ಸಾರಾಂಶ
ಹೊಸಪೇಟೆ: ಬಿಜೆಪಿ-ಜೆಡಿಎಸ್ ಪಕ್ಷಗಳು ಮುಡಾ ಹಗರಣದ ಹೆಸರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಕೈಗೊಂಡಿರುವ ಪಾದಯಾತ್ರೆಯನ್ನು ಖಂಡಿಸಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯಪಾಲರು ರಾಜಕೀಯ ದುರುದ್ದೇಶದಿಂದ ನೀಡಿರುವ ನೋಟಿಸ್ ಹಿಂಪಡೆಯಲು ಒತ್ತಾಯಿಸಿ ವಿಜಯನಗರ ಜಿಲ್ಲಾ ಅಹಿಂದ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಸಾಯಿಬಾಬಾ ವೃತ್ತದಿಂದ ಆರಂಭಗೊಂಡ ಮೆರವಣಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ರ್‍ಯಾಲಿಯಾಗಿ ಮಾರ್ಪಟ್ಟಿತು.ಮೆರವಣಿಗೆ ವೇಳೆ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರ ವಿರುದ್ಧ ಘೋಷಣೆ ಮೊಳಗಿಸಿದರು.
ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಹಗರಣ ಮಾಡಿಲ್ಲ. ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿದ್ದರು. ಜೆಡಿಎಸ್‌ನ ಕುಮಾರಸ್ವಾಮಿ ಕಾಲದಲ್ಲೂ ಹಗರಣ ನಡೆದಿದೆ. ಈಗ ಇವರು ಪಾದಯಾತ್ರೆ ಮಾಡುತ್ತಿಲ್ಲ. ಪಾಪದ ಯಾತ್ರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ ತರಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿದ್ದರಾಮಯ್ಯ ಅವ್ಯವಹಾರ ನಡೆಸಿಲ್ಲ. ಆದರೂ ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ರಾಜಭವನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಿಎಂಗೆ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ಮುಡಾದಿಂದ ಸಿಎಂ ಪತ್ನಿ ಅವರ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಜಮೀನು ಕಳೆದುಕೊಂಡಿದ್ದಕ್ಕೆ ಸೈಟ್‌ಗಳನ್ನು ನಿಯಮಾನುಸಾರ ಪರಿಹಾರ ರೂಪದಲ್ಲಿ ನೀಡಲಾಗಿದೆ. ಈಗಾಗಲೇ ಕ್ಯಾಬಿನೆಟ್ ಮೂಲಕ ನಿರ್ಣಯ ತೆಗೆದುಕೊಂಡು ರಾಜ್ಯಪಾಲರಿಗೆ ಉತ್ತರ ನೀಡಲಾಗಿದೆ. ಹೀಗಿದ್ದರೂ ಪಾದಯಾತ್ರೆ ಶುರು ಮಾಡಿಕೊಂಡಿದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ಸಿಎಂಗೆ ತೊಂದರೆ ಕೊಟ್ಟರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದರು.
ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಕಳಂಕ ಇಲ್ಲ. ಆದರೂ ಈಗ ನಡೆಯದೇ ಇದ್ದ ಹಗರಣದಲ್ಲಿ ಅವರನ್ನು ಸಿಲುಕಿಸಲು ಹೊರಟಿದ್ದಾರೆ. ಬಡ ರೈತ ಕುಟುಂಬದಿಂದ ಬಂದು, ಮುಖ್ಯಮಂತ್ರಿ ಆಗಿದ್ದಾರೆ. ಅವರಿಗೆ ವ್ಯವಹಾರ ಮಾಡುವುದೇ ಗೊತ್ತಿಲ್ಲ. ಸದಾ ಬಡವರ ಬಗ್ಗೆ ಕಾಳಜಿ ಹೊಂದಿದ್ದಾರೆ. ಇದನ್ನು ಸಹಿಸದೇ ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ಮಾಡುತ್ತಿದ್ದಾರೆ. ಮುಡಾದಲ್ಲಿ ಅವರ ಜಮೀನಿನ ಬಗ್ಗೆ ಸಿಎಂಗೆ ಗೊತ್ತಿರಲಿಕ್ಕಿಲ್ಲ. ಆದರೂ ಸುಮ್ಮನೆ ಸೈಟ್ ತೆಗೆದುಕೊಂಡಿದ್ದಾರೆ ಎಂದು ಆರೋಪ ಹೊರಿಸಲಾಗುತ್ತಿದೆ ಎಂದು ದೂರಿದರು.ಮಾಜಿ ಶಾಸಕ ಸಿರಾಜ್ ಶೇಕ್ ಮಾತನಾಡಿ, ಎಲ್ಲ ಪಕ್ಷದ ಶಾಸಕರು ಜಿ-ಕೆಟಗರಿ ಸೈಟ್ ಪಡೆದಿದ್ದಾರೆ. ಇದನ್ನು ನಾವು ಹಗರಣ ಎಂದು ಹೇಳಲಾಗುತ್ತದೆಯೇ? ಹಾಗೆಯೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಜಮೀನು ಕಳೆದುಕೊಂಡಿದ್ದಕ್ಕೆ, ಮುಡಾದಿಂದ ನಿಯಮಾನುಸಾರ ಸೈಟ್ ಪರಿಹಾರದ ರೂಪದಲ್ಲಿ ಪಡೆದಿದ್ದಾರೆ. ಇದನ್ನೇ ಹಗರಣ ಎಂದು ಸೃಷ್ಟಿ ಮಾಡಲಾಗಿದೆ ಎಂದರು.
ಹುಡಾ ಅಧ್ಯಕ್ಷ ಎಚ್.ಎನ್‌ಎಫ್ ಇಮಾಮ್ ನಿಯಾಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕುರಿ ಶಿವಮೂರ್ತಿ, ಮುಖಂಡರಾದ ಕೆ.ಎಂ. ಹಾಲಪ್ಪ, ಎಲ್.ಸಿದ್ದನಗೌಡ, ರಾಣಿ ಸಂಯುಕ್ತಾ, ಕವಿತಾ ಸಿಂಗ್, ಬಣ್ಣದಮನೆ ಸೋಮಶೇಖರ್, ನಿಂಬಗಲ್ ರಾಮಕೃಷ್ಣ, ರಾಮಪ್ಪ, ದೂದಾ ನಾಯ್ಕ, ಗುಜ್ಜಲ ನಾಗರಾಜ, ಗುಜ್ಜಲ ನಿಂಗಪ್ಪ, ಸಯ್ಯದ್ ಮೊಹಮ್ಮದ್, ಸಣ್ಣಮಾರೆಪ್ಪ, ವಿನಾಯಕ ಶೆಟ್ಟರ್, ಶಾಹೀರಾಬಾನು, ಯೋಗಲಕ್ಷ್ಮಿ, ರಂಗಮ್ಮ, ಕೆ. ಮಹೇಶ್, ಎಚ್. ಮಹೇಶ್, ಉದ್ದೇದಪ್ಪ ಸೇರಿದಂತೆ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಹಿಂದ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.