Raksha Bandhan is a festival that strengthens the bond of love between brothers and sisters.

-ಅಣ್ಣ ತಂಗಿಯರ ಬಾಂಧವ್ಯದ ಹಬ್ಬ

--

- ರಾಖಿಯ ದಾರದಲ್ಲಿ ಬಾಲ್ಯದ ನೆನಪು, ಒಡಹುಟ್ಟಿದವರ ಪ್ರೀತಿ, ಕಾಳಜಿ, ಭರವಸೆ

----

“ರಕ್ಷಾ” ಎಂದರೆ ರಕ್ಷಣೆ, “ಬಂಧನ” ಎಂದರೆ ಬಂಧ ಅಥವಾ ಸಂಬಂಧ. ಅಂದರೆ, ರಾಖಿಯ ಮೂಲಕ ಸಹೋದರ - ಸಹೋದರಿಯರ ನಡುವಿನ ಪ್ರೀತಿಯ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಬ್ಬವೇ ರಕ್ಷಾ ಬಂಧನ. ಇದು ಕೇವಲ ರಾಖಿ ಕಟ್ಟುವ ಅಥವಾ ಉಡುಗೊರೆ ಕೊಡುವ ಹಬ್ಬವಲ್ಲ.

ವರ್ಷವಿಡೀ ನಡೆದ ಜಗಳ, ಮುನಿಸು, ಕಿತ್ತಾಟಗಳನ್ನು ಮರೆತು ಒಬ್ಬರನ್ನೊಬ್ಬರು ಪ್ರೀತಿಯಿಂದ ನೆನಪಿಸಿಕೊಳ್ಳುವ ದಿನವೂ ಹೌದು.

ರಕ್ಷಾ ಬಂಧನವು ಸಹೋದರ ಸಹೋದರಿಯರ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಆಚರಿಸುವ ಹಬ್ಬ. ಈ ದಿನ ಸಹೋದರಿ ತನ್ನ ಸಹೋದರನ ಕೈಗೆ ರಾಖಿ ಕಟ್ಟುತ್ತಾಳೆ. ಸಹೋದರನು ಸಹೋದರಿಯ ಸಂತೋಷ ಮತ್ತು ಒಳಿತಿಗಾಗಿ ಸದಾ ಜೊತೆಯಾಗಿರುವ ಭರವಸೆಯನ್ನು ನೀಡುತ್ತಾನೆ.

ರಕ್ಷಾ ಬಂಧನವೆಂದರೆ ಕೇವಲ ಅಣ್ಣ ಅಥವಾ ತಮ್ಮನ ಕೈಗೆ ರಾಖಿ ಕಟ್ಟುವ ಸಂಪ್ರದಾಯವಲ್ಲ. ಅದು ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ಪರಸ್ಪರ ಕಾಳಜಿಯನ್ನು ಮತ್ತೊಮ್ಮೆ ನೆನಪಿಸುವ ಸುಂದರ ದಿನ. ವರ್ಷವಿಡೀ ಎಷ್ಟೇ ಜಗಳವಾಗಲಿ, ಮಾತು ಮುನಿಸಾಗಲಿ, ಈ ಒಂದು ದಿನ ಬಂದಾಗ ಹಳೆಯ ನೋವುಗಳನ್ನೆಲ್ಲ ಮರೆತು ಪರಸ್ಪರ ಪ್ರೀತಿಯಿಂದ ಹಬ್ಬವನ್ನು ಆಚರಿಸುವುದು ಈ ಹಬ್ಬದ ವಿಶೇಷತೆ.

ಬೆಳೆದಂತೆ ಜೀವನದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಕೆಲಸ, ಮದುವೆ, ಕುಟುಂಬ, ದೂರದ ಊರುಗಳು, ಇವೆಲ್ಲ ಕಾರಣಗಳಿಂದ ಸಹೋದರ, ಸಹೋದರಿಯರು ಮೊದಲಿನಂತೆ ಪ್ರತಿದಿನ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಆದರೆ, ಮನಸ್ಸಿನಲ್ಲಿರುವ ಆ ಬಂಧ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ. ಎಷ್ಟೇ ದೂರವಿದ್ದರೂ ಸಹೋದರನಿಗೆ ತಂಗಿಯ ಕಾಳಜಿ, ತಂಗಿಗೆ ಅಣ್ಣನ ಮೇಲಿನ ಪ್ರೀತಿ ಸದಾ ಇರುತ್ತದೆ. ರಕ್ಷಾ ಬಂಧನದ ದಿನ ಸಹೋದರಿ ಪ್ರೀತಿಯಿಂದ ರಾಖಿಯನ್ನು ಸಹೋದರನ ಕೈಗೆ ಕಟ್ಟುತ್ತಾಳೆ. ಆ ರಾಖಿಯ ದಾರದಲ್ಲಿ ಕೇವಲ ಬಣ್ಣಗಳಿಲ್ಲ; ಬಾಲ್ಯದ ನೆನಪುಗಳು, ಒಡಹುಟ್ಟಿದವರ ಪ್ರೀತಿ, ಪರಸ್ಪರ ಕಾಳಜಿ ಮತ್ತು ಜೀವನಪೂರ್ತಿ ಜೊತೆಯಾಗಿರುವ ಭರವಸೆ ಅಡಗಿರುತ್ತದೆ.

ಸಹೋದರನು ಸಹೋದರಿಗೆ ಉಡುಗೊರೆ ನೀಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಉಡುಗೊರೆಯ ಬೆಲೆ ಎಷ್ಟೇ ಇರಲಿ, ಅದರ ಹಿಂದಿರುವ ಭಾವನೆಗೆ ಹೆಚ್ಚು ಬೆಲೆ. ಇಂದಿನ ವೇಗದ ಜೀವನದಲ್ಲಿ ಸಂಬಂಧಗಳಿಗೆ ಸಮಯ ನೀಡುವುದು ಕಷ್ಟ. ಮೊಬೈಲ್, ಕೆಲಸ ಮತ್ತು ವೈಯಕ್ತಿಕ ಜೀವನದ ಒತ್ತಡದಲ್ಲಿ ಕುಟುಂಬದೊಂದಿಗೆ ಕಳೆವ ಸಮಯ ಕಡಿಮೆ. ಇಂತಹ ಸಂದರ್ಭದಲ್ಲಿ ರಕ್ಷಾ ಬಂಧನದಂತಹ ಹಬ್ಬಗಳು ಕುಟುಂಬವನ್ನು ಒಂದೆಡೆ ಸೇರಿಸುತ್ತವೆ. ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡುವುದು, ಹಳೆಯ ನೆನಪು ಹಂಚಿಕೊಳ್ಳುವುದು, ನಗುವುದು ಮತ್ತು ಸಂತೋಷಪಡುವುದು ಕುಟುಂಬದ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಸಹೋದರ-ಸಹೋದರಿಯರ ಸಂಬಂಧದಲ್ಲಿ ಕೊಡುಕೊಳ್ಳುವಿಕೆಗಿಂತ ಪ್ರೀತಿಗೆ ಹೆಚ್ಚಿನ ಸ್ಥಾನವಿದೆ. ಅಣ್ಣನಿಗೆ ತಂಗಿ ಬಾಲ್ಯದ ಪುಟ್ಟ ಮಗು ಎಂದೇ ಕಾಣಬಹುದು. ತಂಗಿಗೆ ಅಣ್ಣ ಎಂದರೆ ಕಷ್ಟದ ಸಮಯದಲ್ಲಿ ಧೈರ್ಯ ತುಂಬುವ ವ್ಯಕ್ತಿಯಾಗಿರಬಹುದು. ಹಾಗೆಯೇ ತಮ್ಮನಿಗೆ ಅಕ್ಕ ತಾಯಿಯಂತೆಯೇ ಕಾಳಜಿ ತೋರಬಹುದು. ಜೀವನದ ಪ್ರತಿಯೊಂದು ಹಂತದಲ್ಲೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವ ಈ ಬಂಧ ನಿಜಕ್ಕೂ ಅಮೂಲ್ಯ.

ರಾಖಿ ಕಟ್ಟುವಾಗ ಸಹೋದರಿ ತನ್ನ ಸಹೋದರನ ಒಳಿತನ್ನು ಬಯಸುತ್ತಾಳೆ.

ಸಹೋದರನು ಕೂಡ ತನ್ನ ಸಹೋದರಿಯ ಸಂತೋಷ ಮತ್ತು ಸುರಕ್ಷತೆಗಾಗಿ ಸದಾ ಬೆಂಬಲವಾಗಿ ನಿಲ್ಲುವ ಭರವಸೆ ನೀಡುತ್ತಾನೆ.

ಆದರೆ ರಕ್ಷಣೆ ಎಂದರೆ ಕೇವಲ ಸಹೋದರನು ಸಹೋದರಿಯನ್ನು ರಕ್ಷಿಸುವುದಷ್ಟೇ ಅಲ್ಲ. ಇಂದಿನ ಕಾಲದಲ್ಲಿ ಸಹೋದರ-ಸಹೋದರಿಯರು ಪರಸ್ಪರರ ಕನಸುಗಳಿಗೆ, ನಿರ್ಧಾರಗಳಿಗೆ ಮತ್ತು ಕಷ್ಟಗಳಿಗೆ ಬೆಂಬಲವಾಗಿ ನಿಲ್ಲುವುದು ನಿಜವಾದ ರಕ್ಷಾಬಂಧನದ ಅರ್ಥ.

ಈ ಹಬ್ಬದ ನಿಜವಾದ ಉದ್ದೇಶ ಒಂದು ದಿನ ಮಾತ್ರ ಪ್ರೀತಿಯನ್ನು ತೋರಿಸುವುದಲ್ಲ. ವರ್ಷದ ಪ್ರತಿದಿನವೂ ಒಬ್ಬರನ್ನೊಬ್ಬರು ಗೌರವಿಸುವುದು, ಅಗತ್ಯವಿದ್ದಾಗ ಸಹಾಯ ಮಾಡುವುದು ಮತ್ತು ಕಷ್ಟದ ಸಮಯದಲ್ಲಿ ಜೊತೆಯಾಗಿರುವುದೇ ಈ ಸಂಬಂಧದ ಸಾರ್ಥಕತೆ.

ಸಹೋದರತೆ ಅಥವಾ ಸಹೋದರ-ಸಹೋದರಿಯರ ಬಾಂಧವ್ಯ ಎಂದರೆ ಕೇವಲ ರಕ್ತ ಸಂಬಂಧದಿಂದ ಮಾತ್ರ ರೂಪುಗೊಳ್ಳುವ ಸಂಬಂಧವಲ್ಲ. ಒಂದೇ ತಾಯಿಯ ಮಕ್ಕಳಾಗಿ ಹುಟ್ಟಿದವರು ಸಹೋದರ-ಸಹೋದರಿಯರಾಗುತ್ತಾರೆ ಎಂಬುದು ಸತ್ಯ. ಆದರೆ, ಅವರ ನಡುವಿನ ಸಂಬಂಧವನ್ನು ಜೀವನಪೂರ್ತಿ ಗಟ್ಟಿಯಾಗಿ ಉಳಿಸುವುದು ಕೇವಲ ರಕ್ತ ಸಂಬಂಧವಲ್ಲ; ಪ್ರೀತಿ, ವಿಶ್ವಾಸ, ಕಾಳಜಿ, ಗೌರವ ಮತ್ತು ಒಬ್ಬರಿಗಾಗಿ ಮತ್ತೊಬ್ಬರು ನಿಲ್ಲುವ ಮನೋಭಾವ.

ಕೊನೆಗೆ ಹೇಳುವುದಾದರೆ, ಸಂಬಂಧದ ಮೌಲ್ಯವನ್ನು ರಕ್ತ ನಿರ್ಧರಿಸುವುದಿಲ್ಲ; ನಮ್ಮ ನಡೆ, ಪ್ರೀತಿ, ವಿಶ್ವಾಸ ಮತ್ತು ಕಾಳಜಿ ನಿರ್ಧರಿಸುತ್ತವೆ. ರಕ್ತದಿಂದ ಹುಟ್ಟಿದ ಸಂಬಂಧ ಸಹೋದರತೆಯಾಗಬಹುದು, ಆದರೆ, ಹೃದಯದಿಂದ ಬೆಸೆದುಕೊಂಡ ಸಂಬಂಧವೇ ನಿಜವಾದ ಸಹೋದರತೆಯಾಗಿ ಜೀವನಪೂರ್ತಿ ಉಳಿಯುತ್ತದೆ. ಎಲ್ಲ ಸೋದರ ಸಃಹೋದರಿಯರು ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿ. ರಕ್ಷಾ ಬಂಧನದ ಶುಭಾಶಯ.

-

ಲೇಖಕರು : ಹರಿತಾ ಸಾಯಿ, ಬರಹಗಾರ್ತಿ; ಪತ್ರಿಕೋದ್ಯಮ, ಯಾದಗಿರಿ. (27ವೈಡಿಆರ್3)

-

27ವೈಡಿಆರ್2 : ರಕ್ಷಾಬಂಧನದ ಸಾಂದರ್ಭಿಕ ಚಿತ್ರ