ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಪ್ರಜಾರಾಜ್ಯದ ಈ ದಿವಸಗಳಲ್ಲಿ ಪ್ರಜೆಗಳೆಲ್ಲ ರಾಮರಾಗಬೇಕು. ರಾಮಭಕ್ತಿ ಬೇರೆ ಅಲ್ಲ, ದೇಶಭಕ್ತಿ ಬೇರೆ ಅಲ್ಲ, ದೇಶಸೇವೆಯೇ ಶ್ರೀರಾಮನ ಸೇವೆ. ನಾವು ನೀವು ಎಲ್ಲ ಸೇರಿದರೆ ಆಗ ಪೇಜಾವರ ಮಠವಾಗುತ್ತದೆ. ಹೊರತು ಒಬ್ಬ ವ್ಯಕ್ತಿಯಿಂದ ಅಲ್ಲ ಎಂದು ಉಡುಪಿಯ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದ ರಥಬೀದಿಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೇತೃತ್ವದಲ್ಲಿ ಶ್ರೀ ಕಟೀಲು ಪ್ರತಿಷ್ಠಾನ ಸಹಯೋಗದಲ್ಲಿ ಸ್ವಾಮೀಜಿಗೆ ಹುಟ್ಟೂರ ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಆರಾಧನೆ, ಭಜನೆ ಮೂಲಕ ದೇವರ ಅನುಗ್ರಹ ಎಲ್ಲರಿಗೂ ಸಿಗಲಿ. ರೇಡಿಯೋ, ಟಿವಿ ಬರುವ ಮುಂಚೆ ಎಲ್ಲ ಮನೆಗಳಲ್ಲೂ ಭಜನೆ, ತಾಳದ ಶಬ್ದ ಕೇಳುತ್ತಿತ್ತು. ಈಗ ಪ್ರತಿ ಕೈಗೂ ಮೊಬೈಲು ಬಂದು ನಮ್ಮ ಸಂಸ್ಕೃತಿ ಉಳಿಸುವ ಬಗೆ ಯೋಚಿಸಬೇಕಾಗಿದೆ. ಮಕ್ಕಳು ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಏನು ಕೊಟ್ಟಿದ್ದೇವೆ ಎಂಬ ಯೋಚನೆ ಮಾಡಬೇಕಾಗಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.ಕಾಸರಗೋಡು ಉಪ್ಪಳ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಶುಭ ಹಾರೈಸಿದರು.
ಪೇಜಾವರ ಶ್ರೀ ಕರೆಯಂತೆ ಅರ್ಹರಿಗೆ ಐದು ಮನೆ ನಿರ್ಮಾಣದ ಕಾರ್ಯ ಹಾಗೂ ಶಿಬರೂರು ಶಾಲೆಯ ಕೊಠಡಿಗೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯರನ್ನು ಹುಟ್ಟೂರ ಸಂಮಾನದ ಮೂಲಕ ಗೌರವಿಸಲಾಯಿತು. ಅರವತ್ತು ವರ್ಷವನ್ನು ಪೂರೈಸಿದ ಶ್ರೀಗಳನ್ನು ಬೆಳ್ಳಿಯ ಫಲಕ, ೬೦ ಸಾವಿರ ರು. ನಗದು, ಅರವತ್ತು ಫಲವಸ್ತುಗಳನ್ನಿತ್ತು ಸಂಮಾನಿಸಲಾಯಿತು.ಶ್ರೀಗಳ ಪ್ರೇರಣೆಯಂತೆ ಸ್ಥಳೀಯ ರೈತರಿಗೆ 120 ಭತ್ತದ ತಳಿಯ ಬೀಜಗಳನ್ನು ವಿತರಿಸಲಾಯಿತು. ಅಯೋಧ್ಯೆ ರಾಮ ಮಂದಿರದಲ್ಲಿ ಎಲೆಕ್ಟ್ರಿಕ್ ಕೆಲಸವನ್ನು ಮಾಡಿದ ರಾಜೇಶ್ ಶೆಟ್ಟಿ ಅವರಿಗೆ ಸಾಧಕ ಸನ್ಮಾನ, ರಾಜೇಶ್ ಶೆಟ್ಟಿ ಅತ್ತೂರು ಅವರಿಗೆ ಕಟೀಲು ಪ್ರತಿಷ್ಠಾ ಸನ್ಮಾನ ನೀಡಲಾಯಿತು. ಎಂ. ನಾರಾಯಣ್ ಅವರಿಗೆ ಶಿಕ್ಷಕ ಸಂಮಾನ ಮಾಡಲಾಯಿತು.
ಗಾಯಕಿ ಅರುಣಾ ರಾವ್ ಕಟೀಲು , ಭರತನಾಟ್ಯ ಶಿಕ್ಷಕಿ ಶ್ರಾವ್ಯಾ ಕಿಶೋರ್ ಅವರನ್ನು ಸನ್ಮಾನಿಸಲಾಯಿತು.ಗೃಹನಿರ್ಮಾಣದಲ್ಲಿ ಸಹಕರಿಸಿದ ಪ್ರದ್ಯುಮ್ನ ರಾವ್, ಐಕಳ ಗಣೇಶ ಶೆಟ್ಟಿ, ದೊಡ್ಡಯ್ಯ ಮೂಲ್ಯ, ಅಭಿಲಾಷ್ ಶೆಟ್ಟಿ, ಲೋಕಯ್ಯ ಸಾಲ್ಯಾನ್, ಸುಪ್ರೀತ್ ರೈ, ಮೂಲ್ಕಿ ಜೈ ಶ್ರೀ ಕೃಷ್ಣ ಸುಧಾಮ ಪೌಂಡೇಷನ್ ಮುಖ್ಯಸ್ಥ ಸುನಿಲ್ ಆಳ್ವ, ಪ್ರಥ್ವಿರಾಜ್ ಆಚಾರ‍್ಯ ಹಾಗೂ ಅರ್ಹ ಹಿಂದುಗಳಿಗೆ ಮನೆನಿರ್ಮಾಣ ಮಾಡಲು ಎಂಟು ಎಕರೆ ಭೂಮಿ ಉಚಿತವಾಗಿ ನೀಡಲು ಸಿದ್ಧ ಎಂದು ಘೋಷಿಸಿದ ಡಾ. ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರನ್ನು ಕಟೀಲು ದೇವರ ಶೇಷವಸ್ತ್ರವನ್ನಿತ್ತು ಗೌರವಿಸಲಾಯಿತು.
ಕಟೀಲು ಪ್ರತಿಷ್ಠಾನ ನಡೆಸುವ ವಿವಿಧ ತರಗತಿಗಳ ಗುರುಗಳಾದ ವಿದ್ವಾನ್ ಎಂ. ನಾರಾಯಣ್, ಅರುಣಾ ರಾವ್, ಶ್ರಾವ್ಯಾ ಅವರನ್ನು ಗೌರವಿಸಲಾಯಿತು.ದೇವಸ್ಥಾನದ ವೇದವ್ಯಾಸ ತಂತ್ರಿ, ದೇವಸ್ಥಾನನ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ವೇ.ಮೂ. ಲಕ್ಷೀನಾರಾಯಣ ಆಸ್ರಣ್ಣ, ವೇ,ಮೂ. ವೆಂಕಟರಮಣ ಆಸ್ರಣ್ಣ, ವೇ.ಮೂ. ಕಮಲಾದೇವಿ ಪ್ರಸಾದ್ ಆಸ್ರಣ್ಣ , ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕಟೀಲು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಜಿವ ಅಭಯಚಂದ್ರ ಜೈನ್, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಐಕಳ ಗಣೇಶ್ ಶೆಟ್ಟಿ, ಕಟಪಾಡಿ ಅನೆಗುಂದಿ ಶಿಕ್ಷಣ ಸಂಸ್ಥೆಯ ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಸಂಜೀವಿನಿ ಟ್ರಸ್ಟ್ ನ ಅಧ್ಯಕ್ಷ ಡಾ.ಸುರೇಶ್ ರಾವ್ ಕಟೀಲು, ಎಂ.ಬಿ.ಪುರಾಣಿಕ್, ಕಲ್ಕೂರ ಪ್ರತಿಷ್ಢಾನ ಪ್ರದೀಪ್ ಕುಮಾರ್ ಕಲ್ಕೂರ, ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಕರ್ಕೇರ, ಕಾಶೀ ಪಟ್ನ ದೇವಸ್ಥಾನದ ಅನಂತ ಆಸ್ರಣ್ಣ, ಉದ್ಯಮಿ ಶ್ರೀಧರ ಪೂಜಾರಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಮುಂಬಯಿ ಉದ್ಯಮಿ ವೇಣುಗೋಪಾಲ ಶೆಟ್ಟಿ, ಉದ್ಯಮಿ ನಿಶಾನ್ ಉಳ್ಳಾಲ್, ಐಕಳ ಆನಂದ ಶೆಟ್ಟಿ, ಮುಂಬೈಯ ದೇವೇಂದ್ರ ಬುನ್ನನ್, ಮಿರಾ ರೋಡ್ ನ ಉದ್ಯಮಿ ಸುರೇಶ್ ಶೆಟ್ಟಿ, ಪೂನಾದ ಉದ್ಯಮಿ ಪ್ರಕಾಶ್ ಶೆಟ್ಟಿ ಅಜೆಕಾರು, ಪನ್ವೆಲ್ ನ ಉದ್ಯಮಿಗಳಾದ ವಿಶ್ವನಾಥ ಹೆಗ್ಡೆ, ಭಾಸ್ಕರ್ ಅಳ್ವ, ರಾಘವೇಂದ್ರ ಭಟ್ ಮತ್ತಿತರರು ಇದ್ದರು.
ಸಭಾ ಕಾರ‍್ಯಕ್ರಮದ ಮೊದಲು ಪೇಜಾವರ ಶ್ರೀಗಳನ್ನು ವೈಭವದ ಮೆರವಣಿಗೆಯಲ್ಲಿ ಕರೆತರಲಾಯಿತು. ಶ್ರೀ ಕಟೀಲು ಪ್ರತಿಷ್ಟಾನದ ವಿದ್ಯಾರ್ಥಿಗಳಿಂದ ಭರತನಾಟ್ಯ, ಸಂಗೀತ, ಕುಣಿತ ಭಜನೆ, ಸತ್ಯಹರಿಶ್ಚಂದ್ರ ನಾಟಕ ಪ್ರದರ್ಶನಗೊಂಡಿತು.ಅನಂತಪದ್ಮನಾಭ ಆಸ್ರಣ್ಣ ಸ್ವಾಗತಿಸಿದರು. ಶ್ರೀ ಹರಿನಾರಾಯಣ ಆಸ್ರಣ್ಣ ಅಭಿನಂದನಾ ಭಾಷಣ ಮಾಡಿದರು. ಸಾಯಿನಾಥ ಶೆಟ್ಟಿ ಮತ್ತು ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು. ಭಜನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಎಲ್ಲಿಯೂ ಕುಣಿತ ಭಜನೆ ಮಾಡಬಹುದು: ಪೇಜಾವರ ಶ್ರೀಕುಣಿತ ಭಜನೆ ಕುರಿತು ಎದ್ದಿರುವ ಆಕ್ಷೇಪಗಳ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪೇಜಾವರ ಶ್ರೀ, ಕುಣಿತ ಭಜನೆ ಸ್ವ ಇಚ್ಛೆಯಿಂದ ಎಲ್ಲಿ ಕೂಡ ಮಾಡಬಹುದು. ಅದಕ್ಕೆ ವಿರೋಧವಿಲ್ಲ. ಆದರೆ ಬಲಾತ್ಕಾರದಿಂದ ಒತ್ತಾಯ ಮಾಡಿ ಮಾಡಬಾರದು. ಅದಕ್ಕೆ ವಿರೋಧವಿದೆ ಎಂದರು.