ರಾಮನಗರ ಜಿಲ್ಲಾದ್ಯಂತ ಸಂಭ್ರಮದ ರಂಜಾನ್

| Published : Apr 01 2025, 12:46 AM IST

ಸಾರಾಂಶ

ಮನುಷ್ಯನ ಮನಸ್ಸಿನಲ್ಲಿ ಹುದುಗಿರುವ ದ್ವೇಷ ನಿರ್ನಾಮಗೊಂಡು, ಪ್ರೀತಿ, ವಿಶ್ವಾಸ ಹುಟ್ಟಿಸುವ ಪವಿತ್ರ ರಂಜಾನ್ ಹಬ್ಬವನ್ನು ರೇಷ್ಮೆ ನಗರಿ ರಾಮನಗರದಲ್ಲಿ ಸೋಮವಾರ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ, ಸಡಗರದಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಮನುಷ್ಯನ ಮನಸ್ಸಿನಲ್ಲಿ ಹುದುಗಿರುವ ದ್ವೇಷ ನಿರ್ನಾಮಗೊಂಡು, ಪ್ರೀತಿ, ವಿಶ್ವಾಸ ಹುಟ್ಟಿಸುವ ಪವಿತ್ರ ರಂಜಾನ್ ಹಬ್ಬವನ್ನು ರೇಷ್ಮೆ ನಗರಿ ರಾಮನಗರದಲ್ಲಿ ಸೋಮವಾರ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ, ಸಡಗರದಿಂದ ಆಚರಿಸಿದರು.

ನಗರದ ಮಿನಿ ವಿಧಾನಸೌಧದ ಎದುರಿನಲ್ಲಿರುವ ಈದ್ಗಾ ಮೈದಾನಕ್ಕೆ ತಂಡೋಪತಂಡವಾಗಿ ಆಗಮಿಸಿದ ಸಾವಿರಾರು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನದಲ್ಲಿ ಸ್ಥಳಾವಕಾಶದ ಕೊರತೆ ಎದುರಾದ ಕಾರಣ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಯೂ ಕೆಲ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.

ಎಲ್ಲ ಧರ್ಮದಲ್ಲಿಯೂ ಉಪವಾಸಕ್ಕೆ ಪ್ರಾಮುಖ್ಯತೆ, ವಿಶೇಷತೆ ಇದೆ. ಉಪವಾಸ ಆರೋಗ್ಯಕ್ಕೆ ಒಳ್ಳೆಯದು ಮತ್ತು ಸರಳ ಜೀವನವನ್ನು ಉತ್ತೇಜಿಸುತ್ತದೆ. ಮನುಷ್ಯನ ಅಂತಃಶುದ್ಧಿಗೆ ಹಾಗೂ ಪಾಪ ಪರಿಹಾರಕ್ಕೆ ಉಪವಾಸ ಉತ್ತಮ ಮಾರ್ಗ. ಹೀಗಾಗಿ ರಂಜಾನ್ ಮಾಸದಲ್ಲಿ ಪ್ರತಿಯೊಬ್ಬ ಮುಸ್ಲಿಮರು ಬಡವ-ಬಲ್ಲಿದ ಎನ್ನದೆ ಉಪವಾಸ ಆಚರಿಸುತ್ತಾರೆ.

ಒಂದು ತಿಂಗಳ ಕಾಲ ಶ್ರದ್ಧಾಭಕ್ತಿಯಿಂದ ಉಪವಾಸ ನಡೆಸಿದ ಮುಸಲ್ಮಾನ ಬಂಧುಗಳು ಉಪವಾಸ ಅಂತ್ಯಗೊಳಿಸಿ ರಂಜಾನ್ ಆಚರಿಸಿದರು. ಹೊಸ ಉಡುಗೆ ತೊಟ್ಟು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಶಾಸಕ ಇಕ್ಬಾಲ್ ಹುಸೇನ್ ಸೇರಿದಂತೆ ಗಣ್ಯರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ರಾಜಕೀಯ ಪಕ್ಷಗಳ ಮುಖಂಡರು ಪ್ರಾರ್ಥನಾ ಸ್ಥಳಕ್ಕೆ ಆಗಮಿಸಿ ಮುಸಲ್ಮಾನ ಬಂಧುಗಳಿಗೆ ಹಬ್ಬದ ಶುಭಾಶಯ ಕೋರಿದರು.

ರಂಜಾನ್ ಪ್ರಯುಕ್ತ ನಡೆದ ಸಾಮೂಹಿಕ ನಮಾಜ್ ವೇಳೆ ಮುಸಲ್ಮಾನರು ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ವಿಶೇಷ ಬಂದೋಬಸ್ತ್ ಕೈಗೊಂಡಿದ್ದರು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಯೂ ಪ್ರಾರ್ಥನೆ ಸಲ್ಲಿಸುತ್ತಿದ್ದ ಕಾರಣ ವಾಹನಗಳನ್ನು ಪರ್ಯಾಯ ರಸ್ತೆಗಳ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಬಂದೋಬಸ್ತ್ ಮೇಲ್ವಿಚಾರಣೆ ನಡೆಸಿದರು.

ಮಾಗಡಿ ವರದಿ:

ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಮರು ಸಡಗರ ಸಂಭ್ರಮದಿಂದ ಆಚರಿಸಿದರು. ಮಾಗಡಿ ಪಟ್ಟಣದ ಕಲ್ಯಾಗೇಟ್ ಬಳಿ ಇರುವ ದರ್ಗಾದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಪಟ್ಟಣದ ಹೊಸ ಮಸೀದಿ ಮತ್ತು ಹಳೇ ಮಸೀದಿ ಮೊಹಲ್ಲಾ, ಹೊಸಪೇಟೆ, ಹಂಚೀಕುಪ್ಪೆ, ವಿ.ಜಿ.ದೊಡ್ಡಿ, ಸಂಕೀಘಟ್ಟ, ಹೊಸಲಾಯ, ಹಳೇಲಾಯ, ತಿಪ್ಪಸಂದ್ರ, ಬಿಸ್ಕೂರು, ಕುದೂರು, ಸುಗ್ಗನಹಳ್ಳಿ, ಮಾಯಸಂದ್ರ, ಮಾಡಬಾಳ್, ಆಗಲಕೋಟೆ, ಚಕ್ರಭಾವಿ, ಮೋಟಗಾನಹಳ್ಳಿ, ಸೋಲೂರು ಸೇರಿದಂತೆ ವಿವಿಧೆಡೆ ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕನಕಪುರ ವರದಿ:

ಪವಿತ್ರ ಈದ್-ಉಲ್ ಫಿತರ್ ಹಬ್ಬವನ್ನು ಕನಕಪುರದಲ್ಲಿ ಮುಸಲ್ಮಾನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಒಂದು ತಿಂಗಳ ಕಾಲ ಉಪವಾಸ ವ್ರತ ಮುಗಿಸಿದ ನಂತರ ಚಂದ್ರದರ್ಶನ ಮಾಡಿದ ಮುಸ್ಲಿಮರು ಸೋಮವಾರ ಬೆಳಗ್ಗೆ ಕನಕಪುರದ ನಾನಾ ಭಾಗಗಳಲ್ಲಿನ ಮಸೀದಿಗಳಿಂದ ಮೆರವಣಿಗೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ತೆರಳಿದರು. ಇಲ್ಲಿನ ನಮಾಜಿ ಬೋರೆಯ ಈದ್ಗಾ ಪ್ರದೇಶದಲ್ಲಿ ಸೇರಿದ ಸಾವಿರಾರು ಮುಸ್ಲಿಮರು ಪ್ರಧಾನ ಇಮಾಂ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ಕೋರಿದರು.ರಂಜಾನ್ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದವರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ಚನ್ನಪಟ್ಟಣ ವರದಿ :

ಮುಸ್ಲೀಮರ ಪವಿತ್ರ ಹಬ್ಬವಾದ ರಂಜಾನ್ ಅನ್ನು ತಾಲೂಕಿನ ಮುಸ್ಲೀಂ ಬಾಂಧವರು ಶ್ರದ್ಧಾ, ಭಕ್ತಿ, ಸಂಭ್ರಮ ಸಡಗರದಿಂದ ಆಚರಿಸಿದರು. ನಗರದ ಕೋಟೆಯ ಈದ್ಗಾ ಮೈದಾನ, ಮೆಹೆದವಿಯ ಈದ್ಗಾ ಮೈದಾನಗಳಲ್ಲಿ ಜಮಾಯಿಸಿದ ಮುಸ್ಲೀಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಪ್ರಾರ್ಥನೆಯಲ್ಲಿ ಭಾಗಿಯಾದರು. ಕಳೆದ ೪೦ದಿನಗಳಿಂದ ಪ್ರತಿನಿತ್ಯ ಉಪವಾಸ ಪ್ರಾರ್ಥನೆ ನಡೆಸಿದ್ದ ಮುಸ್ಲೀಮರು ಹಬ್ಬದ ಹಿನ್ನೆಲೆಯಲ್ಲಿ ಹೊಸಬಟ್ಟೆ ತೊಟ್ಟು ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.

ಬೆಳಿಗ್ಗೆಯಿಂದಲೇ ಈದ್ಗಾ ಮೈದಾನಕ್ಕೆ ತಂಡೋಪತಂಡವಾಗಿ ಬಂದ ಮುಸ್ಲಿಂ ಸಮುದಾಯದವರು ಧರ್ಮಗುರುಗಳ ಉಪದೇಶದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ರಂಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ತಾಲೂಕಿನ ಹೊಂಗನೂರು, ಕೋಡಂಬಹಳ್ಳಿ, ಎಂ.ಕೆ. ದೊಡ್ಡಿ ಗ್ರಾಮಗಳಲ್ಲಿ ಸಹ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನಗಳ ಬಳಿ ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಸಾಮೂಹಿಕ ಪ್ರಾರ್ಥನೆಯ ವೇಳೆ ಈದ್ಗಾ ಮೈದಾನಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಶಾಸಕರಿಂದ ಪ್ರಾರ್ಥನೆ, ಶುಭಾಶಯ ವಿನಿಮಯ

ರಾಮನಗರ: ನಗರದ ಎಪಿಎಂಸಿ ಬಳಿಯಿರುವ ಈದ್ಗಾ ಮೈದಾನದಲ್ಲಿ ಸೋಮವಾರ ಬೆಳಿಗ್ಗೆ ಮುಸ್ಲಿಂ ಬಾಂಧವರೊಂದಿಗೆ ಶಾಸಕ ಇಕ್ಬಾಲ್‌ಹುಸೇನ್ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್, ಪ್ರಪಂಚದಲ್ಲಿನ ಜನರು ಶಾಂತಿ-ನೆಮ್ಮದಿಯಿಂದ ಬದುಕಲು ಆಶೀರ್ವದಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.

ನಾನು ಶಾಸಕನಾಗುವುದಕ್ಕೂ ಮೊದಲು ನಗರ ಸೇರಿದಂತೆ ಕ್ಷೇತ್ರದೆಲೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಈಗ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲಾಗಿದೆ. ರಸ್ತೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.