ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
ಪತ್ರಕರ್ತರಾದವರು ಪತ್ರಕರ್ತರ ಕಾರ್ಯಾಗಾರಗಳನ್ನು ಏರ್ಪಡಿಸಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯ ಇದೆ. ಕೌಶಲ್ಯ ವೃದ್ಧಿಪಡಿಸಿಕೊಂಡು ಸಮಾಜ ಮರಳಿ ನೋಡುವಂತೆ ವರದಿ ಮಾಡಬೇಕು ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಹೇಳಿದರು.ಪಟ್ಟಣದ ಐ.ಎಸ್. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಇಲ್ಲಿನ ಪ್ರೆಸ್‌ಕ್ಲಬ್ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ವರದಿಗಾರರಿಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರ ನೋವು ನಲಿವುಗಳಿಗೆ ಇಂದಿನ ಪತ್ರಿಕೋದ್ಯಮ ಸ್ಪಂದಿಸುತ್ತಿಲ್ಲ. ರಾಜಕಾರಣಿಗಳು, ಸೆಲೆಬ್ರಿಟಿಗಳ ಸಂತುಷ್ಠಿಗೊಳಿಸಲು ತಮ್ಮತನ ಮರೆತು ಬಿಂಬಿಸುತ್ತಿದ್ದಾರೆ. ನಕಲಿ ಪತ್ರಕರ್ತರ ಹಾವಳಿಯಿಂದ ನಿಜವಾದ ಪತ್ರಕರ್ತರಿಗೆ ಸಮಾಜದಲ್ಲಿ ಬೆಲೆ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಇಒ ಪ್ರವೀಣಕುಮಾರ ಸಾಲಿ ಮಾತನಾಡಿ, ಪತ್ರಕರ್ತರು ಸಮಾಜ ಸುಧಾರಿಸುವ ನಿಟ್ಟಿನಲ್ಲಿ ಧನಾತ್ಮಕ ಸುದ್ದಿಗಳನ್ನು ಮತ್ತು ವಸ್ತುನಿಷ್ಠ ವರದಿಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿ ಪತ್ರಿಕೆಗಳ ವರದಿಯಿಂದ ಜಾಗೃತಿ ಮೂಡುವಂತಿರಬೇಕು. ಅಂದಾಗ ಮಾತ್ರ ಜನ ಪತ್ರಿಕೆ ಮತ್ತು ಪತ್ರಕರ್ತರನ್ನು ಜನ ನಂಬಲು ಸಾಧ್ಯ ಎಂದು ಹೇಳಿದರು.ಪತ್ರಕರ್ತರಾದವರು ಎಲ್ಲ ವಿಷಯಗಳ ಬಗ್ಗೆ ಸಮಗ್ರ ಜ್ಞಾನ ಹೊಂದಿರಬೇಕು. ಅಂತ ಸಮಗ್ರ ಜ್ಞಾನ ಹೊಂದಲು ನಿರಂತರ ಓದು ಮುಖ್ಯವಾಗಿರುತ್ತದೆ. ಯಾರು ನಿರಂತರ ಓದು ಮೈಗೂಡಿಸಿಕೊಂಡಿತ್ತಾರೆ ಅಂತವರು ಯಾವುದೇ ವಿಷಯಗಳಿದ್ದರೂ ನಿರ್ಗಳವಾಗಿ ವಿಷಯ ಮಂಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಿಪಿಐ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಒಂದು ಮೊಬೈಲ್ ಇದ್ದರೆ ಸಾಕು ನಾವು ಪತ್ರಕರ್ತರು ಎಂದು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ. ತಮ್ಮನ್ನು ಸಮಾಜ ಗುರುತಿಸಲಿ ಎಂದು ಏನೆಲ್ಲ ಕಸರತ್ತುಗಳನ್ನು ನಡೆಸುತ್ತಾರೆ. ಆದರೆ ನಿಜವಾದ ಪತ್ರಕರ್ತನಾದವರು ಯಾರೊಂದಿಗೂ ಗುರುತಿಸಿಕೊಳ್ಳಲು ಇಷ್ಟ ಪಡುವುದಿಲ್ಲ ಎಂದು ಹೇಳಿದರು.ಸಮಾಜದಲ್ಲಿ ಕಾನೂನು ಮತ್ತು ಇನ್ನಾವುದೇ ವಿಷಯಗಳ ಬಗ್ಗೆ ಜ್ಞಾನ ಇಲ್ಲದವರು ಪರ್ತಕರ್ತರಾಗಿ ಹೊರ ಹೊಮ್ಮಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದರೂ ನಕಲಿ ಪತ್ರಕರ್ತರ ಮುಂದೆ ಮಂಕಾಗಿದ್ದಾರೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಉದ್ಯಮಿ ವಿಜಯ್‌ಎನ್. ಶೆಟ್ಟಿ, ಪ್ರಾಚಾರ್ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಂ.ಎನ್. ಪಾಟೀಲ ಮಾತನಾಡಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಎಂ.ಬಿ. ಧೂಪದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ಸವದತ್ತಿ, ಬೈಲಹೊಂಗಲ ಮತ್ತು ಯರಗಟ್ಟಿ ತಾಲೂಕುಗಳ ಪತ್ರಕರ್ತರು ಭಾಗವಹಿಸಿದ್ದರು. ಈರಣ್ಣ ಬುಡ್ಡಾಗೋಳ ಸ್ವಾಗತಿಸಿದರು. ಎಂ.ಬಿ. ಗೊಂದಿ ಸಂದೇಶ ವಾಚಿಸಿದರು. ಡಾ. ಮಹಾಲಕ್ಷೀ ಭೂಶಿ ಕಾರ್ಯಕ್ರಮ ನಿರೂಪಿಸಿದರು. ವಿಜಯ ನಾಯಕ ವಂದಿಸಿದರು.