ರಾಜ್ಯಾದ್ಯಂತ ಭಾನುವಾರ 71ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು. ಜಿಲ್ಲಾ ಕೇಂದ್ರಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ಧ್ವಜಾರೋಹಣ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು:
ರಾಜ್ಯಾದ್ಯಂತ ಭಾನುವಾರ 71ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು. ಜಿಲ್ಲಾ ಕೇಂದ್ರಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ಧ್ವಜಾರೋಹಣ ನೆರವೇರಿಸಿದರು.ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸಿದರು. ಕುಂದಾನಗರಿ ಬೆಳಗಾವಿಯಲ್ಲಿ ಒಂದು ದಿನ ಮೊದಲೇ ಕನ್ನಡದ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶನಿವಾರ ಮಧ್ಯರಾತ್ರಿ ನಗರದ ಚನ್ನಮ್ಮ ವೃತ್ತದಲ್ಲಿ ಮೇಯರ್ ಪ್ರೀತಿ ಕಾಮಕರ್ ಅವರು ಕೇಕ್ ಕತ್ತರಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು. ನೆರೆದಿದ್ದ ಕನ್ನಡಾಭಿಮಾನಿಗಳು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿ, ಪಟಾಕಿ ಸಿಡಿಸಿ, ಕನ್ನಡ ರಾಜ್ಯೋತ್ಸವವನ್ನು ಸ್ವಾಗತಿಸಿದರು.
ವಿಜಯನಗರ ಜಿಲ್ಲೆ ಹೊಸಪೇಟೆಯ ಡಾ.ಪುನೀತ್ ರಾಜ್ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಬಸವಂತಪ್ಪ ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿಗೆ ಪುಷ್ಪ ನಮನ ಮಾಡಿದರು. ಈ ವೇಳೆ, ಕನ್ನಡಪರ ಸಂಘಟನೆಗಳು ಹಂಪಿಯಿಂದ ಜ್ಯೋತಿ ತಂದು, ಪ್ರತಿಷ್ಠಾಪನೆ ಮಾಡಿದವು. ಬಳಿಕ, ಪೊಲೀಸ್ ಇಲಾಖೆ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಎನ್ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ ಗಳಿಂದ ಆಕರ್ಷಕ ಕವಾಯತು ನಡೆಯಿತು.ತುಮಕೂರಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಜಿ.ಪರಮೇಶ್ವರ್ ಅವರ ಗೈರು ಹಾಜರಿಯಲ್ಲಿ ಸಚಿವ ಕೃಷ್ಣಭೈರೇಗೌಡರು ಧ್ವಜಾರೋಹಣ ನೆರವೇರಿಸಿದರು.
ಮೈಸೂರಿನಲ್ಲಿ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಧ್ವಜಾರೋಹಣಕ್ಕೂ ಮೊದಲು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ, ತಾಯಿ ಭುವನೇಶ್ವರಿ ತೇರಿಗೆ ಪುಷ್ಪಾರ್ಚನೆ ನೆರವೇರಿಸಿದರು. ಈ ವೇಳೆ, ಸಚಿವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ವಿವಿಧ ತಂಡಗಳಿಂದ ನಡೆದ ಪಥಸಂಚಲನ ವೀಕ್ಷಿಸಿದರು. ಈ ವೇಳೆ ಉಡುಪಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆ ಎಂದು ಘೋಷಣೆ ಮಾಡಿದರು.
ಬಳ್ಳಾರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಜಮೀರ್ ಅಹಮದ್ ಅವರು, ವೇದಿಕೆ ಕಾರ್ಯಕ್ರಮದ ಬಳಿಕ ಸ್ವತಃ ತಾವೇ ಭುವನೇಶ್ವರಿ ಪುತ್ಥಳಿ ಇರುವ ಟ್ರಾಕ್ಟರ್ ಚಾಲನೆ ಮಾಡುವ ಮೂಲಕ ಗಮನ ಸೆಳೆದರು.ರಾಮನಗರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎಚ್.ಸಿ.ಬಾಲಕೃಷ್ಣ ಅವರು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ಶಾಸಕ ಇಕ್ಬಾಲ್ ಹುಸೇನ್, ಮಕ್ಕಳು, ಶಿಕ್ಷಕರ ಜೊತೆ ಕನ್ನಡ ಬಾವುಟ ಹಿಡಿದು ನೃತ್ಯ ಮಾಡಿದ್ದು ವಿಶೇಷವಾಗಿತ್ತು.ಕನ್ನಡಾಭಿಮಾನ ಮೆರೆದ ಚಾಮರಾಜನಗರ ಪೊಲೀಸರು:
ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರು, ಕನ್ನಡ ಭಾಷೆಯಲ್ಲೇ ಕವಾಯತು ಆಜ್ಞೆ ನೀಡಿದ್ದು ವಿಶೇಷವಾಗಿತ್ತು. ಪಥ ಸಂಚಲನ ಹಾಗೂ ನಿರ್ಗಮನಕ್ಕೆ ಕನ್ನಡದಲ್ಲೇ ಸಚಿವರ ಅನುಮತಿ ಕೋರಲಾಯಿತು. ಪೊಲೀಸ್ ಕಮಾಂಡೆಂಟ್ ಅವರು ಕನ್ನಡದಲ್ಲೇ ಪಥ ಸಂಚಲನ, ಧ್ವಜವಂದನೆ ಪ್ರಕ್ರಿಯೆಗಳನ್ನು ನಿರೂಪಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದ ಬಳಿಕ ಪೊಲೀಸ್, ಅರಣ್ಯ ಸಿಬ್ಬಂದಿ, ಅಗ್ನಿಶಾಮಕ ಪಡೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.