ಇವತ್ತು ಕನ್ನಡ ಉಳಿದಿರುವುದು ರೈತರು, ಕಾರ್ಮಿಕರು, ಆಟೋರಿಕ್ಷಾ ಹಾಗೂ ಪ್ರವಾಸಿ ವಾಹನ ಚಾಲಕರಿಂದ. ಅ
ಕನ್ನಡಪ್ರಭ ವಾರ್ತೆ ಮೈಸೂರು
ಚಾಲಕರು ಕನ್ನಡ ಭಾಷೆಯ ಸಂಪರ್ಕ ರಾಯಭಾರಿಗಳು ಎಂದು ಹಿರಿಯ ವಿದ್ವಾಂಸ ಡಾ.ರಾಗೌ ಬಣ್ಣಿಸಿದರು.ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘವು ಪ್ರವಾಸಿ ವಾಹನ ಚಾಲಕರ ಸಹಕಾರ ಸಂಘದ ಸಹಯೋಗದಲ್ಲಿ ವಿಜಯನಗರ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ 15ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏಕೆಂದರೆ ಹೊರ ರಾಜ್ಯ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಕನ್ನಡನಾಡಿನ ಪ್ರವಾಸಿತಾಣಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಕನ್ನಡ ಭಾಷೆಯ ಬಗ್ಗೆಯೂ ತಿಳಿಸಿಕೊಡುತ್ತಾರೆ ಎಂದರು.
ಇವತ್ತು ಕನ್ನಡ ಉಳಿದಿರುವುದು ರೈತರು, ಕಾರ್ಮಿಕರು, ಆಟೋರಿಕ್ಷಾ ಹಾಗೂ ಪ್ರವಾಸಿ ವಾಹನ ಚಾಲಕರಿಂದ. ಅವರಂತೆ ಎಲ್ಲರೂ ಕನ್ನಡ ಬಳಸಿದರೆ ಭಾಷೆ ತಾನಾಗಿಯೇ ಬೆಳೆಯುತ್ತದೆ ಎಂದು ಅವರು ಹೇಳಿದರು.ಈಗ ಹೋಟೆಲ್‌ಗಳಲ್ಲಿ ಕನ್ನಡ ಸಪ್ಲೈಯರ್‌ಗಳು ಸಿಗುತ್ತಿಲ್ಲ. ಏಕೆಂದು ವಿಚಾರ ಮಾಡಬೇಕು ಎಂದು ಸಲಹೆ ಮಾಡಿದ ಅವರು, ಕನ್ನಡ ಕಟ್ಟುವ ಕೆಲಸದಲ್ಲಿ ಮಹಿಳೆಯಕ ಪಾತ್ರ ಬಹಳ ಮುಖ್ಯ ಎಂದರು.
ಭಾರೀ ಹೋರಾಟದ ನಂತರ ಭಾಷಾವಾರು ಪ್ರಾಂತ್ಯಗಳ ರಚನೆಯಾಯಿತು. ಆದರೆ ಇವತ್ತು ಕಾಸರಗೋಡು ಸೇರಿದಂತೆ ಕೆಲವೊಂದು ಪ್ರಮುಖ ಸ್ಥಳಗಳು ನಮ್ಮ ರಾಜ್ಯದ ವ್ಯಾಪ್ತಿಗೆ ಬಂದಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ನಮ್ಮನ್ನು ಆಳುತ್ತಿದ್ದ ಆಂಗ್ಲರು ವ್ಯವಹಾರಿಕ ಕಾರಣಕ್ಕಾಗಿ ಇಂಗ್ಲಿಷ್ ಹೇರಿದರು. ನಮ್ಮ ಭಾಷೆಯ ಬಗ್ಗೆ ಐತಿಹಾಸಿಕ ಪ್ರಜ್ಞೆ ಇರಬೇಕು. ಅಲ್ಲದೇ ಬೇರೆ ಬೇರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸಿ, ಇಂಗ್ಲಿಷ್ ಬೆಳೆಸಿದರು. ಇದೇ ರೀತಿ ಪ್ರಾದೇಶಿಕ ಭಾಷೆಗಳು ಸಹ ಗಟ್ಟಿತನವನ್ನು, ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದರುಬಿಐಟಿ ನಿರ್ದೇಶಕ ಮಹೇಂದ್ರ ಸಾಲಿಯನ್ ಮಾತನಾಡಿ, ಹೊರಗಿನಿಂದ ಬಂದವರು ಇಲ್ಲಿನ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಆಗ್ರಹಿಸಿದರು.
ಟ್ರಾವೆಲ್ ಪಾರ್ಕ್ ಮಾಲೀಕ ಸಿ.ಟಿ. ಜಯಕುಮಾರ್ ಮಾತನಾಡಿ, ಮೈಸೂರು ರಾಜಮಹಾರಾಜರ ಕೊಡುಗೆಯಿಂದಾಗಿ ಪ್ರವಾಸೋದ್ಯಮ ಹೆಸರುವಾಸಿಯಾಗಿದ್ದು, ನಮ್ಮ ಜೀವನಕ್ಕೆ ದಾರಿಯಾಗಿದೆ ಎಂದು ಕೃತಜ್ಞತೆಯಿಂದ ಸ್ಮರಿಸಿದರು.ಪ್ರವಾಸಿ ಗೈಡ್‌ಗಳ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ನಮ್ಮ ಭಾಷೆ, ಆಚಾರ- ವಿಚಾರದಲ್ಲಿ ವಿಷಯದಲ್ಲಿ ಯಾವುದೇ ರಾಜಿ ಬೇಡ ಎಂದರು.
ಸಂಘದ ಅಧ್ಯಕ್ಷ ಎಸ್. ನಾಗರಾಜು ಮಾತನಾಡಿ, ಆಟೋರಿಕ್ಷಾಗಳ ದರ ಪರಿಷ್ಕರಣೆಯಾಗಿದೆ. ಅದೇ ರೀತಿ ಟ್ಯಾಕ್ಸಿಗಳ ದರ ಕೂಡ ಪರಿಷ್ಕರಣಯಾಗಬೇಕು. ಚಾಲಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.ಈ ಬಾರಿಯ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ವಿ.ಎಂ. ಪ್ರಭುಸ್ವಾಮಿ, ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಚಾಲಕರಾದ ರಂಗಸ್ವಾಮಿ,ಲಕ್ಷ್ಮೀಕಾಂತರಾವ್ ಹಾಗೂ ಮೊಹಮದ್ ಸಾದಿಕ್ ಅವರನ್ನು ಸನ್ಮಾನಿಸಲಾಯಿತು.
,ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಎಸ್. ಮಂಜುನಾಥ್, ಡೇವಿಡ್, ಸಂಘದ ಉಪಾಧ್ಯಕ್ಷ ಆರ್. ಪ್ರಭಾಕರ್, ಕಾರ್ಯದರ್ಶಿ ಕೆ.ಟಿ. ದಿವಾಕರ್, ಖಜಾಂಚಿ ಪುಟ್ಟಬುದ್ದಿ, ಉಪ ಕಾರ್ಯದರ್ಶಿ ಮಹಮದ್ ಸೌಲತ್ ಅಲಿ, ನಿರ್ದೇಶಕರಾದ ಆರ್. ನಾಗರಾಜ್, ಬಾಲಾಜಿ ಸಿಂಗ್, ರಂಗಸ್ವಾಮಿ, ಚಂದ್ರಶೇಖರ ಸ್ವಾಮಿ, ಎಸ್. ಮಂಜುನಾಥ್, ಯು. ಮಂಜುನಾಥ್, ಸಂತೋಷ್. ಜಿ.ಕೆ. ಶ್ರೀನಿವಾಸ್, ಶಿವು ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಇದ್ದರು.ಮಂಜುಶ್ರೀ ಕಾರ್ಯಕ್ರಮ ನಿರೂಪಿಸಿದರು. ತಾರಾ, ಕೃಷ್ಣಮೂರ್ತಿ ಗೀತಗಾಯನ ನಡೆಸಿಕೊಟ್ಟರು. ಆರಂಭದಲ್ಲಿ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.