ಇದು ಕೇವಲ ಹುಂಡಿ ಹಣದ ಲೂಟಿ ಅಲ್ಲ. ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಕೋಟ್ಯಂತರ ಜನರು ನೀಡಿದ ದೇಣಿಗೆ ಹಣದಲ್ಲೇ ಅವ್ಯವಹಾರ ನಡೆದಿದೆ.
ಕೊಪ್ಪಳ: ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಜನರು ನೀಡಿದ ದೇಣಿಗೆ ಹಣದಲ್ಲೂ ಭಾರೀ ಅವ್ಯವಹಾರ ನಡೆದಿದೆ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದರು. ಮಹಮ್ಮದ್ ಘಜ್ನಿ ಮತ್ತು ಮಹಮ್ಮದ್ ಘೋರಿ ಸೋಮನಾಥ ದೇವಸ್ಥಾನವನ್ನು ಲೂಟಿ ಮಾಡಿದಂತೆ ಇಂದು ರಾಮ ಮಂದಿರದ ಹೆಸರಿನಲ್ಲಿ ಸಂಗ್ರಹವಾದ ಹಣ ಲೂಟಿ ಮಾಡಲಾಗಿದೆ. ಘಜ್ನಿ, ಘೋರಿ ಹಾಗೂ ಬಿಜೆಪಿಯವರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ವಾಗ್ದಾಳಿ ನಡೆಸಿದರು.ಇದು ಕೇವಲ ಹುಂಡಿ ಹಣದ ಲೂಟಿ ಅಲ್ಲ. ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಕೋಟ್ಯಂತರ ಜನರು ನೀಡಿದ ದೇಣಿಗೆ ಹಣದಲ್ಲೇ ಅವ್ಯವಹಾರ ನಡೆದಿದೆ. ಆ ಹಣ ಲೂಟಿ ಮಾಡಿ ಬಿಜೆಪಿ ನಾಯಕರು, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಶ್ರೀಮಂತವಾಗಿದೆ ಎಂದು ಆರೋಪಿಸಿದರು.
ಜನರ ಭಾವನೆ ಕೆರಳಿಸಿ ರಾಜಕೀಯ ಮಾಡುವುದು ಬಿಜೆಪಿಯ ಉದ್ದೇಶವಾಗಿದೆ. ಅವರಿಗೆ ಹಿಂದುತ್ವದ ಬಗ್ಗೆ ನಿಜವಾದ ಕಾಳಜಿ ಇಲ್ಲ. ಹಿಂದುತ್ವದ ಮುಖವಾಡ ಹಾಕಿಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.ರಾಮ ಮಂದಿರ ನಿರ್ಮಾಣದ ವಿರುದ್ಧ ಕಾಂಗ್ರೆಸ್ ಎಂದಿಗೂ ನ್ಯಾಯಾಲಯಕ್ಕೆ ಹೋಗಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ದೇಶದ ಜನರೆಲ್ಲರೂ ದೇಣಿಗೆ ನೀಡಿದ್ದಾರೆ. ಆದ್ದರಿಂದ ಈ ಹಣದ ಬಳಕೆಯ ಬಗ್ಗೆ ಜನರಿಗೆ ಪ್ರಶ್ನಿಸುವ ಹಕ್ಕಿದೆ ಎಂದರು.
ಅಷ್ಟೊಂದು ಗಂಭೀರ ಆರೋಪಗಳಿದ್ದರೂ ಪ್ರಧಾನಿ ನರೇಂದ್ರ ಮೋದಿ ತನಿಖೆಗೆ ಮುಂದಾಗದಿರುವುದು ಅನುಮಾನ ಹುಟ್ಟಿಸುತ್ತದೆ. ಈ ಪ್ರಕರಣ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು. ಬಿಜೆಪಿಯವರು ಕೇವಲ ಹಣವನ್ನಷ್ಟೇ ಅಲ್ಲ, ಜನರ ವಿಶ್ವಾಸ ಲೂಟಿ ಮಾಡಿದ್ದಾರೆ. ಅವರಿಗೆ ಜನರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಪ್ರಧಾನಿ ಮೋದಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಆಗ್ರಹಿಸಿದರು.ಕಾನೂನು ಬದ್ಧ ನೋಂದಣಿ ಮಾಡಿಕೊಳ್ಳಲಿ:ಆರ್‌ಎಸ್‌ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಸಮರ್ಥಿಸಿಕೊಂಡು ಮಾತನಾಡಿದ ಸಚಿವ ಶರಣ್ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ ಹೇಳಿರುವುದು ಸರಿಯೇ ಇದೆ. ಆರ್‌ಎಸ್‌ಎಸ್ ಒಂದು ಸಂಘಟನೆಯಾಗಿದ್ದು, ಅದು ನೋಂದಣಿ ಆದರೆ ತಪ್ಪೇನಿದೆ? ದೇಶಾದ್ಯಂತ ಸಂಘಟನೆ ನಡೆಸುತ್ತೇವೆ, ಪಥಸಂಚಲನ ಮಾಡುತ್ತೇವೆ ಎನ್ನುವವರು ಕಾನೂನುಬದ್ಧವಾಗಿ ನೋಂದಣಿ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದರು.
ಕಲ್ಲು ಕ್ವಾರಿ ಬ್ಲಾಸ್ಟ್: ಯಶವಂತಪುರದ ಕಲ್ಲು ಕ್ವಾರಿ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ಸಂಪೂರ್ಣ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಗ್ಯಾರಂಟಿ ಸ್ಥಗಿತಗೊಳಿಸಲ್ಲ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಎಂದರೆ ಯೋಜನೆ ನಿಲ್ಲಿಸುವುದಲ್ಲ. ಅನರ್ಹ ಫಲಾನುಭವಿಗಳ ಮಾಹಿತಿ ಪರಿಶೀಲಿಸಿ ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆ ಮಾತ್ರ. ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆ ಮುಂದುವರಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ.ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು ನೀಡಿರುವ ವರದಿಯಲ್ಲಿ, ಮೃತಪಟ್ಟವರ ಹೆಸರಿಗೂ ಹಣ ಜಮೆಯಾಗುತ್ತಿರುವುದು ಸೇರಿದಂತೆ ಕೆಲವು ಲೋಪ ಕಂಡುಬಂದಿವೆ. ಇಂತಹ ದೋಷ ಸರಿಪಡಿಸುವ ಉದ್ದೇಶದಿಂದ ಪರಿಷ್ಕರಣೆ ನಡೆಯುತ್ತಿದೆ, ಇದು ಹಣದ ಕೊರತೆಯಿಂದಲ್ಲ, ಅರ್ಹರಿಗೆ ಮಾತ್ರ ಯೋಜನೆ ತಲುಪುವಂತೆ ಮಾಡುವ ಕ್ರಮ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ಅತಿ ಶೀಘ್ರದಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಯಾವುದೇ ವಿಳಂಬವಾಗಿಲ್ಲ ಎಂದರು.ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಅವರು, ವಿಪಕ್ಷದವರಿಗೆ ಸರ್ಕಾರದ ವಿರುದ್ಧ ಹೇಳುವುದನ್ನು ಬಿಟ್ಟರೆ ಬೇರೆ ಕೆಲಸವಿಲ್ಲ. ವಿಜಯೇಂದ್ರ ಹೇಳಿಕೆ ಪ್ರಕಾರ ಅವರ ಪಕ್ಷದಲ್ಲಿಯೇ ಗೊಂದಲವಿದೆ. ತಮ್ಮ ಒಳಜಗಳ ಮುಚ್ಚಿಕೊಳ್ಳಲು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಹೇಳಿದ್ದರು. ಆದರೆ ಇಂದು ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ. ನಮ್ಮ ಆರ್ಥಿಕ ಪರಿಸ್ಥಿತಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಆಡಳಿತದ ಹಲವು ರಾಜ್ಯಗಳಿಗಿಂತಲೂ ಉತ್ತಮವಾಗಿದೆ ಎಂದು ಹೇಳಿದರು.