ಸಂಘ ಗಳ ಸಹಕಾರದೊಂದಿಗೆ ರಾಜ್ಯೋತ್ಸವ ಆಚರಣೆ: ಎಂ.ಪಿ ಕೇಶವ ಕಾಮತ್

| Published : Oct 29 2024, 01:08 AM IST

ಸಂಘ ಗಳ ಸಹಕಾರದೊಂದಿಗೆ ರಾಜ್ಯೋತ್ಸವ ಆಚರಣೆ: ಎಂ.ಪಿ ಕೇಶವ ಕಾಮತ್
Share this Article
  • FB
  • TW
  • Linkdin
  • Email

ಸಾರಾಂಶ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಯಲ್ಲಿ ಇದೇ ಡಿಸೆಂಬರ್‌ ತಿಂಗಳ 20, 21, 22ರಂದು ನಡೆಯಲಿದೆ. ಪ್ರಚಾರದ ಉದ್ದೇಶದಿಂದ ಅ. 29ರಂದು ಕನ್ನಡ ಜ್ಯೋತಿ ರಥ ಯಾತ್ರೆ ಹೊರಟಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾ ತಾಲೂಕು ಮತ್ತು ಹೋಬಳಿಗಳ ಮಟ್ಟದಲ್ಲಿ ಸರ್ಕಾರಿ ಇಲಾಖೆಗಳ, ಸಂಘ ಸಂಸ್ಥೆಗಳ, ಸ್ತ್ರೀಶಕ್ತಿ ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಗಳ ಸಹಕಾರದೊಂದಿಗೆ ಜಿಲ್ಲೆಯಾದ್ಯಂತ ಆಚರಿಸುವಂತೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮನವಿ ಮಾಡಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯ ಜಿಲ್ಲೆಯಲ್ಲಿ ಇದೇ ಡಿಸೆಂಬರ್ ತಿಂಗಳ 20, 21, 22 ರಂದು ನಡೆಯಲಿದ್ದು ಅದರ ಪ್ರಚಾರದ ಉದ್ದೇಶದಿಂದ ಅ. 29ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನೇಶ್ವರಿ ದೇವಾಲಯದಿಂದ ಕನ್ನಡ ಜ್ಯೋತಿ ರಥ ಯಾತ್ರೆ ಹೊರಟಿದ್ದು ಅದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಸಮ್ಮೇಳನ ಸಮಯದಲ್ಲಿ ಮಂಡ್ಯ ತಲುಪಲಿದೆ. ಆ ರಥವು ನವೆಂಬರ್ ತಿಂಗಳ 10 ಮತ್ತು 11ರಂದು ಜಿಲ್ಲೆಯ ಐದು ತಾಲೂಕಿನಲ್ಲಿ ಸಂಚರಿಸಲಿದೆ. ಅದು ಸಂಚರಿಸುವ ಸಂದರ್ಭದಲ್ಲಿ ತಾಲೂಕು ಹೋಬಳಿ ಸಮಿತಿಗಳು ಎಲ್ಲರ ಸಹಕಾರದೊಂದಿಗೆ ಸರ್ಕಾರಿ ಗೌರವದೊಂದಿಗೆ ಅದನ್ನು ಸ್ವಾಗತಿಸಿ ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಬೀಳ್ಕೊಡಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ, ಸಾಹಿತ್ಯ ಸಮ್ಮೇಳನದ ಜ್ಯೋತಿ ರಥ ಬರುವ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಆಯಾ ಹೋಬಳಿಗಳ ಎಲ್ಲ ಸದಸ್ಯರನ್ನು ಒಗ್ಗೂಡಿಸಿ ಕಾರ್ಯಕ್ರಮ ನಡೆಸಬೇಕು. ಈಗಾಗಲೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವಿಶೇಷ ಆಸಕ್ತಿ ವಹಿಸಿ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಜಿಲ್ಲೆಯ ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಕನ್ನಡ ಜ್ಯೋತಿ ರಥಕ್ಕೆ ಸಕಲ ಗೌರವ ನೀಡಿ ಕಾರ್ಯಕ್ರಮ ನಡೆಸಿ ಬೀಳ್ಕೊಡಬೇಕು ಎಂದು ಆದೇಶಿಸಿರುವುದು ಸ್ವಾಗತಾರ್ಹ ಎಂದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಪ್ರಶಸ್ತಿ ಗೌರಮ್ಮ ದತ್ತಿ ಪ್ರಶಸ್ತಿ ಗೆ ಪುಸ್ತಕಗಳನ್ನು ಆಹ್ವಾನಿಸಿದ್ದು 15 ಕೃತಿಗಳು ಜಿಲ್ಲೆಯ ಲೇಖಕರು ನೀಡಿರುತ್ತಾರೆ. ಅದನ್ನು ಮೂರು ಜನ ತೀರ್ಪುಗಾರರಿಗೆ ಕಳುಹಿಸಿ ಉತ್ತಮವಾದ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡುವಂತೆ ತೀರ್ಮಾನಿಸಲಾಯಿತು.ಈ ಬಾರಿ ನೂತನವಾಗಿ ಎರಡು ದತ್ತಿ ಪ್ರಶಸ್ತಿಗಳು ಲಭ್ಯವಾಗಿದ್ದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಮಹಿಳಾ ಸಮ್ಮೇಳನದ ಅಧ್ಯಕ್ಷರಾಗಿದ್ದ ವಿಜಯ ವಿಷ್ಣು ಭಟ್ ಅವರು ತಮ್ಮ ಹೆಸರಿನಲ್ಲಿ ಕೊಡಗಿನ ಮಹಿಳಾ ಲೇಖಕಿಯರ ಸಮಾಜ ಸಮಾಜಮುಖಿ ಕಥೆ ಕಾದಂಬರಿ ಲೇಖನಗಳಿಗೆ ಪ್ರಶಸ್ತಿ ಕೊಡುವಂತೆ ಆಶಯವಿಟ್ಟು ದತ್ತಿ ಸ್ಥಾಪನೆ ಮಾಡಿದ್ದಾರೆ. ಅಲ್ಲದೇ ಕೊಡಗಿನ ದಿನಪತ್ರಿಕೆ ಶಕ್ತಿ ಪತ್ರಿಕೆಯ ಸಂಸ್ಥಾಪಕರಾದ ದಿ. ಬಿ ಎಸ್ ಗೋಪಾಲಕೃಷ್ಣ ಅವರ ಹೆಸರಿನ ದತ್ತಿಯನ್ನು ಅವರ ಪುತ್ರ ಬಿ.ಜಿ ಅನಂತಶಯನ ಅವರು ಸ್ಥಾಪಿಸಿದ್ದು ಕೊಡಗು ಜಿಲ್ಲೆಯ ಪುರುಷ ಲೇಖಕರು ರಚಿಸಿರುವ ಉತ್ತಮ ಕೃತಿಗೆ ಪ್ರಶಸ್ತಿ ನೀಡಲು ಸೂಚಿಸಿದ್ದಾರೆ. ಅದನ್ನು ಕೂಡ ಈ ವರ್ಷ ಪ್ರಾರಂಭಿಸಲಾಗುವುದು ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ಅಲ್ಲದೆ ಈ ಬಾರಿ ಒಟ್ಟಾಗಿ 32 ದತ್ತಿ ಕಾರ್ಯಕ್ರಮಗಳಿದ್ದು ಅವನ್ನು ವ್ಯವಸ್ಥಿತವಾಗಿ ನಡೆಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ಮತ್ತು ಹೋಬಳಿ ಅಧ್ಯಕ್ಷರಿಗೆ ಸೂಚಿಸಿದರು. ಸಭೆಯಲ್ಲಿ ಕೊಡಗು ಜಿಲ್ಲಾ ಕೇಂದ್ರ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್. ಐ. ಮುನೀರ್ ಅಹ್ಮದ್, ಸಹ ಕಾರ್ಯದರ್ಶಿಗಳಾದ ಜಲಜಾ ಶೇಖರ್, ಎ.ವಿ. ಮಂಜುನಾಥ್, ನಿರ್ದೇಶಕರಾದ ಫ್ಯಾನ್ಸಿ ಮುತ್ತಣ್ಣ, ಸಹನಾ ಕಾಂತಬೈಲು, ಎಚ್.ಎಸ್ ಪ್ರೇಮ್ ಕುಮಾರ್, ತಾಲೂಕು ಅಧ್ಯಕ್ಷರಾದ ರಾಜೇಶ್ ಪದ್ಮನಾಭ, ಕಡ್ಲೇರ ತುಳಸಿ ಮೋಹನ್, ಎಸ್‌.ಡಿ ವಿಜೇತ್, ಹೋಬಳಿ ಅಧ್ಯಕ್ಷರಾದ ಎಂ.ಎನ್ ಮೂರ್ತಿ, ನೆರವಂಡ ಉಮೇಶ್, ಈರಮಂಡ ಹರಿಣಿ ವಿಜಯ್, ಬಿ.ಪಿ ಶಾಂತಮಲ್ಲಪ್ಪ, ನಂಗಾರು ಕೀರ್ತಿ ಪ್ರಸಾದ್, ವೀರರಾಜು, ಕ.ಸಾ.ಪ ಸಿಬ್ಬಂದಿ ರೇಣುಕಾ ಉಪಸ್ಥಿತರಿದ್ದರು.