ಶ್ರೀಗಳು ಕವಿಗಳಾಗಿ, ವಿಮರ್ಶಕರಾಗಿ, ಸಂಪಾದಕರಾಗಿ, ವ್ಯಾಖ್ಯಾನಕಾರರಾಗಿ, ವಚನಕಾರರಾಗಿ, ಚುಟುಕು ಸಾಹಿತಿಗಳಾಗಿ ಸಾಹಿತ್ಯದ ಹಲವು ಆಯಾಮಗಳಲ್ಲಿ ತಮ್ಮದೇಯಾದ ಸಾಹಿತ್ಯ ಸಾಧನೆ ಮಾಡಿದ್ದಾರೆ

ಶರಣು ಸೊಲಗಿ

ಮುಂಡರಗಿ: ಮುಂಡರಗಿಯ ಅನ್ನದಾನೀಶ್ವರ ಮಠಕ್ಕೆ ಸುದೀರ್ಘವಾದ ಇತಿಹಾಸವಿದೆ. ಬರದ ಈ ನಾಡನ್ನು ಭರವಸೆಯ ನಾಡಾಗಿಸಲು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಅತಿ ಹೆಚ್ಚು ಪರಿಶ್ರಮ ವಹಿಸಿ ಈ ಭಾಗದ ಸಮಗ್ರ ಅಭಿವೃದ್ದಿಗೆ ಕಾರಣರಾಗಿದ್ದಾರೆ. ಶ್ರೀಗಳ ಎಲ್ಲ ಕಾರ್ಯಗಳನ್ನು ಮೆಚ್ಚಿ ರಾಜ್ಯ ಸರ್ಕಾರ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದು. ನ.28 ರಂದು ಮುಂಡರಗಿಯಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ.

ಅನ್ನದಾನೀಶ್ವರ ಮಹಾಶಿವಯೋಗಿಗಳು ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪೀರಾಪುರ ಗ್ರಾಮದ ಹಿರೇಮಠದ ವೀರಭದ್ರಯ್ಯ ಹಾಗೂ ಬಸವಮ್ಮ ದಂಪತಿಗಳಿಗೆ ತೃತೀಯ ಪುತ್ರರಾಗಿ 1942ರ ಮೇ 4 ರಂದು ಜನಿಸಿದರು. 1969ರ ಜನೇವರಿ 31ರಂದು ಅನ್ನದಾನೀಶ್ವರ ಶ್ರೀಗಳು ಮುಂಡರಗಿ ಅನ್ನದಾನೀಶ್ವರ ಮಠದ 10ನೇ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದರು.

ಮುಂಡರಗಿ ಅನ್ನದಾನೀಶ್ವರ ಮಠವು ಅವಿರಳಜ್ಞಾನಿ ಶ್ರೀ ಚೆನ್ನಬಸವಣ್ಣನವರ ಬಳಿವಿಡಿದು ಬಂದ ಮಠವಾಗಿದೆ. ಶ್ರೀಗಳು ಪೀಠಾಧಿಪತಿಯಾದ ನಂತರ ಮುಂಡರಗಿ ಪಟ್ಟಣವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆ.ಜಿ ಯಿಂದ ಪಿ.ಜಿ. ಹಂತದವರೆಗೆ ಒಟ್ಟು 32ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಅನ್ನದಾನೀಶ್ವರ ಶ್ರೀಗಳವರು ಅಕ್ಷರ ಕ್ರಾಂತಿ ಮಾಡಿದ್ದಾರೆ. ಸಾವಿರಾರು ಕುಟುಂಬಳಿಗೆ ಕೆಲಸ ಕೊಟ್ಟು ಅನ್ನಕ್ಕೆ ಆಸರೆಯಾಗಿದ್ದಾರೆ.

ಶ್ರೀಗಳು ಕವಿಗಳಾಗಿ, ವಿಮರ್ಶಕರಾಗಿ, ಸಂಪಾದಕರಾಗಿ, ವ್ಯಾಖ್ಯಾನಕಾರರಾಗಿ, ವಚನಕಾರರಾಗಿ, ಚುಟುಕು ಸಾಹಿತಿಗಳಾಗಿ ಸಾಹಿತ್ಯದ ಹಲವು ಆಯಾಮಗಳಲ್ಲಿ ತಮ್ಮದೇಯಾದ ಸಾಹಿತ್ಯ ಸಾಧನೆ ಮಾಡಿದ್ದಾರೆ. ಇವರ 160 ಕ್ಕೂ ಹೆಚ್ಚು ಕೃತಿಗಳನ್ನು 19 ಸಂಪುಟಗಳಲ್ಲಿ ಪ್ರಕಟಿಸಿ ಸಾರಸ್ಪತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಶ್ರೀಮಠದಿಂದ 270 ಕ್ಕೂ ಹೆಚ್ಚು ವಿವಿಧ ಲೇಖಕರ ಕೃತಿಗಳನ್ನು ಪ್ರಕಟಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಠಗಳೆಂದರೆ ಸಮಾಜದಿಂದ ಹಾಗೂ ಸರ್ಕಾರದಿಂದ ಹಣ, ಜಮೀನುಗಳನ್ನು ಪಡೆದುಕೊಳ್ಳುವುದು ವಾಡಿಕೆ. ಆದರೆ ಸಮಾಜದ ಹಿತದೃಷ್ಟಿಯಿಂದ ಅನ್ನದಾನೀಶ್ವ ಸ್ವಾಮಿಜಿ ಶ್ರೀಮಠದಿಂದಲೇ ಪುರಸಭೆ, ತಾಲೂಕಾ ಆಸ್ಪತ್ರೆ, ಕ್ರೀಡಾಂಗಣ, ರುದ್ರಭೂಮಿ, ಕನ್ನಡ ಸಾಹಿತ್ಯ ಭವನ, ವಿಜ್ಞಾನ ಭವನ ಹಾಗೂ ಶಾಲಾ ಕಟ್ಟಡಗಳಿಗೆ, ವಿವಿಧ ಸರ್ಕಾರಿ ಕಟ್ಟಡಗಳಿಗೆ ನೂರಾರು ಎಕರೆ ಬೆಲೆಬಾಳುವ ಭೂಮಿ ದಾನ ಮಾಡಿದ್ದಾರೆ. ತಾಲೂಕಾ ಪತ್ರಕರ್ತರ ಪ್ರಶಸ್ತಿ, ಶಿಕ್ಷಕರ ಪ್ರಶಸ್ತಿ, ಮಾಜಿ ಸೈನಿಕರಿಗೆ ಪ್ರಶಸ್ತಿಗಾಗಿ ತಲಾ ₹1 ಲಕ್ಷ ನೀಡಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಿಗೆ ಚಿನ್ನದ ಪದಕ ನೀಡಲು ಧನ ಸಹಾಯ ನೀಡಿದ್ದಾರೆ. ಪ್ರತಿವರ್ಷ ನಾಡಿನ ಪ್ರಮುಖ ವ್ಯಕ್ತಿಯನ್ನು ಗುರುತಿಸಿ ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಲಾಗುತ್ತಿದೆ.

ಪ್ರತಿವರ್ಷ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ, ಯೋಗ ಶಿಬಿರಗಳು, ಆರೋಗ್ಯ ಶಿಬಿರದ ಮೂಲಕ ರಕ್ತದಾನ, ನೇತ್ರದಾನ, ಉಚಿತ ಕನ್ನಡಕ ವಿತರಣೆ ಹಾಗೂ ಬಡ ಮತ್ತು ಮಧ್ಯಮ ಕುಟುಂಬಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರತಿ ವರ್ಷ ಅನ್ನದಾನೀಶ್ವರ ಯಾತ್ರಾ ಮಹೋತ್ಸವದ ಸಂದರ್ಭದಲ್ಲಿ ನೂರಾರು ಸರ್ವಧರ್ಮ ಸಾಮೂಹಿಕ ವಿವಾಹಗಳನ್ನು ಮಾಡುತ್ತಾ ಬಂದಿದ್ದಾರೆ.

ಶ್ರೀಗಳ ಸಾಧನೆಯನ್ನು ಮೆಚ್ಚಿ ಅಲಹಾಬಾದ್ ವಿಶ್ವವಿದ್ಯಾಲಯ ಹಿಂದಿ ಸಾಹಿತ್ಯ ವಿಶಾರದ ಹಾಗೂ ಸಾಹಿತ್ಯ ರತ್ನ ಪ್ರಶಸ್ತಿ, ಬನಾರಸ್ ವಿಶ್ವವಿದ್ಯಾಲಯದಿಂದ ವೇದಾಂತ ಶಾಸ್ತ್ರಿ ಪ್ರಶಸ್ತಿ ,1998ರಲ್ಲಿ ಧಾರವಾಡದ ಮುರುಘಾಮಠವು "ಧರ್ಮಭಾಸ್ಕರ " ಪ್ರಶಸ್ತಿ ನೀಡಿ ಗೌರವಿಸಿದೆ. 2005 ರಲ್ಲಿ ಧಾರವಾಡ ಕರ್ನಾಟಕ ವಿ.ವಿ. ಗೌರವ ಡಿ.ಲಿಟ್ (ಡಾ) ಪದವಿ ನೀಡಿದ್ದು, 2013ರಲ್ಲಿ ಹಂಪಿ ಕನ್ನಡ ವಿ.ವಿ.ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗೆ ನಾಡಿನ ಹಲವಾರು ಮಠಗಳು, ಸಂಘ ಸಂಸ್ಥೆಗಳು ಗೌರವಿಸಿ ಪ್ರಶಸ್ತಿ ನೀಡಿವೆ.

ಮಠವೆಂದರೆ ಕೇವಲ ಭಕ್ತಿಕೇಂದ್ರವಲ್ಲ, ಅದು ಸಮಾಜದ ಶಕ್ತಿಯಾಗಬೇಕು ಎಂಬುದನ್ನು ಕೃತಿಯಲ್ಲಿ ತೋರಿಸಿದವರು ಮುಂಡರಗಿ ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳವರು. ಅಕ್ಷರ ಕ್ರಾಂತಿ ಹಾಗೂ ಭೂದಾನದ ಮೂಲಕ ಇಡೀ ನಾಡಿಗೆ ಮಾದರಿಯಾದ ಶ್ರೀಗಳಿಗೆ ಸಂದ ರಾಜ್ಯೋತ್ಸವ ಪ್ರಶಸ್ತಿ ಇಡೀ ಗದಗ ಜಿಲ್ಲೆಯ ಹೆಮ್ಮೆ. ಸರ್ಕಾರದಿಂದ ಅಂತಹ ಕಾರ್ಯಕ್ರಮದ ಆಯೋಜನೆ ಅವಕಾಶ ದೊರೆತಿರುವುದು ನಮ್ಮ ಸುದೈವ ಎಂದು ಗದಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ ತಿಳಿಸಿದ್ದಾರೆ.