ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.22ರಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ದೇವಾಲಯ ಹಾಗೂ ಶ್ರೀರಾಮ ಮಂದಿರಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ. ಪಟ್ಟಣದ ಹೊಳೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಮುಂಜಾನೆ ಪ್ರಾಣ ದೇವರಿಗೆ ಅಭಿಷೇಕದೊಂದಿಗೆ ಪುಷ್ಪಾಲಂಕಾರ ಸೇವೆ ನೆರವೇರಲಿದೆ. 11 ಗಂಟೆ ಸುಮಾರಿಗೆ ಸೀತಾರಾಮ ಲಕ್ಷ್ಮಣ ಸಮೇತ ಪ್ರಾಣದೇವರನ್ನು ಪ್ರತಿಷ್ಠಾಪನೆ ಮಾಡಿ ದೇಗುಲದ ಆವರಣದಲ್ಲಿ ಉತ್ಸವ ನೆರವೇರಲಿದೆ. ಸಂಜೆ ದೀಪೋತ್ಸವ ನಡೆಯಲಿದೆ. ಭಕ್ತಾದಿಗಳು ದೀಪ ಬೆಳಗಿಸುವ ಮೂಲಕ ಶ್ರೀ ರಾಮನ ಜಪ ಮಾಡಲಿದ್ದಾರೆ ಎಂದು ದೇಗುಲದ ಪ್ರಧಾನ ಅರ್ಚಕ ಪ್ರದೀಪಚಾರ್ಯ ತಿಳಿಸಿದರು.ಪಟ್ಟಣದ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದ ಆವರಣದಿಂದ ಹಳೆಯ ಬಸ್ ನಿಲ್ದಾಣ ಸಮೀಪದ ಆಂಜನೇಯ ದೇಗುಲದವರೆಗೆ ಮಹಿಳೆಯರಿಂದ ಆಕರ್ಷಕ ರಂಗೋಲಿ ಬಿಡಿಸುವುದರೊಂದಿಗೆ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯ ಗಳು ನಡೆಯಲಿವೆ.
ಲೀಲಾವತಿ ಬಡಾವಣೆಯಲ್ಲಿರುವ ಪುರಸಭೆ ಉದ್ಯಾನವನ ದ ರಾಮ ಮಂದಿರ. ಹಳೇ ಎಂ.ಸಿ.ರಸ್ತೆಯ ಆಂಜನೇಯ ಸ್ವಾಮಿ ದೇವಾಲಯ. ಕೋಟೆ ಬೀದಿಯ ಶ್ರೀರಾಮ ಮಂದಿರ ದೇವಾಲಯಗಳಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ದಲ್ಲಿ ಬಾಲರಾಮ ಪ್ರತಿಷ್ಠಾಪನೆ ಅಂಗವಾಗಿ ಶ್ರೀ ರಾಮೋತ್ಸವದ ಪೂಜೆ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.ಶಿವಪುರದ ಶ್ರೀರಾಮಮಂದಿರದಲ್ಲಿ ವಿಶೇಷ ಪೂಜಾ ಕಾರ್ಯ
ಮದ್ದೂರು: ಅಯೋಧ್ಯೆಯಲ್ಲಿ ಜ.22ರಂದು ಬಾಲ ಶ್ರೀರಾಮಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪಟ್ಟಣದ ಶಿವಪುರದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗಲಿವೆ.ಬೆಳಗ್ಗೆ ಮಂದಿರದಲ್ಲಿ ಸೀತಾರಾಮ ಲಕ್ಷ್ಮಣ ಮತ್ತು ಆಂಜನೇಯ ಸಮೇತ ಮೂಲ ವಿಗ್ರಹಕ್ಕೆ ಅಭಿಷೇಕ ಮತ್ತು ಹೋಮದ ನಂತರ ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ನೆರವೇರಲಿದೆ. ಬಳಿಕ ರಾಮಮಂದಿರದ ವತಿಯಿಂದ ಶ್ರೀಭೈರವೇಶ್ವರ ದೇಗುಲದ ಆವರಣದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
1992ರಲ್ಲಿ ನಡೆದ ಅಯೋಧ್ಯೆಯ ಕರಸವೇ ಸಂದರ್ಭದಲ್ಲಿ ಶಂಕುಸ್ಥಾಪನೆಗೊಂಡು ಪೇಜಾವರ ಮಠದ ಪೀಠಾಧ್ಯಕ್ಷ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ಶಿವಪುರದ ಶ್ರೀರಾಮ ಮಂದಿರದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಶಿವಪುರ ರಾಮಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.ಮಧ್ಯಾಹ್ನ 2.30 ಸುಮಾರಿಗೆ ಮದ್ದೂರಿನ ಪ್ರವಾಸಿ ಮಂದಿರದ ಆವರಣದಿಂದ ಪ್ರಮುಖ ಬೀದಿಗಳ ಮೂಲಕ ಶ್ರೀ ರಾಮಮಂದಿರದ ವರೆಗೆ ಪುಷ್ಪಾಲಂಕಾರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ ಶ್ರೀರಾಮ ಮಂದಿರದಲ್ಲಿ 28 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜಿ. ಎಂ. ನರಸಿಂಹಮೂರ್ತಿ ಹಾಗೂ 18 ವರ್ಷಗಳ ಕಾಲ ಅರ್ಚಕರಾಗಿ ಕಾರ್ಯನಿರ್ವಹಿಸಿದ ಕೃಷ್ಣಚಾರ್ ಅವರುಗಳನ್ನು ದೇಗುಲದ ಆಡಳಿತ ಮಂಡಳಿ ಹಾಗೂ ಶಿವಪುರ ಗ್ರಾಮಸ್ಥರಿಂದ ಅಭಿನಂದಿಸಲಾಗುವುದು ಎಂದು ಆಡಳಿತ ಮಂಡಳಿಯ ಎಸ್ .ಕೆ. ತಮ್ಮಣ್ಣ ತಿಳಿಸಿದ್ದಾರೆ.