ಇಂದಿನ ಮತದಾರರು ಮತ್ತು ರಾಜಕೀಯ ಮುಖಂಡರು ನ್ಯಾಯ ಸಮ್ಮತವಾದ ದಾರಿಯಲ್ಲಿ ನಡೆದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ.

ಕುರುಗೋಡು: ಇಂದಿನ ಮತದಾರರು ಮತ್ತು ರಾಜಕೀಯ ಮುಖಂಡರು ನ್ಯಾಯ ಸಮ್ಮತವಾದ ದಾರಿಯಲ್ಲಿ ನಡೆದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ. ಕಲುಷಿತ ರಾಜಕೀಯ ವಾತಾವರಣದಲ್ಲಿ ಮೌಲ್ಯಯುತ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರ ರಾಜಕೀಯ ಜೀವನ ಆದರ್ಶವಾಗಬೇಕಿದೆ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಅಭಿಪ್ರಾಯಪಟ್ಟರು.

ಸಮೀಪದ ಹಾವಿನಹಾಳು ಗ್ರಾಮದಲ್ಲಿ ಕರ್ನಾಟಕ ರಾಜಕೀಯ ಅಕಾಡಮಿ ಸೋಮವಾರ ಆಯೋಜಿಸಿದ್ದ ಮೌಲ್ಯಾಧಾರಿತ ರಾಜಕಾರಣ ಮತ್ತು ರಾಮಕೃಷ್ಣ ಹೆಗಡೆ ಒಂದು ಚಿಂತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮಕೃಷ್ಣ ಹೆಗಡೆಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಾವುದೇ ಹಗರಣಗಳಲ್ಲಿ ಸಿಲುಕದೇ ಶುದ್ಧ ಮತ್ತು ಸಿದ್ಧಹಸ್ತರಾಗಿ ಕಾರ್ಯ ನಿರ್ವಹಿಸಿ ಸಚ್ಚಾರಿತ್ರ್ಯ ರಾಜಕಾರಣಯಾಗಿ ಹೆಸರು ಮಾಡಿದವರು ಎಂದರು.

ಆಗಿನ ಸಮಯದಲ್ಲಿ ಪ್ರಮುಖವಾದ ರೈತ ಚಳವಳಿ, ಗೋಕಾಕ್ ಚಳವಳಿ, ದಲಿತ ಸಂಘರ್ಷ ಚಳವಳಿಗಳು ಜರುಗಿದ್ದವು. ಈಗಿನ ಯುವಕರು ಮೊಬೈಲ್ ತ್ಯಜಿಸಿ, ಬೀದಿಗಿಳಿದು ಚಳವಳಿಗಳನ್ನು ಮಾಡಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಯುವಕರಿಗೆ ಕಿವಿಮಾತು ಹೇಳಿದರು.

ಸಿರಿಗೇರಿ ಯರಿಸ್ವಾಮಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಶೇಖರಪ್ಪ, ಉಪಾಧ್ಯಕ್ಷೆ ಮೀನಾಕ್ಷಿ ವೀರೇಶಪ್ಪ, ಜೆಡಿಎಸ್ ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷೆ ಪುಷ್ಪ, ಹೊನ್ನೂರಪ್ಪ, ಶಿವು ನಾರಾಯಣ, ಎ.ಎಸ್. ವಸಂತಕುಮಾರ್, ವೀರೇಶ್ ಕಂಪ್ಲಿ, ಜಮೀಲಾ, ವಿ.ಹನುಮೇಶ್ ಇದ್ದರು.

ಕುರುಗೋಡು ಸಮೀಪದ ಹಾವಿನಹಾಳು ಗ್ರಾಮದಲ್ಲಿ ಆಯೋಜಿಸಿದ್ದ ಮೌಲ್ಯಾಧಾರಿತ ರಾಜಕಾರಣ ಮತ್ತು ರಾಮಕೃಷ್ಣ ಹೆಗಡೆ ಒಂದು ಚಿಂತನೆ ಕಾರ್ಯಕ್ರಮದಲ್ಲಿ ವೈ.ಎಸ್.ವಿ. ದತ್ತ ಮಾತನಾಡಿದರು.