- ​ಶಾಸಕ ಬಿ.ದೇವೇಂದ್ರಪ್ಪ ವಿರುದ್ಧ ಜೆಡಿಎಸ್ ಕಲ್ಲೇರುದ್ರೇಶ್ ವಾಗ್ದಾಳಿ

- - -

ಕನ್ನಡಪ್ರಭ ವಾರ್ತೆ ಜಗಳೂರು

ಯಾರೇ ಮನವಿ ನೀಡಿದರೂ ಸಂಸ್ಕಾರ, ಸಂಸ್ಕೃತಿ, ಸಹನೆ ಹಾಗೂ ಹೃದಯ ಶ್ರೀಮಂತಿಕೆ ಇದ್ದವರು ಕಸದ ಬುಟ್ಟಿಗೆ ಹಾಕುವುದಿಲ್ಲ. ಒಂದುವೇಳೆ ಕಸಕ್ಕೆ ಹಾಕಿದ್ದನ್ನೂ ತೆಗೆದು ರಸ ಮಾಡುವ ಶಕ್ತಿಯನ್ನು ದೇವರು ನಮಗೆ ಕೊಟ್ಟಿದ್ದಾನೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಪ್ಪರ್ ಭದ್ರಾ ಯೋಜನೆ ವಿಚಾರವಾಗಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಿ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದನ್ನು ಪ್ರಸ್ತಾಪಿಸಿ ಅವರು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ನೇರ ತಿರುಗೇಟು ನೀಡಿದರು.


ಚುನಾಯಿತ ಪ್ರತಿನಿಧಿಯೊಬ್ಬರು ''ನಮ್ಮ ಸಚಿವರನ್ನು ಭೇಟಿ ಮಾಡಿದ್ದು ಏಕೆ, ಕೇಂದ್ರ ಸಚಿವರನ್ನು ಭೇಟಿ ಮಾಡಲಿ'' ಎಂದಿದ್ದಾರೆ. ರಾಮಲಿಂಗಾ ರೆಡ್ಡಿ ಅವರೇನು ಯಾರದ್ದೋ ಕುಟುಂಬದ ಆಸ್ತಿಯಲ್ಲ. ಅವರು ರಾಜ್ಯದ ಕನ್ನಡಿಗರ ಆಸ್ತಿ. ನಾವು ಯಾರನ್ನು ಭೇಟಿ ಮಾಡಬೇಕು, ಯಾರನ್ನು ಭೇಟಿಯಾಗಬಾರದು ಎಂದು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.

ತಮ್ಮ ಮನವಿ ಸ್ವೀಕರಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರು ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಲ ಸಂಪನ್ಮೂಲ ಇಲಾಖೆಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಬರೆದಿದ್ದಾರೆ. ಸಂಸ್ಕೃತಿ, ಸಂಸ್ಕಾರ ಇರುವವರು ಮನವಿಯನ್ನು ಕಸದಬುಟ್ಟಿಗೆ ಹಾಕುವುದಿಲ್ಲ ಎಂದು ಪುನರುಚ್ಚರಿಸಿದರು.

ಅಪ್ಪರ್ ಭದ್ರಾ ವಿಚಾರವಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ₹5,300 ಕೋಟಿ ಅನುದಾನ ಬಿಡುಗಡೆಗೆ ಪತ್ರ ಬರೆದಿದೆ. ಈ ಪತ್ರವನ್ನು ಕೇಂದ್ರ ಕಸದ ಬುಟ್ಟಿಗೆ ಹಾಕಿದರೆ ಹೇಗೆ? ಅಪ್ಪರ್ ತುಂಗಾ ಪ್ರಾಜೆಕ್ಟ್‌ಗೆ 3 ವರ್ಷಗಳಿಂದ ಬರಬೇಕಿದ್ದ ಅನುದಾನವನ್ನು ರಾಜ್ಯ ಸರ್ಕಾರ ಮರೆತುಬಿಟ್ಟಿತ್ತು. ನನ್ನ ಸುದೀರ್ಘ ಹೋರಾಟದ ಫಲವಾಗಿ ಮಂಗಳವಾರ ಸಂಜೆ ಖಾತೆಗೆ ಹಣ ಜಮಾವಾಗುತ್ತಿದೆ. ಅನುಮಾನವಿದ್ದರೆ ಅಧಿಕಾರಿಗಳನ್ನು ವಿಚಾರಿಸಬಹುದು. ನನ್ನನ್ನು ಕೆಲವರು ''''''''ಹುಚ್ಚ'''''''' ಅನ್ನಬಹುದು. ಆದರೆ ಒಮ್ಮೊಮ್ಮೆ ಹುಚ್ಚರಿಂದಲೂ ಸಮಾಜಕ್ಕೆ ಅನುಕೂಲ ಆಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಜೆಡಿಎಸ್ ತಾಲೂಕಾಧ್ಯಕ್ಷ ಗೋಡೆ ಸಿದ್ದೇಶ್, ಕಾರ್ಯದರ್ಶಿ ಉಸ್ಮಾನ್ ಅಲಿ, ದೇವಿಕೆರೆ ತಿಪ್ಪೇಸ್ವಾಮಿ, ನಿವೃತ್ತ ಶಿಕ್ಷಕ ಎ.ಕೆ. ಯಲ್ಲಪ್ಪ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- - -

(ಕೋಟ್‌)

3 ವರ್ಷಗಳಿಂದ ಅಪ್ಪರ್ ಭದ್ರಾ ಯೋಜನೆದಡಿ ಎಷ್ಟು ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿ ಅಧಿಕಾರಿಗಳ ಬಳಿಯೂ ಇಲ್ಲ, ಶಾಸಕರೂ ಹೇಳಿಲ್ಲ. 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ನೀರು ಬಿಡಲಾಗುತ್ತಿದೆ. ಆದರೆ, ಯಾವ ಕೆರೆಗೆ ಎಷ್ಟೆಷ್ಟು ನೀರು ಬಿಡಬೇಕು ಎಂಬ ಸ್ಪಷ್ಟ ಮಾಹಿತಿ ಯಾರಿಗೂ ಇಲ್ಲ. ಮೀಸಲಿಟ್ಟಷ್ಟು ನೀರು ತಲುಪದಿದ್ದರೆ ಸಾರ್ವಜನಿಕರು, ಮುಖಂಡರು ಅಧಿಕಾರಿಗಳನ್ನು ಪ್ರಶ್ನಿಸಬೇಕು.

- ಕಲ್ಲೇರುದ್ರೇಶ್, ಜೆಡಿಎಸ್‌ ಮುಖಂಡ.

- - -

-04ಜೆಜಿಎಲ್.2: ಜಗಳೂರಲ್ಲಿ ಮಂಗಳವಾರ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.