ಸಾರಾಂಶ
ಮುಂಡರಗಿ: ಅಣ್ಣ ತಮ್ಮಂದಿರ ಬಗೆಗೆ ತಂಗಿ ಸದಾಶಯ ಹಾಗೂ ಸುರಕ್ಷತಾ ಭಾವ ಹೊಂದಬೇಕು. ಅಂತೆಯೇ ತಂಗಿಯ ಸಂರಕ್ಷಣೆಯ ಹೊಣೆ ಸಹೋದರರದ್ದಾಗಿರಬೇಕು. ಈ ಬಂಧುತ್ವ, ಸೌಹಾರ್ದತೆ, ಭ್ರಾತೃತ್ವ ಬೆಸೆಯುವ ಹಬ್ಬವೇ ರಕ್ಷಾ ಬಂಧನ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ ಹೇಳಿದರು.ಸೋಮವಾರ ಸಂಜೆ ಪಟ್ಟಣದ ಅನ್ಮೋಲ್ ಯೋಗ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರ ಮುಂಡರಗಿ ವತಿಯಿಂದ ಆಯೋಜಿಸಿದ್ದ ಪರಿಸರ ಸ್ನೇಹಿರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ರಾಖಿ ಕಟ್ಟುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಡಿಲಗೊಳ್ಳುತ್ತಿರುವ ಸಂಬಂಧಗಳನ್ನು ಘಟ್ಟಿಗೊಳಿಸುವ ಕಾರ್ಯವನ್ನು ರಕ್ಷಾ ಬಂಧನ ಮಾಡುತ್ತದೆ. ನಮ್ಮ ಭಾರತೀಯ ಸಂಪ್ರದಾಯಗಳಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತಿದ್ದು, ಪ್ರತಿಯೊಂದು ಹಬ್ಬಕ್ಕೂ ತನ್ನದೇಯಾದ ಮಹತ್ವ ಇದೆ.ವರ್ಷದುದ್ದಕ್ಕೂ ಅನ್ಸೋಲ್ ಯೋಗ ಕೇಂದ್ರ ಉತ್ತಮವಾದ ಚಟುವಟಿಕೆ ಮಾಡುತ್ತ ಬರುವುದನ್ನು ಗಮನಿಸಿದ್ದು, ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು ಎಂದರು.
ಎಸ್.ಆರ್. ರಿತ್ತಿ ಮಾತನಾಡಿ, ಭಾರತದ ದೇವರೇ ನಿರ್ಮಾಣ ಮಾಡಿದ ಭೂಮಿ. ಹೀಗಾಗಿ, ಇದನ್ನು ನಾವು ಪುಣ್ಯ ಭೂಮಿ ಎಂದು ಕರೆಯುತ್ತೇವೆ. ಈ ದೇಶದಲ್ಲಿ ಹುಟ್ಟಿದ ಶರಣರು, ಸಂತರು ಬೇರೆ ಯಾವ ದೇಶದಲ್ಲಿಯೂ ಜನಿಸಿಲ್ಲ. ಜಗತ್ತನ್ನು ಗೆದ್ದ ಅಲೆಕ್ಸಾಂಡರ್ ಸೋಲು ಉಂಡಿದ್ದು ಭಾರತದಲ್ಲಿ ಮಾತ್ರ. ಕಳೆದುಕೊಂಡ ಬಾಂಧವ್ಯವನ್ನು ಬೆಸೆಯಲು ರಾಖಿ ಹಬ್ಬ ಅತ್ಯಂತ ಮಹತ್ವ ಪಡೆದಿದೆ. ಹಬ್ಬಗಳು ಯಾವಾಗಲೂ ಸಾಮರಸ್ಯವನ್ನು ಸಾರುತ್ತವೆಯೇ ಹೊರತು ವೈಶಮ್ಯವನ್ನಲ್ಲ. ಹೀಗಾಗಿ ನಾವೆಲ್ಲರೂ ಪ್ರೀತಿ ಪ್ರೇಮದಿಂದ ಎಲ್ಲರೂ ಒಂದಾಗಿ ಸಹೋದರತ್ವದ ಭಾವದಿಂದ ಬದುಕೋಣ ಎಂದರು.ಅನ್ಮೋಲ್ ಯೋಗ ಕೇಂದ್ರದ ನಿರ್ದೇಶಕಿ ಡಾ. ಮಂಗಳಾ ಇಟಗಿ ಮಾತನಾಡಿ, ಸಂಪ್ರದಾಯ ಮತ್ತು ಹಿರಿಮೆಯನ್ನು ಸಾರುವ ರಕ್ಷಾಬಂಧನ ಇಂದಿನ ಆಧುನಿಕ ಆಡಂಬರಕ್ಕೆ ಮಾರುಹೋಗಿ ವಿವಿಧ ಬಣ್ಣ, ಆಕಾರ ಹಾಗೂ ಅವುಗಳನ್ನು ಇನ್ನೂ ಆಕರ್ಷಕವಾಗಿ ಮಾಡಲು ಪ್ಲಾಸ್ಟಿಕ್, ಪೋಮ್, ರಬ್ಬರ ಹಾಗೂ ವಿವಿಧ ರಾಸಾಯನಿಕ ಪದಾರ್ಥಗಳನ್ನು ಬಳಸಲಾಗುತ್ತಿದೆ. ಇವು ಮಣ್ಣಲ್ಲಿ ಬಿದ್ದರೆ ಕೊಳೆಯುವುದಿಲ್ಲ. ಪರಿಸರಕ್ಕೆ ಹಾನಿಯುಂಟು ಮಾಡುತ್ತವೆ. ಆದ್ದರಿಂದ ತಮ್ಮ ಸಂಸ್ಥೆಯಿಂದ ಅನೇಕ ವರ್ಷಗಳಿಂದ ಪರಸರ ಸ್ನೇಹಿ ರಾಖಿಗಳನ್ನು ತಯಾರಿಸಿ ಅವುಗಳನ್ನೇ ಬಳಸಲಾಗುತ್ತಿದೆ ಎಂದರು.
ಶಶಿಕಲಾ ಕುಕನೂರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಶೋಕ ಹುಬ್ಬಳ್ಳಿ, ಎಸ್.ಟಿ. ಮಳಾಪೂರ, ಎಂ.ಪಿ. ಶೀರನಹಳ್ಳಿ, ಎಸ್.ಡಿ. ಬಸೇಗೌಡ್ರ, ಮಹೇಶ ಮೇಟಿ, ಡಾ. ನಿಂಗು ಸೊಲಗಿ, ಶಿವಪುತ್ರಪ್ಪ ಇಟಗಿ, ಸುನಿಲ್ ಯಾಳಗಿ, ಡಾ. ವೀರೇಶ ಸಜ್ಜನರ, ಬಸವರಾಜ ಸಜ್ಜನರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಕಾಂತ ಇಟಗಿ ಅಧ್ಯಕ್ಷತೆ ವಹಿಸಿದ್ದರು. ಡಾ. ಮಂಗಳಾ ಇಟಗಿ ನಿರೂಪಿಸಿದರು.