ಈ ಬಡಾವಣೆಗಳಲ್ಲಿ 170 ನಿವೇಶನಗಳು ಹರಾಜು ಬಾಕಿ ಇದೆ. ವಾರಸುದಾರರು ಇಲ್ಲದಿರುವ 60 ನಿವೇಶನಗಳಿವೆ. ಆಗ ಅಧ್ಯಕ್ಷರು, ಆಯುಕ್ತರು ಮತ್ತು ನಿರ್ದೇಶಕರಾಗಿದ್ದವರು ತಮ್ಮ ಸ್ವಾರ್ಥಕ್ಕಾಗಿ ಬಡವರ ರಕ್ತ ಹೀರುವ ಕೆಲಸ ಮಾಡಿದ್ದಾರೆ. ಅದರಲ್ಲಿ ಕೆಲವರು ಜೈಲಿಗೆ ಹೋಗಿದ್ದರೆ, ಇನ್ನೂ ಕೆಲವರು ತಪ್ಪಿಸಿಕೊಂಡು ಅಧ್ಯಕ್ಷ ಸ್ಥಾನ ಬಿಟ್ಟು ಹೋದರು ಎಂದು ಇಕ್ಬಾಲ್ ಹುಸೇನ್ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಈ ಕ್ಷೇತ್ರದಿಂದ ಆಯ್ಕೆಯಾಗಿ ಪ್ರಧಾನಿ ಮತ್ತು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದವರು ಬಡವರ ಬದುಕಿನ ಬಗ್ಗೆ ಒಮ್ಮೆಯೂ ಚಿಂತನೆ ಮಾಡಲಿಲ್ಲ. ಈಗ ಕೆಲವರು ಅಂಥವರ ಜೊತೆ ಸೇರಿಕೊಂಡು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟು ಮಾಡುತ್ತಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಬೇಸರ ವ್ಯಕ್ತಪಡಿಸಿದರು.

ನಗರದ ಹೊರ ವಲಯದ ಜೀಗೇನಹಳ್ಳಿಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಅರ್ಕಾವತಿ ವಸತಿ ಬಡಾವಣೆ ಹಾಗೂ ಕಣ್ವ ವಸತಿ ಬಡಾವಣೆಗಳ ಮರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮಹಾನ್ ನಾಯಕರೊಬ್ಬರು ಅರ್ಕಾವತಿ ರಿವರ್ ಫ್ರಂಟ್ ಪಾರ್ಕ್ ನಿರ್ಮಾಣ ವಿಚಾರವಾಗಿ ದೇವಸ್ಥಾನ ಮತ್ತು ದರ್ಗಾಕ್ಕೆ ಧಕ್ಕೆಯಾಗುತ್ತದೆ ಎಂದು ಜನರನ್ನು ಎತ್ತಿ ಕಟ್ಟಿ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಟೀಕಿಸಿದರು.

ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಮತ ಪಡೆದು ಶಾಸಕರಾಗುವುದು, ಹೆಗಲ ಮೇಲೆ ಕೈ ಹಾಕಿ ಬ್ರದರ್ ಅಂತ ಹೇಳೋದು ಮುಖ್ಯವಲ್ಲ. ದೇಶ ಮತ್ತು ರಾಜ್ಯ ಆಳಿದವರು ಇಲ್ಲವೇ ಇಲ್ಲ. ಸಿಕ್ಕ ಅವಕಾಶದಲ್ಲಿ ಕೆಲಸ ಮಾಡಬೇಕು. ನಾವು ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಆ ಶಾಶ್ವತ ಕೆಲಸಗಳು ನಮ್ಮ ಹೆಸರು ಹೇಳುತ್ತವೆ ಎಂದರು.

ಇದು ರಾಮನ ಪಾದಗಳಿರುವ ಪವಿತ್ರ ಸ್ಥಳ. ರಾಮನೂರಿನಲ್ಲಿ ನಿಜವಾದ ಜೀವನ ಮಾಡುವ ಪರಿಜ್ಞಾನ ಇರಬೇಕು. ನಿಮ್ಮ ಜೀವನ, ಮಾತಿಗೆ ಬೆಲೆ ಇದೆ. ನಿಮಗೂ ಗೌರವ ಇದೆ. ಆಲೋಚನೆ ಮಾಡಿ ಕೆಲಸ ಮಾಡಬೇಕೇ ಹೊರತು ರಕ್ತ ಹೀರುವ ಕೆಲಸ ಮಾಡಬಾರದು. ಅಧಿಕಾರದಲ್ಲಿ ಇದ್ದಾಗ ಮಾಡಬಾರನ್ನು ಮಾಡಿದರೆ ಭಗವಂತ ಕ್ಷಮಿಸಲ್ಲ. ಇದು ರಾಮನೂರು ಎಂದು ಹೇಳಿದರು.

ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು ಜಿಲ್ಲೆಗೆ ಕಾರ್ಖಾನೆ ತಂದು ಉದ್ಯೋಗ ಕಲ್ಪಿಸುವ ಕೆಲಸ ಮಾಡಲಿಲ್ಲ. ಒಂದೇ ಒಂದು ನೀರಾವರಿ ಯೋಜನೆ ಕಾರ್ಯಗತ ಮಾಡಲಿಲ್ಲ. ಆದರೆ, ಈ ಮಣ್ಣಿನ ಮಕ್ಕಳಾದ ನಾವು ಶಿಕ್ಷಣ, ಆರೋಗ್ಯ, ನೀರಾವರಿ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕೆಲಸಗಳ ಮೂಲಕ ರಾಮನೂರಿಗೆ ಹೊಸ ಕಾಯಕಲ್ಪ ನೀಡುತ್ತಿದ್ದೇವೆ. ನೀವು ಕೊಟ್ಟ ಮತದ ಶಕ್ತಿಯಿಂದ ಇದೆಲ್ಲವೂ ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.

ಬಡವರಿಗೆ ನಿವೇಶನ ಒದಗಿಸಲು ರಾಮನಗರ ತಾಲೂಕಿನಲ್ಲಿ 260 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದ್ದು, ಅದನ್ನು ₹27 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಪ್ರಾಧಿಕಾರ ವತಿಯಿಂದ ಅರ್ಚಕರಹಳ್ಳಿಯಲ್ಲಿ 116 ಎಕರೆಯಲ್ಲಿ ಹೊಸ ಬಡಾವಣೆ ನಿರ್ಮಾಣಕ್ಕೆ ಸಿದ್ಧತೆಗಳು ನಡೆದಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಿಸಲಾಗುವುದು. ಮುಂದಿನ ಆರೇಳು ತಿಂಗಳಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಲೋಕಾರ್ಪಣೆ ಮಾಡಲಾಗುವುದು ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಮೂರು ಬಡಾವಣೆಗಳಿಗೆ ಮರು ಜೀವ:

ಸತ್ತು ಹೋಗಿರುವ ಮನುಷ್ಯನ ಅಂತ್ಯ ಸಂಸ್ಕಾರ ನೆರವೇರಿಸುವುದಷ್ಟೇ ಬಾಕಿ ಇರುವಾಗ ಆ ಮನುಷ್ಯ ಮತ್ತೆ ಉಸಿರಾಡಿದರೆ ಹೇಗೆ ಆಶ್ಚರ್ಯ ಪಡುತ್ತೇವೊ ಅದೇ ರೀತಿಯ ಸ್ಥಿತಿ ಮೂರು ಬಡಾವಣೆಗಳದ್ದಾಗಿದೆ. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವ, ಡಿ.ಕೆ.ಸುರೇಶ್ ಮಾರ್ಗದರ್ಶನದಲ್ಲಿ ನಾನು ಮತ್ತು ಪ್ರಾಧಿಕಾರ ಅಧ್ಯಕ್ಷರು, ನಿರ್ದೇಶಕರು ಪ್ರಾಧಿಕಾರದ ಮೂರು ಬಡಾವಣೆಗಳಿಗೆ ಕಾಯಕಲ್ಪ ನೀಡಿದ್ದೇವೆ ಎಂದು ತಿಳಿಸಿದರು.

ಈ ಮೂರು ಬಡಾವಣೆಗಳ ಮೂಲ ದಾಖಲಾತಿಗಳು ಇರಲಿಲ್ಲ. ನಿವೇಶನದಾರರು ಯಾರೆಂದು ಗೊತ್ತಿರಲಿಲ್ಲ. ಜಾಗದ ಮೂಲ ಪತ್ರಗಳು ಇರಲಿಲ್ಲ. ಇದಕ್ಕೊಂದು ರೂಪ ನೀಡುವುದು ಸವಾಲಿನ ಪ್ರಶ್ನೆಯಾಗಿತ್ತು. ನಮಗೆಲ್ಲ ಕಾನೂನು ಚೌಕಟ್ಟಿನಲ್ಲಿ ಯಾವ ರೀತಿ ಕೆಲಸ ಮಾಡಬಹುದು ಎಂಬುದನ್ನು ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ದಾರಿ ತೋರಿಸಿದರು. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ ಫಲವಾಗಿ ಮೂರು ಬಡಾವಣೆಗಳಿಗೆ ಜೀವ ಬಂದಿದೆ ಎಂದು ಹೇಳಿದರು.

ಈ ಬಡಾವಣೆಗಳಲ್ಲಿ 170 ನಿವೇಶನಗಳು ಹರಾಜು ಬಾಕಿ ಇದೆ. ವಾರಸುದಾರರು ಇಲ್ಲದಿರುವ 60 ನಿವೇಶನಗಳಿವೆ. ಆಗ ಅಧ್ಯಕ್ಷರು, ಆಯುಕ್ತರು ಮತ್ತು ನಿರ್ದೇಶಕರಾಗಿದ್ದವರು ತಮ್ಮ ಸ್ವಾರ್ಥಕ್ಕಾಗಿ ಬಡವರ ರಕ್ತ ಹೀರುವ ಕೆಲಸ ಮಾಡಿದ್ದಾರೆ. ಅದರಲ್ಲಿ ಕೆಲವರು ಜೈಲಿಗೆ ಹೋಗಿದ್ದರೆ, ಇನ್ನೂ ಕೆಲವರು ತಪ್ಪಿಸಿಕೊಂಡು ಅಧ್ಯಕ್ಷ ಸ್ಥಾನ ಬಿಟ್ಟು ಹೋದರು ಎಂದು ಇಕ್ಬಾಲ್ ಹುಸೇನ್ ಕಿಡಿಕಾರಿದರು.

ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ. ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ನಿರ್ದೇಶಕರಾದ ಪರ್ವೀಜ್ ಪಾಷಾ, ಶ್ರೀದೇವಿ, ಶ್ರೀನಿವಾಸ್, ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್, ನಿರ್ದೇಶಕರಾದ ಬಸವರಾಜು, ಫರೀದ್, ಲಕ್ಷ್ಮಮ್ಮ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಎನ್ ಆರ್ ವೆಂಕಟೇಶ್, ನಗರಸಭೆ ಮಾಜಿ ಸದಸ್ಯರಾದ ನಿಜಾಮುದ್ದೀನ್ ಷರೀಫ್, ಆಯಿಷಾ ಬಾನು, ಬೈರೇಗೌಡ, ಗಿರಿಜಮ್ಮ, ವಿಜಯ ಕುಮಾರಿ, ಬಮೂಲ್ ನಿರ್ದೇಶಕ ಹರೀಶ್, ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯ ರವಿ, ಮುಖಂಡರಾದ ಪ್ರಾಣೇಶ್, ಮಂಚೇಗೌಡ, ಪ್ರಾಧಿಕಾರ ಆಯುಕ್ತೆ ತೇಜಸ್ವಿನಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಉಪಸ್ಥಿತರಿದ್ದರು.

----------

ಆರ್ಥಿಕ ಸಂಕಷ್ಟದಲ್ಲಿದ್ದ ಪ್ರಾಧಿಕಾರಕ್ಕೆ ₹40 ಕೋಟಿ ಆದಾಯ: ಎ.ಬಿ.ಚೇತನ್ ಕುಮಾರ್

ರಾಮನಗರ: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಿಬ್ಬಂದಿಗೆ ವೇತನ ಮತ್ತು ವಾಹನಗಳಿಗೆ ಇಂಧನ ತುಂಬಿಸಲು ಹಣ ಇಲ್ಲದೆ ಆರ್ಥಿಕ ಸಂಕಷ್ಟದಲ್ಲಿತ್ತು. ನಾನು ಅಧ್ಯಕ್ಷನಾದ ಮೇಲೆ ಮೂರು ಬಡಾವಣೆಗಳಿಗೆ ಮರು ಜೀವ ಕಲ್ಪಿಸುವ ಜೊತೆಗೆ ಪ್ರಾಧಿಕಾರ ₹37 ರಿಂದ ₹40 ಕೋಟಿ ಆದಾಯದಲ್ಲಿ ಇರುವಂತೆ ಮಾಡಿದ್ದೇನೆ. ಆ ಹುದ್ದೆಗೆ ನ್ಯಾಯ ಒದಗಿಸಿದ ಆತ್ಮ ತೃಪ್ತಿ ಇದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಹೇಳಿದರು.

ನಗರದ ಹೊರ ವಲಯದ ಜೀಗೇನಹಳ್ಳಿಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಅರ್ಕಾವತಿ ವಸತಿ ಬಡಾವಣೆ ಹಾಗೂ ಕಣ್ವ ವಸತಿ ಬಡಾವಣೆಗಳ ಮರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಇಕ್ಬಾಲ್ ಹುಸೇನ್ ರವರು ನನಗೆ ಬೆನ್ನೆಲುಬಾಗಿ ನಿಂತರು. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಹುಮ್ಮಸ್ಸು ಬಂದಿದ್ದರಿಂದಲೇ ಪ್ರಾಧಿಕಾರ ಸುಸ್ಥಿತಿಗೆ ಬರಲು ಸಾಧ್ಯವಾಯಿತು. ಸಿಕ್ಕ ಅವಕಾಶದಲ್ಲಿ ಕೆಲಸ ಮಾಡಿರುವ ತೃಪ್ತಿ ಇದೆ. ಈ ಅವಕಾಶ ನೀಡಿದ್ದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ಮೂರು ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರದ ಸೂಚನೆಯಂತೆ ಚದರಡಿಗೆ ₹200 ಅಭಿವೃದ್ಧಿ ಶುಲ್ಕ ನಿಗದಿ ಪಡಿಸಲಾಗಿತ್ತು. ಶುಲ್ಕ ಪಾವತಿಸಿದ 6 ತಿಂಗಳೊಳಗೆ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದೆವು. ಆದರೆ ಅನೇಕರಿಗೆ ಭರವಸೆ ಇರಲಿಲ್ಲ. ಅಭಿವೃದ್ಧಿ ಪಾವತಿಸುವ ವಿಶ್ವಾಸದ ಮೇರೆಗೆ ಕಾಮಗಾರಿ ಕೈಗೊಳ್ಳಲು ಟೆಂಡರ್ ಸಹ ಕರೆದಿದ್ದೆವು. ಅನೇಕರು ಶುಲ್ಕವನ್ನು ತಡವಾಗಿ ಪಾವತಿಸಿದರು. ಹೀಗಾಗಿ ಕಾಮಗಾರಿ ಆರಂಭವಾಗುವುದು ಸಹ ತಡವಾಯಿತು ಎಂದು ತಿಳಿಸಿದರು.

ಈಗ 1661 ಮಂದಿ ಪೈಕಿ 1436 ಮಂದಿ ಅಭಿವೃದ್ಧಿ ಶುಲ್ಕವನ್ನು ಪಾವತಿಸಿದ್ದಾರೆ. ಉಳಿದವರು ಈಗಲಾದರೂ ಪಾವತಿಸುವ ವಿಶ್ವಾಸವಿದೆ. ನಿವೇಶನ ಹಂಚಿಕೆಯಾಗಿ ಹಲವು ವರ್ಷಗಳು ಕಳೆದರೂ ರಸ್ತೆ, ನೀರು, ಒಳ ಚರಂಡಿಯಂಥ ಅಗತ್ಯ ಸೌಲಭ್ಯಗಳಿಲ್ಲದೆ ಮನೆ ಕಟ್ಟಲು ಹಿಂದೇಟು ಹಾಕುತ್ತಿದ್ದ ನಿವೇಶನ ದಾರರಿಗೆ ಪ್ರಾಧಿಕಾರದ ಇತ್ತೀಚಿನ ಕ್ರಮಗಳು ಹೊಸ ಭರವಸೆ ಮೂಡಿಸಿವೆ. ಪ್ರಾಧಿಕಾರದ ಅಧ್ಯಕ್ಷರಾಗಿ ನಿವೇಶನ ಖರೀದಿದಾರರಿಗೆ ನ್ಯಾಯ ದೊರಕಿಸಿಕೊಟ್ಟ ತೃಪ್ತಿ ಇದೆ ಎಂದರು.

------

2027ರಲ್ಲಿ ಡಿಸೆಂಬರ್ ನಲ್ಲಿ ಮತ್ತೊಮ್ಮೆ ರಾಮೋತ್ಸವ ಆಚರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಫೆಬ್ರವರಿ ತಿಂಗಳಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಮೊದಲ ರಾಮೋತ್ಸವ ನಾನು ಭಾವಿಸಿದ್ದಕ್ಕಿಂತಲೂ ಮಿಗಿಲಾಗಿ ಯಶಸ್ವಿ ಕಂಡಿದೆ. ಎರಡನೇ ರಾಮೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಇದಕ್ಕಾಗಿ ಕ್ಷೇತ್ರದ ಜನರು ನನ್ನೊಂದಿಗೆ ಕೈ ಜೋಡಿಸಬೇಕು.

- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.

-