ಸಾರಾಂಶ
ಈರಣ್ಣ ಬುಡ್ಡಾಗೋಳ
ಕನ್ನಡಪ್ರಭ ವಾರ್ತೆ ರಾಮದುರ್ಗತೀವ್ರ ಕುತೂಹಲ ಕೆರಳಿಸಿದ್ದ ರಾಮದುರ್ಗ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಹುಮತವಿಲ್ಲದಿದ್ದರೂ ಆಪರೇಶನ್ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದ ಕಾಂಗ್ರೆಸ್ ಪಕ್ಷ ಕೈ ಸುಟ್ಟುಕೊಂಡಿದೆ. ಬಿಜೆಪಿಯ ಯುವ ಧುರೀಣ ಮಲ್ಲಣ್ಣ ಯಾದವಾಡ ಪ್ರಯತ್ನ ಫಲವಾಗಿ ಆಪರೇಶನ್ ವಿಫಲವಾಗಿದೆ. ಭಾನುವಾರ ಕನ್ನಡಪ್ರಭದಲ್ಲಿ ರಾಮದುರ್ಗ ಪುರಸಭೆಗೆ ಸದ್ದಿಲ್ಲದೆ ನಡೆಯುತ್ತಿದೆ ಆಪರೇಶನ್ ಹಸ್ತ, ವಿಶೇಷ ವರದಿ ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮತ್ತು ಶ್ರೀ ಧನಲಕ್ಷ್ಮೀ ಶುಗರ್ ಅಧ್ಯಕ್ಷ ಮಲ್ಲಣ್ಣ ಯಾದವಾಡ ಅವರಿಗೆ ಪುರಸಭೆ ಅಧಿಕಾರ ಕೈತಪ್ಪದಂತೆ ನೋಡಿಕೊಳ್ಳಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಮಲ್ಲಣ್ಣ ಯಾದವಾಡ ಅಜ್ಞಾತ ಸ್ಥಳದಲ್ಲಿದ್ದ ಪಕ್ಷದ ಐವರು ಪುರಸಭೆ ಸದಸ್ಯರು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮಾಹಿತಿ ಪಡೆದುಕೊಂಡರು. ನಂತರ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ್ ಅವರ ಮಾರ್ಗದರ್ಶನ ಮತ್ತು ನೆರವಿನೊಂದಿಗೆ ಅವರ ಮನವೊಲಿಸಿ ಕರೆತರುವಲ್ಲಿ ಯಶಸ್ವಿಯಾದರು.
ಐವರು ಸದಸ್ಯರಲ್ಲಿ ಮೂವರು ಮಹಿಳಾ ಸದಸ್ಯರನ್ನು ಕರೆತಂದು ಮತದಾನ ಮಾಡಿಸಿದರೆ, ಇಬ್ಬರು ಸದಸ್ಯರು ಚುನಾವಣೆಯಿಂದ ದೂರ ಉಳಿಯುವಂತೆ ಮಾಡಿದ್ದರಿಂದ ಪುರಸಭೆಯಲ್ಲಿ ಬಿಜೆಪಿಯವರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.ಅಸಮಾಧಾನ: ಆಪರೇಶನ್ ಹಸ್ತದ ಜವಾಬ್ದಾರಿ ಹೊತ್ತು ಬಿಜೆಪಿ ಸದಸ್ಯರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದ ಪುರಸಭೆ ಮಾಜಿ ಅಧ್ಯಕ್ಷರ ನಿರ್ಲಕ್ಷ್ಯದಿಂದ ನಮ್ಮ ತಂತ್ರ ವಿಫಲವಾಯಿತು ಎಂದು ಹೆಸರು ಹೇಳಲಿಚ್ಚಿಸದ ಪುರಸಭೆ ಸದಸ್ಯರೊಬ್ಬರು ಪತ್ರಿಕೆಯೊಂದಿಗೆ ಅಸಮಾಧಾನ ಹೊರಹಾಕಿದರು.
ಸಭೆಯಿಂದ ದೂರು ಉಳಿದ ಕೈ ಸದಸ್ಯರು: ಕಾಂಗ್ರೆಸ್ ಪಾಳೆಯದಿಂದ ಅಧ್ಯಕ್ಷ ಸ್ಥಾನಕ್ಕೆ ಪದ್ಮಾವತಿ ಸಿದ್ಲಿಂಗಪ್ಪನವರ ಅಗತ್ಯ ದಾಖಲೆ ಲಭ್ಯವಾಗದ ಹಿನ್ನೆಲೆ ನಾಮಪತ್ರ ಸಲ್ಲಿಸಲು ಬಂದು ವಾಪಸ್ಸಾದರು. ಆಪರೇಶನ್ ಹಸ್ತ ಫೇಲಾಗಿದ್ದರಿಂದ ಕಾಟಾಚಾರಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಶಂಕರ ಸುಳಿಭಾವಿ ನಂತರ ನಾಮಪತ್ರ ವಾಪಸ್ ಪಡೆದು ಸಭೆಯಿಂದ ಹೊರನಡೆದರು. ಕಾಂಗ್ರೆಸ್‌ನ ಯಾವುದೇ ಸದಸ್ಯ ಚುನಾವಣೆಯಲ್ಲಿ ಭಾಗವಹಿಸಲಿಲ್ಲ, ಅಜ್ಞಾತ ಸ್ಥಳದಲ್ಲಿದ್ದ ಬಿಜೆಪಿ ಇಬ್ಬರು ಸದಸ್ಯರು ಗೈರಾದರು.ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿರಲಿಲ್ಲ. ಬಿಜೆಪಿ ಅಸಮಧಾನಿತ ಸದಸ್ಯರು ಬೆಂಬಲಿಸುವುದಾಗಿ ಹೇಳಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೆವು. ಆದರೆ ಕೊನೆಯ ಕ್ಷಣದಲ್ಲಿ ಬೆಂಬಲ ಸಿಗುವುದಿಲ್ಲ ಎಂಬುವುದು ಗೊತ್ತಾಗಿದ್ದರಿಂದ ಚುನಾವಣೆಯಿಂದ ದೂರ ಉಳಿಯಬೇಕಾಯಿತು.- ಸುರೇಶ ಪತ್ತೇಪೂರ, ಕೆಪಿಸಿಸಿ ಸದಸ್ಯಪುರಸಭೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಇಲ್ಲದಿದ್ದರೂ ಬಿಜೆಪಿಯ ಕೆಲ ಸದಸ್ಯರಿಗೆ ಆಮಿಷ ಒಡ್ಡಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಪಕ್ಷದ ಮುಖಂಡರು ಜವಾಬ್ದಾರಿ ನೀಡಿದ್ದರಿಂದ ನಮ್ಮ ಸದಸ್ಯರನ್ನು ಪತ್ತೆ ಹಚ್ಚಿ ಬಿಜೆಪಿ ಶಿಸ್ತಿನ ಪಕ್ಷ. ಪಕ್ಷದ ವಿರುದ್ಧ ಹೋಗದಂತೆ ಮಾಡಿದ ಮನವಿಗೆ ಸದಸ್ಯರು ಸ್ಪಂದಿಸಿದ್ದರಿಂದ ಪುರಸಭೆಯ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಯಿತು.
-ಮಲ್ಲಣ್ಣ ಯಾದವಾಡ ಅಧ್ಯಕ್ಷರು, ಶ್ರೀ ಧನಲಕ್ಷ್ಮೀ ಶುಗರ್ಸ್