ರಾಜ್ಯೋತ್ಸವ: ಭುವನೇಶ್ವರಿ ದೇವಿ ಮೆರವಣಿಗೆಗೆ ಸೂಚನೆ

| Published : Oct 16 2025, 02:00 AM IST

ಸಾರಾಂಶ

ಮೆರವಣಿಗೆಯಲ್ಲಿ ಕಡ್ಡಾಯವಾಗಿ ಎಲ್ಲಾ ಇಲಾಖಾಧಿಕಾರಿಗಳು, ವಿದ್ಯಾರ್ಥಿನಿಲಯ ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲಾಡಳಿತದ ವತಿಯಿಂದ ನ. 1ರ ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡ ತಾಯಿ ಶ್ರೀ ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಅಲಂಕೃತ ಬೆಳ್ಳಿ ರಥದಲ್ಲಿರಿಸಿ ಸಾಂಸ್ಕೃತಿಕ ಕಲಾತಂಡಗಳು ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರದೊಂದಿಗೆ ಮೆರವಣಿಗೆ ಏರ್ಪಡಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.ಸರ್ಕಾರದ 5 ಗ್ಯಾರಂಟಿಗಳ ಜೊತೆಗೆ ಜಿಲ್ಲಾ ಪಂಚಾಯಿತಿ, ಕೃಷಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಆಹಾರ, ಮೀನುಗಾರಿಕೆ, ತೋಟಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ, ಶಿಕ್ಷಣ, ಪಶುವೈದ್ಯಕೀಯ, ರೇಷ್ಮೆ ಇಲಾಖೆಗಳ ಪ್ರಸ್ತುತ ಯೋಜನೆಗಳು ಮತ್ತು ಸಾಧನೆಗಳ ಮಾಹಿತಿಯುಳ್ಳ ಉತ್ತಮ ಸ್ತಬ್ಧಚಿತ್ರಗಳನ್ನು ಸೃಜನಾತ್ಮಕವಾಗಿ ರೂಪಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ನಿರ್ದೇಶಿಸಿದರು. ಮೆರವಣಿಗೆಯಲ್ಲಿ ಕಡ್ಡಾಯವಾಗಿ ಎಲ್ಲಾ ಇಲಾಖಾಧಿಕಾರಿಗಳು, ವಿದ್ಯಾರ್ಥಿನಿಲಯ ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಭಾಗವಹಿಸುವ ಅಧಿಕಾರಿಗಳು, ವಿದ್ಯಾರ್ಥಿಗಳು, ಸ್ತಬ್ಧಚಿತ್ರಗಳು ಅಂದು ಬೆಳಿಗ್ಗೆ 7.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಹಾಜರಿರಬೇಕು. ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂಭಾಗದಿಂದ ಪ್ರಾರಂಭಗೊಂಡು ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ತಲುಪಲಿದೆ ಎಂದು ತಿಳಿಸಿದರು. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ ಗೌರವರಕ್ಷೆ ಸ್ವೀಕರಿಸಲಿದ್ದಾರೆ. ಧ್ವಜಸ್ತಂಭ, ಗೌರವರಕ್ಷೆ ಸ್ವೀಕಾರ ಸೇರಿದಂತೆ ಶಿಷ್ಠಾಚಾರದಂತೆ ಕಾರ್ಯಕ್ರಮ ನಡೆಸಲು ಅಗತ್ಯ ವೇದಿಕೆ, ಗಣ್ಯರಿಗೆ ಆಸನ ವ್ಯವಸ್ಥೆ, ಅಲಂಕಾರಿಕ ಹೂಕುಂಡಗಳ ವ್ಯವಸ್ಥೆ, ನಾಡಗೀತೆಯ ಗಾಯನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕೆಂದು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಧ್ವಜಾರೋಹಣದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಮಕ್ಕಳ ತಂಡಗಳನ್ನು ಸಿದ್ಧಪಡಿಸಿಕೊಂಡು ತಾಲೀಮು ನಡೆಸಲು ಹಾಗೂ ಕಾರ್ಯಕ್ರಮ ಸಂಘಟಿಸಲು ಶಾಲಾ ಶಿಕ್ಷಣ ಇಲಾಖೆಗೆ ಸೂಚಿಸಿದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಎಲ್ಲಾ ಸರ್ಕಾರಿ ಕಚೇರಿ ಕಟ್ಟಡ ಸೇರಿದಂತೆ ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಜಿಲ್ಲೆಯ ಎಲ್ಲಾ ಸಾಹಿತಿ, ಕಲಾವಿದರು, ಜನಪ್ರತಿನಿಧಿ, ವಿಶೇಷ ಆಹ್ವಾನಿತರಿಗೆ ಮುಂಚಿತವಾಗಿ ಆಹ್ವಾನ ಪತ್ರವನ್ನು ತಲುಪಿಸುವ ಕೆಲಸವನ್ನು ನಿರ್ವಹಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಿದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ಸಾಧಕರನ್ನು ಆಯ್ಕೆ ಮಾಡಿ, ಪಟ್ಟಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ಪ್ರಶಸ್ತಿ ಆಯ್ಕೆ ಸಮಿತಿಗೆ ನಿರ್ದೇಶಿಸಿದರು. ಅಂದು ಸಂಜೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಕನ್ನಡ ಭಾಷೆಯ ಹಿರಿಮೆ-ಗರಿಮೆಗಳನ್ನು ಸಾರುವಂತಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.