ಗದಗದಲ್ಲಿ ಕೇಕ್‌ನಲ್ಲಿ ಅರಳಿದ ರಾಮಮಂದಿರ

| Published : Jan 19 2024, 01:46 AM IST

ಸಾರಾಂಶ

ಬೇಕರಿ ಮಾಲೀಕರ ವಿನೂತನ ಪ್ರಯತ್ನದಲ್ಲಿ ಕೇಕ್‌ನಲ್ಲಿ ರಾಮಮಂದಿರ ನಿರ್ಮಿಸಲಾಗಿದೆ. ಈ ಕೇಕ್ ಜತೆ ಸೆಲ್ಫಿ ತೆಗೆಸಿಕೊಳ್ಳುತ್ತಿರುವ ಗ್ರಾಹಕರು ಸಂತೋಷಪಡುತ್ತಿರುವ ಘಟನೆ ಗದಗದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಗದಗ

ಶ್ರೀರಾಮ ಮಂದಿರದ ಉದ್ಘಾಟನೆಗೆ ದಿನಗಣನೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಎಲ್ಲರ ದೃಷ್ಟಿ ಅಯೋಧ್ಯೆಯತ್ತ ನೆಟ್ಟಿದೆ. ಆದರೆ ಗದಗ ನಗರದ ಜನರಿಗೆ ಬೇಕರಿಯೊಂದರಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೂ ಮೊದಲೇ ಲಭ್ಯವಾಗಿದ್ದು, ಜನರು ಆಸಕ್ತಿಯಿಂದ ಬೇಕರಿಗೆ ಬಂದು ಶ್ರೀರಾಮ ಮಂದಿರದೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ.

ಗದಗ ನಗರದ ಮುಳಗುಂದ ರಸ್ತೆಯಲ್ಲಿರುವ ಸಾಸನೂರ ಬೇಕರಿಯ ಮಾಲೀಕರು ಮತ್ತು ಅಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಶ್ರದ್ಧಾ ಭಕ್ತಿಯಿಂದ ಶ್ರೀರಾಮ ಮಂದಿರವನ್ನು ಕೇಕ್‌ನಲ್ಲಿ ನಿರ್ಮಿಸಿದ್ದಾರೆ. ಕಳೆದ 8 ದಿನಗಳಿಂದ ನಿರಂತರವಾಗಿ ಯೂಟ್ಯೂಬ್‌ ಮತ್ತು ಗೂಗಲ್ ಮೂಲಕ ನೋಡಿಕೊಂಡು ಕೇಕ್ ನಿರ್ಮಾಣಕ್ಕಾಗಿ ಶ್ರಮಿಸಿರುವ ಕಾರ್ಮಿಕರು ಅತ್ಯಂತ ಸುಂದರವಾದ ಶ್ರೀರಾಮ ಮಂದಿರವನ್ನು ಕೇಕ್‌ನಲ್ಲಿ ಕಟ್ಟಿದ್ದಾರೆ. ನಿರ್ಮಾಣವಾಗಿರುವ ಈ ಕೇಕ್ ಶುಗರ್ ಪೇಸ್ಟ್‌ನಿಂದ ಕೂಡಿದ್ದು, ಶುದ್ಧ ಸಸ್ಯಹಾರಿ‌ಯಾಗಿದೆ. ಇದನ್ನು ಒಂದು ತಿಂಗಳವರೆಗೆ ಸಂಗ್ರಹಿಸಿಟ್ಟರೂ ಕೆಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ.

ಜ. 22ರಂದು ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದ್ದು, ಅದೇ ದಿನ ಈ ಬೃಹತ್ ಕೇಕ್‌ ಅನ್ನು ತಮ್ಮ ಬೇಕರಿಯ ಮುಂಭಾಗದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಂಡಿರುವ ಬೇಕರಿ ಮಾಲೀಕರು, ಅಂದು ಬೇಕರಿಗೆ ಬರುವ ಪ್ರತಿಯೊಬ್ಬರಿಗೂ ಶ್ರೀರಾಮ ಮಂದಿರದ ಉದ್ಘಾಟನೆಯ ಉಡುಗೊರೆ ನೀಡಲಿದ್ದಾರೆ. ಅಂದೇ ಸಂಪೂರ್ಣ ಕೇಕ್‌ ಅನ್ನು ಸಾರ್ವಜನಿಕರಿಗೆ ಅರ್ಪಿಸುವ ಯೋಜನೆ ಹಾಕಿಕೊಂಡಿದ್ದಾರೆ.