ತಿಪಟೂರಿನಲ್ಲಿ ಝೇಂಕರಿಸಿದ ರಾಮನಾಮೋತ್ಸವ

| Published : Jan 23 2024, 01:48 AM IST

ಸಾರಾಂಶ

ತಿಪಟೂರಿನಲ್ಲಿ ಶ್ರೀರಾಮನ ಸ್ಮರಣೆ

ಕನ್ನಡಪ್ರಭ ವಾರ್ತೆ ತಿಪಟೂರು

ಹಲವು ದಶಕಗಳ ಫಲವಾಗಿ ಅಯೋಧ್ಯೆಯ ಶ್ರೀರಾಮಮಂದಿದರಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾನೆ ಸೋಮವಾರ ವಿಜೃಂಭಣೆಯಿಂದ ನಡೆದಿದ್ದು, ಇದರ ಅಂಗವಾಗಿ ಕಲ್ಪತರು ನಗರಿ ತಿಪಟೂರು ತಾಲೂಕಿನಾದ್ಯಂತ ರಾಮನಾಮೋತ್ಸವವು ವಿಜೃಂಭಿಸಿತು.

ನಗರದ ಹತ್ತಾರು ಕಡೆಗಳಲ್ಲಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ಶ್ರೀಬಾಲರಾಮನ ಪೂಜಾ ಕಾರ್ಯಕ್ರಮವನ್ನು ಸಾರ್ವಜನಿಕರ ವೀಕ್ಷಣೆಗಾಗಿ ಬಿಗ್ ಸ್ಕ್ರೀನ್‌ನಲ್ಲಿ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಗರದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಆರ‍್ಯವೈಶ್ಯ ಮಂಡಲಿ ಇತರೆ ಸಹಯೋಗದೊಂದಿಗೆ ಶ್ರೀರಾಮದೇವರಿಗೆ ಪಂಚಾಮೃತ ಅಭಿಷೇಕ, ಶ್ರೀ ರಾಮ ಭಜನೆ ಮತ್ತು ಹನುಮಾನ್ ಚಾಲೀಸ ಪಠಣ ಮಾಡಲಾಯಿತು. ವಿಶೇಷವಾಗಿ ಶ್ರೀ ವಾಸರಾಯ ಪ್ರತಿಷ್ಠಾಪಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮ ಪಾದುಕೆಗಳನ್ನು ಭಕ್ತರು ಸ್ಪರ್ಶಿಸಿ ನಮಸ್ಕರಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೊಬ್ಬರಿ ಹಾಗೂ ಕೌಟು ವರ್ತಕರು, ಹಮಾಲರ ಸಂಘದಿಂದ ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ತಿಪಟೂರು ಗ್ರಾಮದೇವತೆ ಶ್ರೀಕೆಂಪಮ್ಮದೇವಿ, ಶ್ರೀ ಕಲ್ಲೇಶ್ವರಸ್ವಾಮಿ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆಗಳು ನಡೆದವು. ಇನ್ನೂ ಮನೆ ಮನೆಗೆ ತಲುಪಿಸಿದ್ದ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ಮನೆಮಂದಿಗೆಲ್ಲ ವಿತರಿಸಿ ರಾಮನಕೃಪೆಗೆ ಜನರು ಪಾತ್ರರಾದರು.