ಸಾರಾಂಶ
ಗೋಕರ್ಣ: ರಾಮಚಂದ್ರಾಪುರ ಮಠ (ಆದ್ಯ ರಘೂತ್ತಮ ಮಠ) ಹಾಗೂ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು ಗೋಕರ್ಣ ದೇವಾಲಯ ಮತ್ತು ಶ್ರೀಮಠದ ನಡುವಿನ ಸಂಬಂಧದ ಬಗೆಗಿನ ದಾಖಲೆಗಳ ಅನಾವರಣದ ಬಳಿಕ ಆಶೀರ್ವಚನ ನೀಡಿದರು.ಗೋಕರ್ಣ ಮಂಡಲಾಚಾರ್ಯತ್ವ ಮತ್ತು ಮಹಾಬಲೇಶ್ವರನ ವಿಧಿವತ್ತಾದ ಅರ್ಚನೆಯ ಎರಡು ಅನುಜ್ಞೆಯನ್ನು ಶಂಕರರು ನಮ್ಮ ಮಠದ ಪ್ರಥಮಾಚಾರ್ಯರಾದ ವಿದ್ಯಾನಂದರಿಗೆ ನೀಡಿದರು. ಶ್ರೀಸಂಸ್ಥಾನ ಮಹಾಬಲೇಶ್ವರ ದೇವಸ್ಥಾನ ಎನ್ನಲಾಗುತ್ತದೆ. ಮಹಾಬಲೇಶ್ವರ ದೇವಸ್ಥಾನದ ಪಶ್ಚಿಮ ಪಡಸಾಲೆಯಲ್ಲಿ ಮಠ ಇತ್ತು. ದೇವಾಲಯ ನಿರ್ವಹಣೆಗಾಗಿಯೇ ಇತ್ತು. ಪೂರ್ವಾಚಾರ್ಯರ ಸಮಾಧಿಗಳೂ ಇಲ್ಲೇ ಇದ್ದವು. ಮಹಾಬಲೇಶ್ವರ ದೇವಾಲಯದ ವ್ಯವಸ್ಥೆಗಾಗಿಯೇ ಮಠದಲ್ಲಿ ಉತ್ತರಾಧಿಕಾರಿಗಳನ್ನು ನೇಮಕ ಮಾಡುವ ಪದ್ಧತಿ ಇತ್ತು. 33ನೇ ಯತಿಗಳು ಒಂದು ತಿಂಗಳು ಇಲ್ಲೇ ಇದ್ದು, ರಥವನ್ನು ದುರಸ್ತಿ ಮಾಡಿಸಿದ ನಿದರ್ಶನಗಳಿವೆ ಎಂದರು.ಪೂರ್ವಪರಂಪರೆಗೆ ಅನುಸಾರವಾಗಿ ಪೂಜೆ, ಉತ್ಸವಗಳು ನಡೆಯಬೇಕು. ದೇವಹಿತ, ಕಿಂಕರಹಿತ ಭಕ್ತಹಿತವನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಅನಾವರಣಗೊಂಡಿರುವ ದಾಖಲೆಗಳು ಪ್ರಶ್ನಾತೀತ ಎಂದರು.ಗುರಿಕ್ಕಾರರ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಗುರಿಕ್ಕಾರರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅವರು, ರಾಮದೇವರ ಪರವಾಗಿ ಸಂಸ್ಥಾನ. ಸಂಸ್ಥಾನದ ಪರವಾಗಿ ಇರುವವರು ಗುರಿಕ್ಕಾರರು. ಆಶೀರ್ವಾದ ಮಾತ್ರ ಅವರಿಗೆ ಸಲ್ಲುವ ಸಂಭಾವನೆ. ಅತ್ಯಂತ ನಿಷ್ಠೆ- ಶ್ರದ್ಧೆಯಿಂದ ಮುಪ್ಪನ್ನೂ ಮರೆತು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡುತ್ತಾರೆ. ಹೊಸ ತಲೆಮಾರಿನಲ್ಲಿ ಗುರಿಕ್ಕಾರರಾಗಲು ಹಿಂಜರಿಕೆ ಕಾಣುತ್ತಿದೆ. ಜಾಂಬವಂತರಿಗೆ ಹನುಮಂತನಂತೆ ಯುವಕರು ಈ ಕಾರ್ಯಕ್ಕೆ ಸಜ್ಜಾಗಬೇಕು ಎಂದರು.ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರು ಶ್ರೀಗಳ ಆಶೀರ್ವಾದ ಪಡೆದರು. 34ನೇ ಗುರುಗಳ ಪೂರ್ವಾಶ್ರಮ ಪರಂಪರೆಯ ವಿನಾಯಕ ರಮಣಿ ಭಟ್ ಗೋಕರ್ಣದ ದಾಖಲೆಗಳನ್ನು ಅನಾವರಣಗೊಳಿಸಿದರು. ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಳ್ಳೇರಿಯಾ ಮಂಡಲದ ಪ್ರಧಾನ ಗುರಿಕ್ಕಾರರಾದ ಮೊಗ್ರ ಸತ್ಯನಾರಾಯಣ ಭಟ್ ಗುರಿಕ್ಕಾರರ ಕಾರ್ಯಚಟುವಟಿಕೆ ಬಗ್ಗೆ ವಿವರ ನೀಡಿದರು.
ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಳ್, ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ಶ್ರೀಶ ಶಾಸ್ತ್ರಿ, ಅರವಿಂದ ಬಂಗಲಗಲ್ಲು ಮತ್ತಿತರರು ಉಪಸ್ಥಿತರಿದ್ದರು.