶಾಂತವೇರಿ ಗೋಪಾಲಗೌಡ ಅವರ ಶಿಷ್ಯ. ಇವರಿಗೆ (77ನೇ ವಯಸ್ಸಿನಲ್ಲಿ) ಕರ್ನಾಟಕ ರಾಜ್ಯ ಸರ್ಕಾರ 2013 ರಲ್ಲಿ ಪ್ರತಿಷ್ಠಿತ "ದೇವರಾಜ ಅರಸು ಪ್ರಶಸ್ತಿ " ನೀಡಿ ಗೌರವಿಸಲಾಗಿದೆ.

ಟಾಕಪ್ಪ ಕಣ್ಣೂರು

ಬಿ.ಟಾಕಪ್ಪ ಕಣ್ಣೂರು ಅವರು ಮೂಲತಃ ಡೊಳ್ಳು ಕುಣಿತದ ಕಲಾವಿದರು. 1949 ರ ಸೆಪ್ಟೆಂಬರ್ 4 ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಣ್ಣೂರಿನಲ್ಲಿ ಜನಿಸಿದ ಟಾಕಪ್ಪನವರು 1978 ರಿಂದಲೂ ಜಾನಪದ ಕಲಾವಿದರ ಕೂಟವನ್ನು ಕಟ್ಟಿಕೊಂಡು ಡೊಳ್ಳು ಕುಣಿತದ ಅಭ್ಯಾಸ ಪ್ರಾರಂಭಿಸಿದವರು. ಕಲಾವಿದರಾಗಿ, ಸಂಘಟಕರಾಗಿ, ತರಬೇತುದಾರರಾಗಿ ಸ್ಥಳೀಕದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಖ್ಯಾತಿಯನ್ನು ಎತ್ತಿಹಿಡಿದು ಶಿಖರ ಸಾಧನೆಯನ್ನು ಮಾಡಿದವರು.

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮಾರಂಭದಲ್ಲಿ, ವೇದಿಕೆಗಳಲ್ಲಿ ಡೊಳ್ಳು ಕುಣಿತವನ್ನು ಪ್ರಸ್ತುತಪಡಿಸಿರುವ ಇವರು ರಷ್ಯಾದ ಭಾರತೋತ್ಸವ, ಇಂಗ್ಲೆಂಡಿನ ಕನ್ನಡ ಸಮ್ಮೇಳನ, ಅಮೇರಿಕಾದ ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡುವ ಮೂಲಕ ನೆಲದ ಸೊಗಡಾದ ಡೊಳ್ಳು ಕುಣಿತವನ್ನು ಅಂತಾರಾಷ್ಟ್ರೀಯವಾಗಿ ಪ್ರಚುರಪಡಿಸಿದ್ದಾರೆ.

ಇದಲ್ಲದೆ 56ಕ್ಕೂ ಹೆಚ್ಚು ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲೂ ತಮ್ಮ ತಂಡದೊಂದಿಗೆ ಡೊಳ್ಳು ಪ್ರದರ್ಶನಗಳನ್ನು ನೀಡಿದ ದಾಖಲೆಯೂ ಟಾಕಪ್ಪ ಅವರ ಬೆನ್ನಿಗಿದೆ.

ಅಕಾಡೆಮಿಯ ಅಧ್ಯಕ್ಷರಾಗಿ ಜನಪದ ಸಾಹಿತ್ಯ, ಕಲೆ-ಸಂಸ್ಕೃತಿಯ ಸಶಕ್ತೀಕರಣಕ್ಕೆ ಕಾರ್ಯನಿರ್ವಹಿಸಿದ್ದಾರೆ. ಜನಪದ ಕಲೆಯ ತರಬೇತಿ ಶಿಬಿರಗಳು, ಜಾನಪದ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಜನಪದ ಕಲಾವಿದರ ಶ್ರೇಯಸ್ಸಿಗಾಗಿ ದುಡಿಯುತ್ತಿದ್ದಾರೆ.

ನಾನು ಓದಲು ಶುರು ಮಾಡಿದಾಗಿನಿಂದ ಮನೆಯಲ್ಲೂ ಕನ್ನಡ ಸಾಹಿತ್ಯವನ್ನೇ ಓದಲು ಹೆಚ್ಚು ಪ್ರೋತ್ಸಾಹ ಸಿಕ್ಕಿತು. ನಾನು ಕೇವಲ ಬರಹಗಾರನಾಗಿದ್ದೇನೆ ಅಷ್ಟೇ, ನಾನು ಕನ್ನಡಕ್ಕೆ ಏನೋ ಮಾಡಿದ್ದೇನೆ ಅನ್ನುವುದಕ್ಕಿಂತ ಕನ್ನಡ ನನಗೆ ಏನು ಬೇಕೋ ಅದನ್ನು ಕೊಟ್ಟಿದೆ. ನಾವು ಕನ್ನಡ ಸಮಾಜದಲ್ಲಿ ಬದುಕುತ್ತಿರುವುದಿಂದ ನಾವು ಮಾಡಿರುವುದು ಇನ್ಯಾರಿಗೋ ಮೌಲ್ಯಯುತವಾಗಿ ಕಂಡಿದೆ, ಇನ್ನೊಬ್ಬರಿಗೆ ಅದರಿಂದ ಉಪಯೋಗವಾಗಿದೆ ಎಂದಾಗ ಖುಷಿಯಾಗುತ್ತದೆ.

- ಪ್ರೊ.ರಾಜೇಂದ್ರ ಚೆನ್ನಿ

ಪ್ರಶಸ್ತಿ ದೊರೆತಿದ್ದು ತುಂಬಾ ಸಂತಸ ತಂದಿದೆ. ಕಲಾವಿದರನ್ನು ಪ್ರೋತ್ಸಾಹಿಸುವಂತಹ ಪ್ರಶಸ್ತಿಗಳು ಕಲಾವಿದರ ಸಾಧನೆಗೆ ಸಾರ್ಥಕವಾದದ್ದು. ನನ್ನ ಈ ಪ್ರಶಸ್ತಿಗೆ ಮಾಧ್ಯಮ ಸ್ನೇಹಿತರು, ಹಿತೈಷಿಗಳು ಹಾರೈಕೆಯಿಂದ ದೊರೆತಿದೆ.

- ಟಾಕಪ್ಪ ಕಣ್ಣೂರ್

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ನನ್ನ ಹೆಸರು ಆಯ್ಕೆಯಾಗಿರುವ ವಿಚಾರ ದೂರದರ್ಶನದ ಮೂಲಕ ತಿಳಿಯಿತು. ಪ್ರಶಸ್ತಿಗೆ 70 ಜನರೊಂದಿಗೆ ನನ್ನನ್ನೂ ಆಯ್ಕೆ ಮಾಡಿರುವುದು ಸಂತಸವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೃತಜ್ಞತೆಗಳು.

- ಕೋಣಂದೂರು ಲಿಂಗಪ್ಪ