ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸೂರ್ಯ ನಮಸ್ಕಾರವನ್ನು ನಿತ್ಯ ಮಾಡುವುದರಿಂದ ಉತ್ತಮ ಆರೋಗ್ಯ ಲಭ್ಯವಾಗುವುದಲ್ಲದೆ, ಸೂರ್ಯನ ಅನುಗ್ರಹವು ಪ್ರಾಪ್ತಿಯಾಗುತ್ತದೆ ಎಂದು ಹಿರಿಯ ಯೋಗ ಗುರು ಬಿ.ಎನ್.ಎಸ್. ಅಯ್ಯಂಗಾರ್ ತಿಳಿಸಿದರು.ರಾಮಕೃಷ್ಣನಗರದ ರಾಮಕೃಷ್ಣ ವೃತ್ತದಲ್ಲಿ ಮೈಸೂರು ಯೋಗ ಅಸೋಸಿಯೇಷನ್, ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಯುಕ್ತವಾಗಿ ರಥಸಪ್ತಮಿಯ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಹಾಗೂ ಸೂರ್ಯ ಯಜ್ಞ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಅನೇಕ ಆಸನ ಭಂಗಿಗಳಿಂದ ಸಂಯೋಜಿತಗೊಂಡಿರುವ ಸೂರ್ಯನಮಸ್ಕಾರ ಪದ್ಧತಿಯ ಅಭ್ಯಾಸದಿಂದ ಮನುಷ್ಯನ ಪರಿಪೂರ್ಣ ಆರೋಗ್ಯ ಹೊಂದುತ್ತಾನೆ ಎಂದು ಅವರು ಹೇಳಿದರು.ಹಿರಿಯ ಸಂಸ್ಕೃತ ವಿದುಷಿ ಡಾ.ಕೆ. ಲೀಲಾ ಪ್ರಕಾಶ್ ಮಾತನಾಡಿ, ಈ ಜಗತ್ತಿನ ಅಸ್ತಿತ್ವಕ್ಕೆ ಕಾರಣೀಭೂತನಾಗಿರುವ ಸೂರ್ಯನನ್ನು ಆರಾಧಿಸುವ ವೈಶಿಷ್ಟ ಪೂರ್ಣವಾದ ಹಿರಿಮೆಯನ್ನು ರಥಸಪ್ತಮಿ ಹೊಂದಿದೆ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ಎಂದು ಆಚರಿಸಲ್ಪಡುವ ರಥಸಪ್ತಮಿಯ ನಂತರ ಸಪ್ತಾಶ್ವಗಳಿಂದ ಕೂಡಿದ ರಥವನ್ನು ಸೂರ್ಯನು ಉತ್ತರಕ್ಕೆ ತಿರುಗಿಸಿ ಉತ್ತರಾಯಣ ಪುಣ್ಯ ಕಾಲಕ್ಕೆ ಅನು ಮಾಡಿಕೊಡುತ್ತಾನೆ. ರಥಸಪ್ತಮಿಯೊಂದು ಮಾಡುವ ಸೂರ್ಯನಮಸ್ಕಾರದ ಪದ್ಧತಿ ಸೂರ್ಯನ ಅನುಗ್ರಹ ಸಂಪಾದನೆಗೆ ಅತ್ಯುತ್ತಮ ಮಾರ್ಗ ಎಂದರು.
ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಡಿ. ಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ಸಿ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಎನ್. ಅನಂತ, ಉಪಾಧ್ಯಕ್ಷರಾದ ಎನ್. ಪಶುಪತಿ, ಬಿ. ಶ್ರೀನಾಥ್, ವಿವೇಕ ವಿದ್ಯಾಲಯ ಪಿಯು ಕಾಲೇಜು ನಿರ್ದೇಶಕ ಎಂ.ಎಸ್. ನಾಗೇಶ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ ನಾಗೇಂದ್ರ ರಾಜೇ ಅರಸ್, ಜಿಎಸ್ಎಸ್ ಯೋಗ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ, ಆರ್ಯ ಸಮಾಜದ ಅಧ್ಯಕ್ಷ ಎಸ್. ಹೇಮಚಂದ್ರ, ಕೃಷ್ಣಮೂರ್ತಿ ಹರ್ಷವರ್ಧನ ಮೊದಲಾದವರು ಇದ್ದರು.ನಂತರ ಆರ್ಯ ಸಮಾಜದಿಂದ ಸೂರ್ಯ ಯಜ್ಞ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಯೋಗಪಟುಗಳು ಪಾಲ್ಗೊಂಡು 108 ಸೂರ್ಯ ನಮಸ್ಕಾರವನ್ನು ಮಾಡಿದರು.