ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲೊಂದಾದ ಈದ್ ಉಲ್-ಫಿತರ್‌ನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಗುರುವಾರ ಆಚರಿಸಿದರು.ತೀವ್ರ ಬರ, ಬಿರುಬಿಸಿಲು, ಲೋಕಸಭಾ ಚುನಾವಣೆ ಘೊಷಣೆ ನಡುವೆಯೂ ರಾಯಚೂರು ಮಾನ್ವಿ, ದೇವದುರ್ಗ, ಅರಕೇರಾ, ಸಿರವಾರ, ಲಿಂಗಸುಗೂರು, ಮಸ್ಕಿ ಮತ್ತು ಸಿಂಧನೂರು ತಾಲೂಕುಗಳ ನಗರ, ಪಟ್ಟಣ ಹಾಗೂ ಹೋಬಳಿ ಮತ್ತು ಗ್ರಾಮೀಣ ಭಾಗದಲ್ಲಿ ರಂಜಾನ್ ಹಬ್ಬದ ಸಂಭ್ರಮವು ಮನೆ ಮಾಡಿತ್ತು.
ಪವಿತ್ರ ರಂಜಾನ್ ಮಾಸದ ನಿಮಿತ್ತ ಕಳೆದ ಒಂದು ತಿಂಗಳಿನಿಂದ ಉಪವಾಸ ವ್ರತ ಆಚರಣೆ ಮಾಡಿದ ನಿತ್ಯ ಪ್ರಾರ್ಥನೆ, ಇಫ್ತಿಯಾರ್ ಕೂಟ ನಿರಂತರವಾಗಿ ಹಮ್ಮಿಕೊಂಡು ಹಬ್ಬದ ದಿನಗಳನ್ನು ಸವಿದರು.ರಂಜಾನ್ ಹಿನ್ನೆಲೆ ಬುಧವಾರ ರಾತ್ರಿ ಬಡೇ ರಾತ್ ನಿಮಿತ್ತ ಮುಸ್ಲಿಂ ಸಮುದಾಯದ ಮುಖಂಡರು, ಮಹಿಳೆಯರು, ಯುವಕರು, ಮಕ್ಕಳು ಮಾರುಟ್ಟೆಯಲ್ಲಿ ಹಬ್ಬದ ಸಾಮಗ್ರಿ ಖರೀದಿಸಿದರು. ಗುರುವಾರ ಮುಂಜಾನೆ ಹೊಸ ಬಟ್ಟೆ ತೊಟ್ಟು, ಆಯಾ ಊರುಗಳಲ್ಲಿನ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷವಾಗಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ನಂತರ ಪರಸ್ಪರ ಹಬ್ಬದ ಶುಭಾಶಯಗಳ ವಿನಿಮಯ ಮಾಡಿಕೊಂಡರು.
ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬ ಸದಸ್ಯೆರು ಹಾಗೂ ನೆರೆಹೊರೊಂದಿಗೆ ಹಬ್ಬವನ್ನು ಆಚರಿಸಿದರು. ವಿಶೇಷ ಪ್ರಾರ್ಥನೆ ಸಲ್ಲಿಸಿ, ಶೀರ್ ಕುಂಬಾ, ದೂದ್ ಖುರ್ಮಾ ಸೇರಿದಂತೆ ಹಬ್ಬದ ಅಡುಗೆಯನ್ನು ಮಾಡಿ ನೆರೆಹೊರೆಯವರಿಗೆ ಹಂಚಿ ಸಂಭ್ರಮಿಸಿದರು.ರಂಜಾನ್ ನಿಮಿತ್ತ ರಾಯಚೂರು ನಗರದ ಅರಬ್ ಮೊಹಲ್ಲಾ ಬಳಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ (ಪ್ರಾರ್ಥನೆ) ಮಾಡಿದರು. ಚಿಕ್ಕ ಮಕ್ಕಳು,ಯುವಕರು, ವಯೋವೃದ್ಧರು ಹೊಸ, ಶುಭ್ರ ಬಟ್ಟೆ ಧರಿಸಿ ಗಮನ ಸೆಳೆದರು.
ಅಲ್ಲದೇ ಆಯಾ ಬಡಾವಣೆಯ ಮಸೀದಿಗಳಲ್ಲಿ ಮುಸ್ಲಿಮರು ಸಾಮೂಹಿಕ ನಮಾಜ್ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡುವ ಕಾರಣ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ನಮಾಜ್ ಮಾಡಿದ ಬಳಿಕ ಧರ್ಮಗುರುಗಳಿಂದ ನಾಡಿನ ಶಾಂತಿ ಸುವ್ಯವಸ್ಥೆ, ಎಲ್ಲರ ಪರಸ್ಪರ ಸಹೋದರತ್ವ ಭಾವನೆಯಿಂದ ಜೀವನ ನಡೆಸಲಿ ಎಂದು ಪ್ರಾರ್ಥಿಸಲಾಯಿತು. ನಮಾಜ್ ಬಳಿಕ ಮುಸ್ಲಿಮರು ಪರಸ್ಪರ ಆಲಿಂಗನ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು. ಆನಂತರ ಖಬರಸ್ಥಾನ ಗಳಿಗೆ ಭೇಟಿ ನೀಡಿ ಆಗಲಿದ ಹಿರಿಯರ ಸಮಾಧಿಗಳಿಗೆ ಹೂವು ಹಾಕಿ ಕುಟುಂಬ ಸದಸ್ಯರು ನೆನೆದುಕೊಂಡರು. ಆಗಲಿದವರನ್ನು ಸ್ಮರಿಸಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಕುಮಾರ ನಾಯಕ, ರವಿ ಬೋಸರಾಜು, ಮೊಹಮ್ಮದ ಶಾಲಂ, ಕೆ.ಶಾಂತಪ್ಪ, ಜಯಣ್ಣ, ಸೈಯದ್ ಯಾಸೀನ್, ಅರುಣಕುಮಾರ, ಫರೂಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.