ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಂವಿಧಾನದ ಕರಡು ಪ್ರತಿಯ ಪ್ರಥಮ ಕರ್ತೃ ಬೆನಗಲ್ ನರಸಿಂಗರಾವ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಆಗ್ರಹಿಸಿದರು.ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಭಾನುವಾರ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ರಚನೆ ಕಾರ್ಯ 1946 ರಲ್ಲಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು, ಅದಕ್ಕೆ ಕರ್ನಾಟಕದ ನ್ಯಾಯಾಧೀಶರಾಗಿದ್ದ ಬೆನಗಲ್ ನರಸಿಂಗರಾವ್ ಅವರನ್ನು ಸಾಂವಿಧಾನಿಕ ಸಲಹೆಗಾರರನ್ನಾಗಿ ನೇಮಿಸಲಾಗಿದ್ದು, ಪ್ರಪಂಚದ ಎಲ್ಲಾ ಸಂವಿಧಾನಗಳನ್ನು ದೀರ್ಘ ಅಧ್ಯಯನ ಮಾಡಿ ಪ್ರತಿಯೊಂದು ದೇಶದ ಸಂವಿಧಾನದಲ್ಲಿರುವ ಉತ್ಕೃಷ್ಟ ಅಂಶಗಳನ್ನು ಆಯ್ದುಕೊಂಡು ಅವುಗಳನ್ನು ಭಾರತೀಯ ನೆಲದ ಗುಣಗಳಿಗೆ ಅನ್ವಯಿಸಿ ಪ್ರಥಮ ಕರಡು ಪ್ರತಿಯನ್ನು ಸಿದ್ಧಪಡಿಸಿದ ಕೀರ್ತಿ ಬೆನಗಲ್ ನರಸಿಂಗ್ ಅವರಿಗೆ ಸಲ್ಲಬೇಕು ಎಂದು ತಿಳಿಸಿದರು.
ಸಂವಿಧಾನ ರಚನೆಯಲ್ಲಿ ಬೆನಗಲ್ ನರಸಿಂಗರಾವ್ ಅವರ ಶ್ರಮ ಪ್ರಥಮ ಮತ್ತು ಅಗ್ರಗಣ್ಯ ಎಂಬುದನ್ನು ತಳ್ಳಿ ಹಾಕಲಾಗದು. ಇದನ್ನು ಸ್ವತಃ ಡಾ. ಅಂಬೇಡ್ಕರ್ ಅವರೇ ಹೇಳಿದ್ದಾರೆ. ಹೀಗಾಗಿ, ಬೆನಗಲ್ ನರಸಿಂಗರಾವ್ ಅವರಿಗೆ ಭಾರತರತ್ನ ಪ್ರಶಸ್ತಿ ಮರಣೋತ್ತರವಾಗಿ ನೀಡಬೇಕು ಎಂದು ಅವರು ಒತ್ತಾಯಿಸಿದರು.ಕಾಲಾನುಕಾಲಕ್ಕನುಗುಣವಾಗಿ ತಿದ್ದುಪಡಿ ಮಾಡಿಕೊಳ್ಳುವ ಅವಕಾಶವಿದ್ದರೂ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಮತ್ತು ಅದರ ಮೂಲ ಸ್ವರೂಪವನ್ನು ಬದಲಿಸುವ ಸಾಧ್ಯತೆ ಸಾಧ್ಯವಿಲ್ಲವೆಂಬ ಅಂಶವನ್ನು ಸೇರಿಸಿರುವ ಅದ್ವಿತೀಯ ಸಂವಿಧಾನ ಇದಾಗಿದ್ದು, ನಮ್ಮ ಸಂವಿಧಾನವು ಇನ್ನಿತರ ದೇಶಗಳ ಸಂವಿಧಾನಕ್ಕಿಂತ ಅತಿ ಹೆಚ್ಚು ಪದಗಳನ್ನೊಳಗೊಂಡಿರುವ ವಿಶೇಷತೆಯನ್ನು ಹೊಂದಿದೆ ಎಂದರು.
ಸುಯೋಗ್ ಆಸ್ಪತ್ರೆಯ ನಿರ್ದೇಶಕಿ ಡಾ. ಸೀಮಾ ಯೋಗಣ್ಣ ಇದ್ದರು.