ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಹೃದಯಾಘಾತದಿಂದ ಭಾನುವಾರ ರಾತ್ರಿ ನಿಟ್ಟೆ ಸಮೀಪ ನಿಧನರಾದ ರಾಕೇಶ್ ಪೂಜಾರಿಗೆ ಅವರ ಆಪ್ತರು, ಸಹ ನಟರು, ಗಣ್ಯರು ಸೋಮವಾರ ತೀವ್ರ ಸಂತಾಪ ಸೂಚಿಸಿದ್ದಾರೆ. ರಾಕೇಶ್ ಆಪ್ತರು ಅಶ್ರುತರ್ಪಣ...:ರಾಕೇಶ್ ನಗುತ್ತಾ ಬಂದು, ನಗುತ್ತಾ ಹೋದ. ನಾವು ಅವನ ಮನೆಗೆ ಅಳುತ್ತಾ ಬರುವಂತಾಗಿದೆ. ದಸ್ಕತ್ ಮೂವಿಗೆ ಅವನಿಗೆ ಬರಲು ಹೇಳಿದ್ದೆ. ಆದರೆ ಅವನಿಗೆ ಬರಲು ಸಾಧ್ಯವಾಗಿಲ್ಲ. ಸದ್ಯ ಕಾಂತರಾ ಚಾಪ್ಟರ್ 1 ನಲ್ಲಿ ರಾಕೇಶ್ ನಟಿಸುತ್ತಿದ್ದು, ರಿಯಾಲಿಟಿ ಶೋಗಳ ಮೂಲಕ ಮಿಂಚುತ್ತಿದ್ದ ತಾರೆ ರಾಕೇಶ್. ಆತನಿಗೆ ನೋವು ತೋರಿಸಿಕೊಂಡು ಗೊತ್ತೇ ಇಲ್ಲ, ಯಾವತ್ತು ಖುಷಿಯಲ್ಲಿ ಇರುತ್ತಿದ್ದ ನಮ್ಮೆಲ್ಲರನ್ನು ಖುಷಿಯಲ್ಲಿ ಇರಿಸುತ್ತಿದ್ದ. -ಅನೀಶ್, ಕಾಮಿಡಿ ಕಿಲಾಡಿ ತಂಡ.
............ಆರು ತಿಂಗಳ ಹಿಂದೆ ರಾಕೇಶ್ ಗೆ ಅಪಘಾತವಾಗಿತ್ತು. ಆಗಲೂ ಆಸ್ಪತ್ರೆಯ ಬೆಡ್‌ನಲ್ಲಿ ನಗುತ್ತಾ, ನಾವ್ ಅತ್ತರೆ ಚಿಲ್ ಆಗಿರಿ ಎಂದು ಹೇಳಿ, ಅಪಘಾತವು ಒಂದು ಅನುಭವ ಎಂದು ಹೇಳುತ್ತಿದ್ದನು. ರಾಕೇಶ್ ಅತ್ತಿದ್ದನ್ನು ಯಾವತ್ತು ನೋಡಿಲ್ಲ. ಯಾವಗಲೂ ಊರಿಗೆ ಬನ್ನಿ ಬೀಚ್ ಇದೆ ಎಂಜಾಯ್ ಮಾಡೋಣ ಎನ್ನುತ್ತಿದ್ದ. ಆದರೆ ಈ ರೀತಿ ಬರುತ್ತೇವೆ ಎಂದುಕೊಂಡಿರಲಿಲ್ಲ. ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡುವುದು ರಾಕೇಶ್ ಆಸೆ ಇತ್ತು. ರಾಕೇಶ್ ನನ್ನ ಸ್ವೀಟೆಸ್ಟ್ ಫ್ರೆಂಡ್. ನನಗಿಂತ ವಯಸ್ಸಿನಲ್ಲಿ ದೊಡ್ಡವನಾದರೂ ನಾನು ಸ್ವೀಟು ಎಂದು ಕರೆಯುತ್ತಿದ್ದೆ. ಕುಳ್ಳಕ್ಕೆ ಡುಮ್ಮನಾಗಿ ನಮಗೆಲ್ಲರಿಗೂ ಪ್ರೀತಿ ಪಾತ್ರನಾಗಿದ್ದ.-ವಾಣಿ, ಕಾಮಿಡಿ ಕಿಲಾಡಿಗಳು ತಂಡ.
.................ಅವನು ನಗುನಗುತ್ತಲೇ ಹೋದ, ಆದರೆ ನಮ್ಮೆಲ್ಲರ ಮಾತು ನಿಲ್ಲಿಸಿದ್ದಾನೆ. ರಾಕೇಶ್ ಮನೆಯ ಆಧಾರಸ್ತಂಭವಾಗಿದ್ದು, ತಂಗಿಯ ಮದುವೆ ಆತನ ದೊಡ್ಡ ಕನಸಾಗಿತ್ತು. ನಾವೆಲ್ಲರೂ ಚಿತ್ರರಂಗದವರು ಆತನ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಬೇಕಾಗಿದೆ. -ಹಿತೇಶ್, ಕಾಮಿಡಿ ಕಿಲಾಡಿಗಳು ತಂಡ...................ಟಿವಿಗಳಲ್ಲಿ ಬರುವ ಮೊದಲಿನಿಂದಲೂ ನಮ್ಮಿಬ್ಬರಿಗೂ ಸ್ನೇಹ ಇತ್ತು. ಒಟ್ಟಿಗೆ ಆಡಿಶನ್ ಗೆ ಹೋಗಿ, ಒಂದೇ ಕೋಣೆಯ ಒಂದೇ ಬೆಡ್ ನಲ್ಲಿ ಮಲಗುತ್ತಿದ್ದೆವು. ಈ ರೀತಿ ನಮ್ಮನ್ನು ಬಿಟ್ಟು ಹೋಗುತ್ತಾನೆ ಅಂದುಕೊಂಡಿರಲಿಲ್ಲ. ನಿನ್ನೆ ರಾತ್ರಿ 10.30 ಕ್ಕೆ ಫೋನ್ ಮಾಡಿ, 17 ನೇ ತಾರೀಕು ಒಂದು ಕಾರ್ಯಕ್ರಮ ಇದೆ ಬಾ ಎಂದು ಹೇಳಿದ್ದೆ. ನನ್ನನ್ನು ಬೇಗ ಬಿಡಬೇಕು ಬರ್ತೇನೆ ಅಂದಿದ್ದ. ಆದರೆ ಈಗ ರಾಕೇಶ್ ಹೋಗಿಬಿಟ್ಟಿದ್ದಾನೆ. -ಸೂರಜ್, ಕಾಮಿಡಿ ಕಿಲಾಡಿಗಳು ತಂಡ...........ಒಬ್ಬ ಒಳ್ಳೆ ಗೆಳೆಯನನ್ನು ಕಳೆದುಕೊಂಡಿದ್ದೇವೆ. ರಾಕೇಶ್ ಅಪ್ಪನ ಹಾಗೆ, ಮನಸ್ಸು ಮಗುವಿನ ಹಾಗೆ.
ನಾವೆಲ್ಲ ನಟ, ನಟಿಯರು ರಾಕೇಶ್ ಕುಟುಂಬದ ಜೊತೆ ಇದ್ದೇವೆ. ರಾಕೇಶ್ ಪೂಜಾರಿ ಒಬ್ಬ ಅಜಾತಶತ್ರುವಾಗಿದ್ದು, ದೇವರ ಮೇಲೆ ಇದ್ದ ಸ್ವಲ್ಪ ನಂಬಿಕೆ ಹೊರಟು ಹೋಯಿತು. ತಂಗಿಯ ಮದುವೆ ಮಾಡಬೇಕು ಎಂಬುದೇ ಆತನ ದೊಡ್ಡ ಕನಸಾಗಿತ್ತು. ಕಲಾವಿದರೆಲ್ಲರು ರಾಕೇಶ್ ಕುಟುಂಬಕ್ಕೆ ಸಹಾಯ ಮಾಡಬೇಕು, ಅವನ ಜೀವನದ ಒಂದೇ ಒಂದು ಆಸೆ ತಂಗಿಯ ಮದುವೆ ತುಂಬಾ ಗ್ರಾಂಡ್ ಆಗಿ ಆಗಬೇಕು. ಹೆಸರು, ದುಡ್ಡು ಅಂತ ಸಾಯ್ಬೇಡಿ ಎಂದು ನಮಗೆ ಹೇಳುತ್ತಿದ್ದ. ಜೀವನದಲ್ಲಿ ಹೇಗಿದ್ದ ಹಾಗೆ ಸ್ಟೇಜ್ ಮೇಲೆ ಬರುತ್ತಿದ್ದ, ಅವನ ಜೊತೆ ಬಹಳ ದಿನ ಇರಲು ಪುಣ್ಯ ನಮಗೆ ಇಲ್ಲ-ನಯನಾ, ಕಾಮಿಡಿ ಕಿಲಾಡಿಗಳು ತಂಡ................ನಮ್ಮ ಕುಟುಂಬದ ಕೂಸನ್ನು ಕಳೆದುಕೊಂಡಿದ್ದೇವೆ. ನಾನು ಯಾವುದೇ ಕಾರ್ಯಕ್ರಮ ಮಂಗಳೂರಿಗೆ ಬಂದಿರಲಿಲ್ಲ, ಈ ತರದ ಘಟನೆಗಾಗಿ ಬರಬೇಕಾಯಿತು. ರಾಕೇಶ್ ಅಂದ್ರೆ ನಗು ನಗು ನಗು ನಗು ಬಿಟ್ಟು ಬೇರೆ ಏನಿಲ್ಲ. ಎಷ್ಟೇ ಸೀಸನ್‌ಗಳಾದರೂ ನಾವೆಲ್ಲರೂ ಕುಟುಂಬದಂತೆ ಕೆಲಸ ಮಾಡಿದ್ದೇವೆ. ತಂದೆಯನ್ನು ಕಳೆದುಕೊಂಡ ನಂತರ ಮನೆಗೆ ಆಧಾರ ಸ್ತಂಭವಾಗಿದ್ದ. ತಂಗಿ ಮತ್ತು ತಾಯಿಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ, ಅವರ ಜೊತೆ ನಾವು ಇದ್ದೇವೆ. ಇಡೀ ಕರ್ನಾಟಕದ ಜನ ಗುರುತಿಸುವಂತೆ ಮಾಡಿದ್ದ ರಾಕೇಶ್. ಕಾಮಿಡಿ ಕಿಲಾಡಿ, ಚಾಂಪಿಯನ್ ಶಿಪ್ ಎಲ್ಲದರಲ್ಲೂ ನಾವು ಕುಟುಂಬ, ರಾಕೇಶ್ ಕುಟುಂಬಕ್ಕೆ ಎಲ್ಲರೂ ಸಹಾಯ ಮಾಡಬೇಕಾಗಿದೆ.
-ಶಿವರಾಜ್ ಕೆಆರ್ ಪೇಟೆ, ಕಾಮಿಡಿ ಕಿಲಾಡಿಗಳು ತಂಡ.........................ಈ ಅಕಾಲಿಕ ಸಾವು ನೋವು ತಂದಿದೆ. ನಮ್ಮ ತಂಡದ ಮುದ್ದಿನ ನಟನಾಗಿದ್ದನು. ಪ್ರಕೃತಿ ಎಲ್ಲರನ್ನು ಕರೆಸಿಕೊಳ್ಳುತ್ತದೆ ಆದರೆ ಇಷ್ಟು ಬೇಗ ಕರೆಸಿಕೊಳ್ಳುತ್ತೆ ಅಂದುಕೊಂಡಿರಲಿಲ್ಲ. ಕರಾವಳಿ ಭಾಗದಿಂದ ಯಾವುದೇ ಹಿನ್ನೆಲೆ ಇಲ್ಲದೆ ಬಂದ ಪ್ರತಿಭಾನ್ವಿತ ಕಲಾವಿದ, ಜೀವಂತಿಕೆ ಇರುವ ಅಪರೂಪದ ನಟನಾಗಿದ್ದ. ಆ ನಗುವಿನ ಹಿಂದೆ ಏನು ನೋವಿತ್ತು ಗೊತ್ತಿಲ್ಲ, ಯಾವುದೇ ನೋವು ತೋರಿಸಿಕೊಳ್ಳದೆ ಎಲ್ಲರನ್ನು ನಗಿಸುತ್ತಿದ್ದ. ತಂಗಿಯ ಮದುವೆ ಕನಸು ಹೊತ್ತಿದ್ದ, ಅವನ ಕನಸುಗಳ ಬಗ್ಗೆ ಸ್ನೇಹಿತರಿಗೆ ಚೆನ್ನಾಗಿ ಗೊತ್ತಿದೆ. ಮಗು ಮನಸ್ಸಿನ ನಟ, ಕೆಲವೊಮ್ಮೆ ತೀರಾ ಒಳ್ಳೆತನ ಇದ್ದರೂ ಈ ರೀತಿ ಆಗುತ್ತದೆ ಏನೋ..? ನಾವು ನೀವೆಲ್ಲ ಸೇರಿ ಆ ಕನಸು ನನಸು ಮಾಡಬೇಕು. ಸದಾ ಲವಲವಿಕೆಯಿಂದ ಇದ್ದು, ಅಗಾಧವಾಗಿ ನಗಿಸುತ್ತಿದ್ದ. ಕರಾವಳಿ ಭಾಷೆಯನ್ನು ಇಟ್ಟುಕೊಂಡು ನಗಿಸಿ ಸಹೃದಯರ ಮನ ಗೆದ್ದಿದ್ದು, ಕಾಂತರ ಭಾಗ ಒಂದರಲ್ಲೂ ನಟಿಸುತ್ತಿದ್ದು, ನನ್ನ ನಿರ್ದೇಶನದ ಮನದ ಕಡಲಿನಲ್ಲೂ ಅಭಿನಯಿಸಬೇಕಿತ್ತು. ಜೀವನದಲ್ಲಿ ತುಂಬಾ ನೋವಿದ್ದವರಿಗೆ ಮಾತ್ರ ನಗಿಸೋಕೆ ಸಾಧ್ಯ. ಆತ ಏಕಸಂಧಿಗ್ರಹಿ ಒಂದು ಬಾರಿ ಕಲಿತದ್ದನ್ನು, ಹಾಗೆ ಅಭಿನಯಿಸುತ್ತಿದ್ದ, ಆತನ ಹೃದಯದಲ್ಲಿ ಏನು ನೋವಿತ್ತೋ, ಗೊತ್ತಿಲ್ಲ. ಈಗ ಆನಂದವಾಗಿ ಮಲಗಿದ್ದಾನೆ. -ಯೋಗರಾಜ್ ಭಟ್, ನಿರ್ದೇಶಕ. .....................ರಾಕೇಶ ಅದ್ಭುತ ನಟ. ತನ್ನ ಸ್ಕಿಟ್ ಮಾತ್ರವಲ್ಲದೆ ಬೇರೆಯವರ ಸ್ಕಿಟ್ ಕೂಡ ಇಂಪ್ರೊವೈಸ್ ಮಾಡುತ್ತಿದ್ದನು. ಕನ್ನಡ ಚಿತ್ರರಂಗ ಅದ್ಭುತ ಕಲಾವಿದನನ್ನು ಕಳೆದುಕೊಂಡಿದೆ. ನನಗೆ ಆತನಿಗೆ ನಮಸ್ಕಾರ ಮಾಡಲು ಮನಸ್ಸು ಬಂದಿಲ್ಲ, ಆತನ ಕೆನ್ನೆಯನ್ನು ಗಿಂಡಿ ಮುದ್ದು ಮಾಡಿ ಬಂದೆ. ಅವನು ನಮ್ಮೆಲ್ಲರ ಟೆಡ್ಡಿ ಬೇರ್ ಆಗಿದ್ದನು. ಮನೆ ತಾಯಿ, ತಂಗಿಗೆ ಆತ ಆಧಾರ ಸ್ತಂಭವಾಗಿದ್ದ. ನಾವೆಲ್ಲರೂ ಮುಂದೆ ನಿಂತು ಆತನ ತಂಗಿಯ ಮದುವೆ ಮಾಡಬಹುದು. ಆದರೆ ಅಣ್ಣನ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ತಂಗಿ ಮದುವೆ ಬಗ್ಗೆ ಸಹಾಯ ಮಾಡಲು ನಾವೆಲ್ಲರೂ ತಂಡವಾಗಿ ಚರ್ಚಿಸುತ್ತೇವೆ.
ಕಾಮಿಡಿ ಕಿಲಾಡಿಗಳು ತಂಡಕ್ಕೆ ನನ್ನ ಸಿನಿಮಾದಲ್ಲೂ ಅವಕಾಶ ಕೊಟ್ಟಿದ್ದೆ. ತುಂಬಾ ಚೆನ್ನಾಗಿ ನಟಿಸಿದ್ದ. ಅರ್ಜುನ್ ಜನ್ಯ ಅವರ ಅನುಕರಣೆಯನ್ನು ತುಂಬಾ ಚೆನ್ನಾಗಿದೆ ನಿರ್ವಹಿಸುತ್ತಿದ್ದನು. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಅನುಕರಣೆ ಮಾಡುವುದು ಅವನಿಗೆ ಗೊತ್ತಿತ್ತು. ಅರ್ಜುನ್ ಜನ್ಯ ಅವರೇ ಸ್ವತಃ ವೇದಿಕೆಗೆ ಬಂದು ಹ್ಯಾಪಿ ಆತನನ್ನು ಅಭಿನಂದಿಸಿದ್ದರು.-ಮಾಸ್ಟರ್ ಆನಂದ್, ನಟ. .....................ರಾಕೇಶ್ ನನ್ನ ಜೊತೆ ಬಹಳ ಅನ್ಯೋನ್ಯವಾಗಿದ್ದ. ಅದ್ಭುತವಾದ ಪ್ರತಿಭೆ, ವೇದಿಕೆ ಹೊರತುಪಡಿಸಿಯೂ ಉತ್ತಮ ವ್ಯಕ್ತಿ. ಅಮ್ಮ ಮತ್ತು ತಂಗಿಯನ್ನು ನೋಡಿದಾಗ ಬಹಳ ಬೇಸರವಾಗುತ್ತಿದೆ. ಆರು ತಿಂಗಳ ಹಿಂದೆ ಅಪಘಾತವಾದಾಗ ಬೈದು ಬುದ್ಧಿ ಹೇಳಿದ್ದೆ. ಘಟನೆಯ ಬಗ್ಗೆ ನಟ ದರ್ಶನ್ ಕರೆ ಮಾಡಿ ವಿಚಾರಿಸಿದ್ದರು. ನಮ್ಮಿಬ್ಬರ ಫೋಟೋವನ್ನು ಆತ ಬಹಳ ಕಾಲ ಡಿಪಿ ಮಾಡಿಕೊಂಡಿದ್ದನು. ನಾವಿಬ್ಬರು ಅಕ್ಕ ತಮ್ಮನ ರೀತಿ ಇದ್ದೆವು.
-ರಕ್ಷಿತಾ ಪ್ರೇಮ್, ನಟಿ...........................ನಮ್ಮ ಕರಾವಳಿಯ ಅಪ್ಪಟ ಪ್ರತಿಭೆ ರಾಕೇಶ್. ಅಕ್ಕ ಅಕ್ಕ ಎಂದು ಬಾಯಿ ತುಂಬಾ ಮನಸಾರೆ ಕರೆಯುತ್ತಿದ್ದ. ನಾನು ನನ್ನ ತಮ್ಮನನ್ನು ಕಳೆದುಕೊಂಡಿದ್ದೇನೆ. ತಮಾಷೆಗೂ ಯಾರ ಮನಸ್ಸನ್ನು ರಾಕೇಶ್ ನೋಯಿಸಿಲ್ಲ, ಕರಾವಳಿ ಕನ್ನಡದ ಶೈಲಿಯನ್ನು ಬದಲಾಯಿಸದೆ ಉಳಿಸಿಕೊಂಡಿದ್ದ. ಡಿಂಪಲ್ ನೋಡಿ ಎಂದು ಆಗಾಗ ಹೇಳುತ್ತಿದ್ದ. ದೇವರು ಒಳ್ಳೆಯವರನ್ನು ಬೇಗ ಕರೆಸಿಕೊಂಡರು.
-ಅನುಶ್ರೀ, ನಿರೂಪಕಿ.