ಸಾರಾಂಶ
ರಾಮನಗರ : ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಕುರಿತು ಸಂಸದ ಡಾ.ಸಿ.ಎನ್.ಮಂಜುನಾಥ ವಿರೋಧ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಯಾವುದೇ ಕಾರಣಕ್ಕೂ ರಾಮನಗರ ಬೆಂಗಳೂರಿಗೆ ಸೇರಬಾರದು, ಹೀಗಾದರೆ ಮುಂದೊಂದು ದಿನ ಕೋಲಾರವನ್ನು ಬೆಂಗಳೂರು ಪೂರ್ವಕ್ಕೆ, ಚಿಕ್ಕಬಳ್ಳಾಪುರವನ್ನು ಬೆಂಗಳೂರು ಉತ್ತರಕ್ಕೂ ಹಾಗೂ ಸುತ್ತಮುತ್ತಲ ಜಿಲ್ಲೆಗಳನ್ನು ನಗರಕ್ಕೆ ಸೇರಿಸುವಂತೆ ಪ್ರಸ್ತಾವನೆಗಳು ಬರುತ್ತವೆ. ಹೀಗಾಗಿ ಇದೊಂದು ಅವೈಜ್ಞಾನಿಕ ಯೋಜನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಮನಗರಕ್ಕೆ ಐತಿಹಾಸಿಕ, ಪೌರಾಣಿಕ, ಧಾರ್ಮಿಕ ಹಾಗೂ ಇತಿಹಾಸದ ಭಾವನೆಗಳಿವೆ. ಕ್ಲೋಸ್‌ಪೇಟೆಗೆ ರಾಮನಗರ ಎಂದು ನಾಮಕರಣ ಮಾಡಿದವರು ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ. ಧಾರ್ಮಿಕ ಗುರು ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಶಿವಕುಮಾರ ಮಹಾಸ್ವಾಮಿ ಇದೇ ರಾಮನಗರ ಜಿಲ್ಲೆಯವರು ಎಂದು ವಿವರಿಸಿದ್ದಾರೆ.
ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಇದೇ ಜಿಲ್ಲೆಯವರು. ರಾಮನಗರ ಜಿಲ್ಲೆ ರಾಜ್ಯಕ್ಕೆ ಐದು ಬಾರಿ ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಅದರಲ್ಲಿ ಎಚ್.ಡಿ.ದೇವೇಗೌಡರು ದೇಶದ ಪ್ರಧಾನಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಾಮನಗರ ಕಣ್ವ ಮಹರ್ಷಿಯ ನಾಡು. ರಾಮಾಯಾಣದಲ್ಲಿ ಶ್ರೀರಾಮಚಂದ್ರನು ರಾಮಗಿರಿಯಲ್ಲಿ ನೆಲೆಸಿದ್ದನು ಎಂಬ ಉಲ್ಲೇಖವಿದೆ. ರಾಮನಗರಕ್ಕೆ ರೇಷ್ಮೆ ನಾಡು ಎಂಬ ಹೆಸರು ಕೂಡ ಇದೆ.
ರಾಮನಗರ ಹೆಸರು ಹೇಳುತ್ತಿದ್ದಂತೆ ಜಾನಪದ ಲೋಕ, ಚನ್ನಪಟ್ಟಣದ ಬೊಂಬೆಗಳು, ಅರ್ಕಾವತಿ, ಕಾವೇರಿ, ಶಿಂಷಾ, ಕಣ್ವಾ ನದಿಗಳು, ಮಂಚನಬೆಲೆ, ಬೈರಮಂಗಲ, ಹಾರೋಬೆಲೆ, ಕಣ್ವ ಹಾಗೂ ಇಗ್ಗಲೂರು ಜಲಾಶಯಗಳು. ರಾಮಗಿರಿ, ಕೃಷ್ಣಗಿರಿ, ಶ್ರೀ ರೇವಣ್ಣ ಸಿದ್ದೇಶ್ವರ ಬೆಟ್ಟ, ಯರಿರಾಜಗಿರಿ, ಸೋಮಗಿರಿ, ಸಿಡಿಲಕಲ್ಲು, ಜಲಸಿದ್ದೇಶ್ವರ ಬೆಟ್ಟ, ಕಬ್ಬಾಳು ದುರ್ಗ, ಸಾವನದುರ್ಗ, ಮೇಕೆದಾಟು ಮುಂತಾದವುಗಳು ನೆನಪಿಗೆ ಬರುತ್ತದೆ. ಈ ಹಿನ್ನೆಲೆ ಜಿಲ್ಲೆಗೆ ರಾಮನಗರ ಹೆಸರೇ ಸರಿಯಾಗಿದೆ. ರಾಮನಗರ ರಕ್ಷಾ ಕವಚದಂತಿದೆ ಎಂದು ತಿಳಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಬೇಕಾದರೆ ಬ್ರ್ಯಾಂಡ್ ರಾಮನಗರ ಎಂದು ಹೊಸ ಯೋಜನೆ ತರಲಿ, ಅದು ಬಿಟ್ಟು ರಾಮನಗರದ ಮರುನಾಮಕರಣ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಸಂಸದ ಮಂಜುನಾಥ್ ಪತ್ರದಲ್ಲಿ ಆಗ್ರಹಿಸಿದ್ದಾರೆ.