ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದಡಿ ಡಿಸೆಂಬರ್ ತಿಂಗಳ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಮಂಗಳೂರಿನ ಹಂಪನಕಟ್ಟೆ ಮಿನಿ ವಿಧಾನಸೌಧ ಆವರಣದಲ್ಲಿ ನೆರವೇರಿತು.

ರಾಮಕೃಷ್ಣ ಮಿಶನ್‌ ಸ್ವಚ್ಛತಾ ಶ್ರಮದಾನ, ಆರು ಬ್ಲಾಕ್‌ ಸ್ಪಾಟ್‌ಗಳ ತೆರವು

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದಡಿ ಡಿಸೆಂಬರ್ ತಿಂಗಳ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಮಂಗಳೂರಿನ ಹಂಪನಕಟ್ಟೆ ಮಿನಿ ವಿಧಾನಸೌಧ ಆವರಣದಲ್ಲಿ ನೆರವೇರಿತು.

ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮತ್ತು ನಿಟ್ಟೆ (ಪರಿಗಣಿತ) ವಿವಿ ಉಪಕುಲಪತಿ ಪ್ರೊ.ಡಾ.ಎಂ.ಎಸ್. ಮೂಡಿತ್ತಾಯ ಜಂಟಿಯಾಗಿ ಹಸಿರು ನಿಶಾನೆ ತೋರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಪ್ರೊ. ಪುರುಷೋತ್ತಮ ಚಿಪ್ಪಳ ಹಾಗೂ ಡಾ. ರಾಕೇಶ್, ಡಾ. ಜಯೇಶ್, ಡಾ. ನಿತ್ಯಲ್ ಮತ್ತು ಡಾ. ರುಚಿತಾ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಸ್ವಯಂ ಸೇವಕರ ದೊಡ್ಡ ತಂಡವು ಮಿನಿ ವಿಧಾನಸೌಧ ಆವರಣದಲ್ಲಿನ ಉಪವನದ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ತೆರವು ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು.

ಹಿರಿಯ ಸ್ವಯಂಸೇವಕರಾದ ಉದಯ ಕೆ.ಪಿ., ಶಿವರಾಮ್, ಸುನಂದಾ, ವಸಂತಿ ನಾಯಕ್, ಅವಿನಾಶ್, ಪುಂಡಲೀಕ ಶೆಣೈ, ವಿಠ್ಠಲ ಪ್ರಭು, ರಾಜೀವಿ, ಪ್ರಕಾಶ್, ಗಂಗಾಧರ ಶಾಸ್ತ್ರಿ ಹಾಗೂ ವಿದ್ಯಾರ್ಥಿಗಳ ತಂಡ ಸೇರಿಕೊಂಡು ಆವರಣದಲ್ಲಿ ಗುರುತಿಸಲಾದ ಆರು ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಜಮೆಯಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಆವರಣದ ಸ್ವಚ್ಛತೆಗೆ ಹೊಸ ಮೆರುಗು ನೀಡಿದರು.

ದಿಲ್‌ರಾಜ್ ಆಳ್ವ ನೇತೃತ್ವದಲ್ಲಿ ಬಾಲಕೃಷ್ಣ ಭಟ್, ಪ್ರಕಾಶ್ ಗರೋಡಿ, ಸಚಿನ್ ಶೆಟ್ಟಿ, ರಾಘವೇಂದ್ರ ಕಲ್ಲೂರ್, ಭವಿತ್ ಸಾಲಿಯನ್ ಮತ್ತು ವರುಣ್ ಅವರು ಮಿನಿ ವಿಧಾನಸೌಧ ಪ್ರವೇಶ ದ್ವಾರದ ಬಳಿಯ ಉಪವನದಲ್ಲಿದ್ಧ ಪ್ಲಾಸ್ಟಿಕ್ ತ್ಯಾಜ್ಯ, ಗಾಜಿನ ಬಾಟಲಿಗಳು, ನಿರುಪಯುಕ್ತ ಗಿಡಗಂಟೆಗಳು, ಬಳಕೆಯಾಗದ ಕಲ್ಲುಗಳು ಮುಂತಾದವುಗಳನ್ನು ತೆರವುಗೊಳಿಸಿದರು. ಕಚೇರಿಗೆ ಭೇಟಿ ನೀಡುವವರಿಗೆ ಅಡಚಣೆ ಉಂಟುಮಾಡುತ್ತಿದ್ದ ಮರದ ಕೊಂಬೆಗಳನ್ನು ಕತ್ತರಿಸುವ ಮೂಲಕ ಸುಗಮ ಸಂಚಾರ ಮತ್ತು ಆವರಣದ ಸೌಂದರ್ಯವನ್ನು ಹೆಚ್ಚಿಸಿದರು.

ಕ್ಯಾ.ಗಣೇಶ್ ಕಾರ್ಣಿಕ್, ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಪ್ರಾಂಶುಪಾಲ ಡಾ. ಧನೇಷ್ ಕುಮಾರ್, ಬಿ. ಗೋಪಿನಾಥ್ ರಾವ್ ಮತ್ತು ಹಲವು ಹಿರಿಯ ಸ್ವಯಂಸೇವಕರು ಇದ್ದರು.ಈ ಅಭಿಯಾನದ ಮೂಲಕ ಮಂಗಳೂರಿನ ನಾಗರಿಕರು ಪ್ರತಿ ತಿಂಗಳು ನಡೆಯುವ ಈ ಶ್ರಮದಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸ್ವಚ್ಛ ಮತ್ತು ಸುಂದರ ನಗರ ನಿರ್ಮಿಸಲು ಕೈಜೋಡಿಸಬೇಕೆಂದು ಸ್ವಚ್ಛ ಮಂಗಳೂರು ಪ್ರತಿಷ್ಠಾನ ಮತ್ತು ಮಠದ ತಂಡ ವಿನಂತಿಸಿದೆ.ಪ್ರೇರಣಾದಾಯಿ ತಾಯಿ- ಮಗ

ಈ ತಿಂಗಳ ಶ್ರಮದಾನದಲ್ಲಿ ವಿಶೇಷವಾಗಿ ಗಮನ ಸೆಳೆದವರು ಕೆನೆರಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಬಬಿತಾ ಶೆಟ್ಟಿ ಮತ್ತು ಅವರ ಪುತ್ರ ನೈತಿಕ್. ತಾಯಿ- ಮಗ ಸೇರಿ ಮಾಡಿದ ಈ ಶ್ರಮದಾನ ಅನೇಕ ಪೋಷಕರಿಗೆ ಪ್ರೇರಣೆಯಾಗಿದ್ದು, ಮಕ್ಕಳಲ್ಲಿ ಮೌಲ್ಯಗಳು, ನಾಗರಿಕ ಹೊಣೆಗಾರಿಕೆ ಮತ್ತು ಸಮಾಜಸೇವೆಯ ಮನೋಭಾವ ಬೆಳೆಸುವ ಅತ್ಯುತ್ತಮ ಮಾದರಿಯನ್ನು ತೋರಿಸಿತ್ತು.