ರಾಮ ಮಂದಿರ ಲೋಕಾರ್ಪಣೆ, ಗೋಕರ್ಣದಲ್ಲಿ ಸಂಭ್ರಮ

| Published : Jan 22 2024, 02:18 AM IST

ಸಾರಾಂಶ

ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ ವಿವಿಧ ಕಾರ್ಯಕ್ರಮ ನಡೆಯುತ್ತಿದ್ದು, ಪುಣ್ಯಕ್ಷೇತ್ರ ಶೃಂಗಾರಗೊಂಡಿದೆ.

ಗೋಕರ್ಣ: ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯ ದಿನವಾದ ಇಂದು ಪುಣ್ಯ ಕ್ಷೇತ್ರದಲ್ಲಿ ಅಹೋರಾತ್ರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಇಲ್ಲಿನ ಮುಖ್ಯ ಕಡಲತೀರದಲ್ಲಿರುವ ರಾಮ ಮಂದಿರದಲ್ಲಿ ಸಂಹಿತಾ ಸ್ವಾಹಾಕಾರ ಯಾಗ ಈಗಾಗಲೇ ನಡೆಯುತ್ತಿದ್ದು, ಸೋಮವಾರ ಮುಂಜಾನೆ ಪುಣ್ಯಾವಾಚನ, ಶ್ರೀರಾಮ ತಾರಕ ಜಪ, ಹವನ ನಡೆಯಲಿದೆ. ಸಾಮೂಹಿಕ ಪ್ರಾರ್ಥನೆ, ಮಹಾಮಂಗಳಾರತಿ ನಡೆಯಲಿದ್ದು, ಸಂಜೆ ನಾಲ್ಕು ಗಂಟೆಗೆ ಶ್ರೀರಾಮನ ಪಲ್ಲಕ್ಕಿ ಉತ್ಸವ ಚಿನ್ನದಕೇರಿ ಮಾರ್ಗವಾಗಿ ಮೇಲಿನಕೇರಿ ಮಾರುತಿ ಕಟ್ಟೆಗೆ ತಲುಪಿ ಅಲ್ಲಿಂದ ಗಂಜಿಗದ್ದೆ, ರಥಬೀದಿ ಮಾರ್ಗವಾಗಿ ಮಂದಿರಕ್ಕೆ ಮರಳಲಿದೆ. ಆನಂತರ ದೀಪಾರಾಧನೆ, ಸಾಗರಾರತಿ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ. ಶ್ರೀದೇವರ ಉತ್ಸವ ಶೋಭಾಯಾತ್ರೆ ಎಲ್ಲರನ್ನು ಆಕರ್ಷಿಸಲಿದೆ. ರಾತ್ರಿ ರಥಬೀದಿಯಲ್ಲಿ ರಾಮಪಟ್ಟಾಭಿಷೇಕ ಯಕ್ಷಗಾನ ಪ್ರದರ್ಶನ ಸಹ ನಡೆಯಲಿದೆ. ಈ ಕಾರ್ಯವನ್ನು ಇಲ್ಲಿ ರಾಮಂದಿರದ ಸಮಿತಿ ಹಾಗೂ ವಿವಿಧ ಸಂಘಟನೆ ಮತ್ತು ಊರ ನಾಗರಿಕರ ಸಹಕಾರದಲ್ಲಿ ಏರ್ಪಡಿಸಲಾಗಿದೆ.

ಇನ್ನೂ ಉಪಾಧಿವಂತ ಮಂಡಳ, ಸಾಂಸ್ಕೃತಿಕ ಪ್ರತಿಷ್ಠಾನ, ಶ್ರೀಕೃಷ್ಣ ವೇದ ಪ್ರತಿಷ್ಠಾನದಿಂದ ಒಟ್ಟೂ ಹದಿನೈದು ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಿದೆ. ಮಹಾಬಲೇಶ್ವರ ಮಂದಿರದಲ್ಲಿ ಈಗಾಗಲೇ ಶಿವಪದ ವೇದಿಕೆಯಲ್ಲಿ ಭವ್ಯ ರಾಮನ ಭಾವಚಿತ್ರಕ್ಕೆ ಆಕರ್ಷಕ ಅಲಂಕರ ಮಾಡಲಾಗಿದೆ. ಎಲ್ಲೆಡೆ ಕೇಸರಿ ಪತಾಕಿ ಹಾಕಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ. ಸಂಜೆ ದೀಪೋತ್ಸವ, ಭಕ್ತರಿಗೆ ಸಿಹಿ ವಿತರಣೆ ನಡೆಯಲಿದೆ. ಎಲ್‌ಇಡಿ ಪರದೆ ಅಳವಡಿಸಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.ಇದರಂತೆ ಮೇಲಿನಕೇರಿ ಮಾರುತಿ ದೇವಸ್ಥಾನದಲ್ಲಿ ಪವಮಾನ ಶಾಂತಿ ಹಾಗೂ ವಿಶೇಷ ಪೂಜೆ, ಭದ್ರಕಾಳಿ ದೇವಸ್ಥಾನ ಚಂಡಿ ಹೋಮ ಹಾಗೂ ವಿಶೇಷ ಪೂಜೆ, ಶ್ರೀ ರಘೂತ್ತಮ ಮಠದಲ್ಲಿ ರಾಮ ತಾರಕ ಹವನ ಯಜ್ಞ, ಕೋಟಿತೀರ್ಥದ ಕೋಟೇಶ್ವರ ರುದ್ರಾಭಿಷೇಕ, ತೀರ್ಥ ಗಣಪತಿಯಲ್ಲಿ ವಿಶೇಷ ಪೂಜೆ, ಬಟ್ಟೆ ಗಣಪತಿ ದೇವಸ್ಥಾನದಲ್ಲಿ ಸಹಸ್ರಾಧಿಕ ಸಂಖ್ಯೆಯಲ್ಲಿ ಅಥರ್ವಶೀರ್ಷ ಹವನ ಹಾಗೂ ವಿಶೇಷ ಪೂಜೆ, ವರದೇಶ್ವರ ಮಂದಿರದಲ್ಲಿ ಕ್ಷೀರಾಭಿಷೇಕ ಹಾಗೂ ವಿಶೇಷ ಪೂಜೆ, ಕೃಷ್ಣಾಪುರದಲ್ಲಿ ವಿಷ್ಣು ಸಹಸ್ರನಾಮ ಹಾಗೂ ತುಳಸಿ ಅರ್ಚನೆ, ನರಸಿಂಹ ದೇವಸ್ಥಾನ ಮತ್ತು ಕಾಲ ಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹನುಮಂತೇಶ್ವರ ಏಕಾದಶ ರುದ್ರ, ಸುಡುಗಾಡು ಸುಬ್ರಹ್ಮಣ್ಯ ಮಂದಿರದಲ್ಲಿ ಫಲ ಪಂಚಾಮೃತ ಅಭಿಷೇಕ, ಶ್ರೀ ಮಹಾಗಣಪತಿ ದೇವಸ್ಥಾನ ಮಂದಿರದಲ್ಲಿ ಗಣಹವನ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ, ಬಲಮುರಿ ಗಣಪತಿ ಮಂದಿರದಲ್ಲಿ ಸಕ್ಕರೆ ಕಣಜ, ಪಿತೃಸ್ಥಾಲೀಶ್ವರ ದೇವರಲ್ಲಿ ವಿಶೇಷ ಪೂಜೆ ಹಾಗೂ ಕಮಲ ಪುಷ್ಪಾರ್ಚನೆ, ಹನುಮ ಜನ್ಮಭೂಮಿಯಲ್ಲಿ ಸುಂದರ ಕಾಂಡ ಪಾರಾಯಣ ನಡೆಯಲಿದೆ.ಶೃಂಗಾರಗೊಂಡಿದೆ ಪುಣ್ಯ ಕ್ಷೇತ್ರ:ಮೇಲಿನಕೇರಿ ಮಾರುತಿ ಕಟ್ಟೆಯಿಂದ ಮುಖ್ಯಕಡಲತೀರದ ರಾಮ ಮಂದಿರದ ವರೆಗೆ ಕೇಸರಿ ಪತಾಕಿ, ವಿದ್ಯುತ್ ದೀಪಾಲಂಕರ ಮಾಡಲಾಗಿದ್ದು, ಪುಣ್ಯಕ್ಷೇತ್ರ ಸಂಪೂರ್ಣ ಕೇಸರಿಮಯವಾಗಿ ಎಲ್ಲೆಡೆ ಭಕ್ತಿ ಭಾವದ ಸೆಲೆ ಎದ್ದು ಕಾಣುತ್ತಿದೆ. ಇದರಂತೆ ಕೋಟಿತೀರ್ಥಕ್ಕೆ ಸಾಗುವ ಮಾರ್ಗ ಹಾಗೂ ಕೋಟಿತೀರ್ಥ ಕಟ್ಟೆಯನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಎಲ್ಲ ಮಂದಿರಗಳನ್ನು ವಿಶೇಷವಾಗಿ ಶೃಂಗರಿಸಲಾಗಿದ್ದು, ಪರಶಿವನ ಆತ್ಮಲಿಂಗವಿರುವ ಸ್ಥಳ ವಿಶೇಷವಾಗಿ ಆಕರ್ಷಿಸುತ್ತಿದೆ. ಬಹುತೇಕ ಎಲ್ಲ ವಾಹನದಲ್ಲಿ ಜೈ ಶ್ರೀರಾಮ ಎಂದು ಬರೆದ ಕೇಸರಿ ಪತಾಕೆ ರಾರಾಜಿಸುತ್ತಿದೆ.