ಸಾರಾಂಶ
ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಷನ್‌ನ ಅಧ್ಯಕ್ಷ ಅರ್ಜುನ್ ಎಸ್.ರಾವ್ ಮತ್ತು ತಂಡದವರಿಂದ ರಕ್ಷಾ ಸುದರ್ಶನ ಮಹಾಯಾಗ ಹಾಗೂ ಮಂಡ್ಯ ವಿಪ್ರ ಮಹಿಳಾ ಮಂಡಳಿ, ಶ್ರೀಕೃಷ್ಣ ಭಜನಾಮಂಡಳಿ, ಶ್ರೀವತ್ಸ ಭಜನಾ ಮಂಡಳಿಯಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆದ ನಂತರ ಪೂರ್ಣಾಹುತಿ ನಡೆದು, ಪ್ರಸಾದ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಶ್ರೀಕಾಳಿಕಾಂಬ ದೇವಸ್ಥಾನದ ಮುಂಭಾಗವಿರುವ ಗಜೇಂದ್ರ ಮೋಕ್ಷ ಕಲ್ಯಾಣಿ ಆವರಣದಲ್ಲಿ ಭಾರತೀಯ ಸೇನೆಯ ರಕ್ಷಣೆಗಾಗಿ ರಕ್ಷಾ ಸುದರ್ಶನ ಮಹಾಯಾಗ ಯಶಸ್ವಿಯಾಗಿ ನಡೆಯಿತು. ಈ ವೇಳೆ ನಿವೃತ್ತ ಸೈನಿಕರ ತಂಡವು ನಮ್ಮ ಹೆಮ್ಮೆ- ನಮ್ಮ ಸೈನಿಕರು ಎಂದು ಘೋಷಣೆ ಕೂಗುವ ಮೂಲಕ ದೇಶಪ್ರೇಮದ ಸಂದೇಶ ಸಾರಿದರು.ಅಂದು ಬೆಳಗ್ಗೆ ನಗರಸಭೆ ಅಧ್ಯಕ್ಷ ನಾಗೇಶ್ ವಿಷ್ಣು ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಮಾಜಿ ಸೈನಿಕರಿಂದ ಗೌರವ ವಂದನೆ ಸ್ವೀಕರಿಸಿದರು.
ಬಳಿಕ ಮಾತನಾಡಿದ ತಹಸೀಲ್ದಾರರು, ನಗರದಲ್ಲಿ ಇಂತಹ ಪುಷ್ಕರಣಿ, ಪ್ರಶಾಂತ ವಾತಾವರಣವಿರುವುದು ಸಂತಸದ ಸಂಗತಿ. ಇಲ್ಲಿ ಮಂಡ್ಯ ಜಿಲ್ಲಾ ಮಾಜಿ ಸೈನಿಕರೆಲ್ಲ ಸೇರಿ ದೇಶ ಕಾಯುತ್ತಿರುವ ಸೈನಿಕರ ರಕ್ಷಣೆಗಾಗಿ ರಕ್ಷಾ ಸುದರ್ಶನ ಮಹಾಯಾಗ ನಡೆಸುತ್ತಿರುವುದು ಒಂದು ಪ್ರೇರಣಾದಾಯಕ ಬೆಳವಣಿಗೆ, ಎಸ್‌ಎಸ್‌ಕೆ ವಿಶ್ವಕರ್ಮ ಸಮಿತಿಯ ಅಧ್ಯಕ್ಷ ರಮೇಶ್ ವಿಶ್ವಕರ್ಮ ಅವರ ಪರಿಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ದೊಡ್ಡಲಿಂಗೇಗೌಡ ಮಾತನಾಡಿ, ಪಾಕ್ ಎಷ್ಟೇ ಪಿತೂರಿ ನಡೆಸಿದರೂ ನಮ್ಮ ಸೇನೆ ತಕ್ಕ ಉತ್ತರ ನೀಡುತ್ತಲೇ ಬಂದಿದೆ. ಹಾಗಾಗಿ ಗಡಿಯಲ್ಲಿರುವ ಸೈನಿಕರ ರಕ್ಷಣೆಗೆ ಪ್ರಾರ್ಥಿಸಿ ಈ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಬಳಿಕ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಷನ್‌ನ ಅಧ್ಯಕ್ಷ ಅರ್ಜುನ್ ಎಸ್.ರಾವ್ ಮತ್ತು ತಂಡದವರಿಂದ ರಕ್ಷಾ ಸುದರ್ಶನ ಮಹಾಯಾಗ ಹಾಗೂ ಮಂಡ್ಯ ವಿಪ್ರ ಮಹಿಳಾ ಮಂಡಳಿ, ಶ್ರೀಕೃಷ್ಣ ಭಜನಾಮಂಡಳಿ, ಶ್ರೀವತ್ಸ ಭಜನಾ ಮಂಡಳಿಯಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆದ ನಂತರ ಪೂರ್ಣಾಹುತಿ ನಡೆದು, ಪ್ರಸಾದ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಮಂಠೇಸ್ವಾಮಿ, ಕಾರ್ಯದರ್ಶಿ ಯೋಗಾನಂದ, ಗೌರವಾಧ್ಯಕ್ಷ ರಮೇಶ್, ಎಚ್.ರಮೇಶ್, ಜಯರಾಮ್, ನಾಯಕ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ವೆಂಕಟೇಶ್, ಪೇಂಟ್ ಮಹೇಂದ್ರನ್, ಕಾರಸವಾಡಿ ಉದಯ್, ಪುಟ್ಟಸ್ವಾಮಿ, ಆಟೋ ಚಂದ್ರು, ಬಿ.ಕೆ.ರಾಧಾ, ಅರ್ಜುನ್ ಪುರೋಹಿತ್, ಸತೀಶ್ ಶೆಟ್ಟಿ, ಆಟೋ ರಾಜಣ್ಣ, ನಂದೀಶ್, ಎಲ್.ಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.