ರಾಮನಗರದ ಮಾಯಗಾನಹಳ್ಳಿ ಡೇರೀಲಿ ಅವ್ಯವಹಾರ ಖಂಡಿಸಿ ರಾಜೀನಾಮೆ: ಡೇರಿ ನಿರ್ದೇಶಕ ಪುಟ್ಟಲಿಂಗಯ್ಯ

| Published : Sep 25 2024, 12:51 AM IST

ರಾಮನಗರದ ಮಾಯಗಾನಹಳ್ಳಿ ಡೇರೀಲಿ ಅವ್ಯವಹಾರ ಖಂಡಿಸಿ ರಾಜೀನಾಮೆ: ಡೇರಿ ನಿರ್ದೇಶಕ ಪುಟ್ಟಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವಾಗಿ ಹಾಲು ಉತ್ಪಾದಕ ಸದಸ್ಯರ ನಡುವೆ ನಡೆದ ಮಾತಿನ ಚಕಮಕಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಂಗಳವಾರ ನಡೆಯಿತು.

ಚುನಾವಣೆ ಖರ್ಚಿನ ನೆಪದಲ್ಲಿ ₹1 ಲಕ್ಷ ದುರುಪಯೋಗ

ಕನ್ನಡಪ್ರಭ ವಾರ್ತೆ ರಾಮನಗರನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವಾಗಿ ಹಾಲು ಉತ್ಪಾದಕ ಸದಸ್ಯರ ನಡುವೆ ನಡೆದ ಮಾತಿನ ಚಕಮಕಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ತಾಲೂಕಿನ ಮಾಯಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಂಗಳವಾರ ನಡೆಯಿತು.ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಪಿ.ನಾಗರಾಜು ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸರ್ವ ಸದಸ್ಯರ ಸಭೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಹಾಲು ಉತ್ಪಾದಕ ಸದಸ್ಯ ಪುಟ್ಟಲಿಂಗಯ್ಯ ತನ್ನ ಪುತ್ರ ಎಂ.ಪಿ.ಯೋಗೇಶ್, ಹಾಲು ಉತ್ಪಾದಕ ಸದಸ್ಯರು ಹಾಗೂ ಬೆಂಬಲಿಗರೊಂದಿಗೆ ತೆರಳಿದ್ದರು.ಪುಟ್ಟಲಿಂಗಯ್ಯ ನಿರ್ದೇಶಕ ಸ್ಥಾನದ ರಾಜೀನಾಮೆ ಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ಯದರ್ಶಿ ಶಿವನಂಜಯ್ಯಗೆ ಸಲ್ಲಿಸಲು ಮುಂದಾಗುತ್ತಿದ್ದಂತೆ ಅಧ್ಯಕ್ಷ ಪಿ.ನಾಗರಾಜು ಆಕ್ಷೇಪ ವ್ಯಕ್ತಪಡಿಸಿದರು. ಇದು ಸರ್ವ ಸದಸ್ಯರ ಸಭೆ ಹೊರಗಿನವರು ಬರಲು ಅವಕಾಶ ಇಲ್ಲವೆಂದು ಏರು ಧ್ವನಿಯಲ್ಲಿ ಮಾತನಾಡಿದರು. ಇದರಿಂದ ಕೆರಳಿದ ಯೋಗೇಶ್ ಹಾಗೂ ಹಾಲು ಉತ್ಪಾದಕ ಸದಸ್ಯರು ನಾಗರಾಜು ಅವರನ್ನು ತರಾಟೆ ತೆಗೆದುಕೊಂಡರು.ಈ ವೇಳೆ ನಾಗರಾಜು ಕೆಲ ಬೆಂಬಲಿಗರು ಸಭಾಂಗಣದೊಳಗೆ ಪ್ರವೇಶಿಸಿ ಯೋಗೇಶ್ ಮತ್ತು ಹಾಲು ಉತ್ಪಾದಕರ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆಸಿ ತಳ್ಳಾಟ ಮಾಡಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಗಿ ಆತಂಕದ ವಾತಾವರಣ ನಿರ್ಮಾಣವಾಯಿತು. ಹಿರಿಯ ಸದಸ್ಯರು ವಾಗ್ವಾದಲ್ಲಿ ತೊಡಗಿದ್ದವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸಭೆಯಲ್ಲಿ ಉಂಟಾದ ಗೊಂದಲ ತಹಬದಿಗೆ ಬರದಿದ್ದಾಗ ಪಿ.ನಾಗರಾಜು ಸಭೆಯಿಂದ ಹೊರ ನಡೆದರು. ಆನಂತರ ಯೋಗೇಶ್ ತಮ್ಮ ತಂದೆ ಪುಟ್ಟಲಿಂಗಯ್ಯ ಅವರಿಂದ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವನಂಜಯ್ಯ ಅವರಿಗೆ ರಾಜೀನಾಮೆ ಪತ್ರ ಕೊಡಿಸಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡೇರಿ ನಿರ್ದೇಶಕ ಪುಟ್ಟಲಿಂಗಯ್ಯ ಪುತ್ರ ಎಂ.ಪಿ.ಯೋಗೇಶ್, ತಮ್ಮ ತಂದೆ ಪುಟ್ಟಲಿಂಗಯ್ಯ ಅನಕ್ಷರಸ್ಥರೆಂಬ ಕಾರಣಕ್ಕೆ ಡೇರಿಯಲ್ಲಿ ನಾಮಕಾವಸ್ಥೆ ನಿರ್ದೇಶಕರನ್ನಾಗಿ ಮಾಡಿಕೊಳ್ಳಲಾಗಿದೆ. ಸಂಘದಲ್ಲಿ ನಡೆದಿರುವ ಲಕ್ಷಾಂತರ ರು. ಅವ್ಯವಹಾರ ಖಂಡಿಸಿ ರಾಜೀನಾಮೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಭೆಯ ಪೂರ್ವಭಾವಿ ನೋಟಿಸ್‌ ನೀಡದೆ ಕಾರ್ಯಕಾರಿ ಸಭೆ, ಮಹಾಸಭೆ ಹಾಗೂ ಚುನಾವಣೆಗಳನ್ನು ಯಾವ ಸದಸ್ಯರ ಗಮನಕ್ಕೂ ಬಾರದ ರೀತಿಯಲ್ಲಿ ಸರ್ವಾಧಿಕಾರಿಯಂತೆ 20 ವರ್ಷಗಳಿಂದ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ. 2022-23ನೇ ಸಾಲಿನಲ್ಲಿ ಚುನಾವಣೆ ಖರ್ಚಿನ ನೆಪದಲ್ಲಿ 1 ಲಕ್ಷ ರು. ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.ಚುನಾವಣೆಯನ್ನೇ ನಡೆಸದೆ ಅಧ್ಯಕ್ಷರಾದ ಪಿ.ನಾಗರಾಜು ಒಂದು ಲಕ್ಷ ರು. ಖರ್ಚು ಎಂದು ತೋರಿಸಿದ್ದಾರೆ. ಪುಟ್ಟಲಿಂಗಯ್ಯ ನಿರ್ದೇಶಕರಾದ ಮೇಲೆ ಒಂದೇ ಒಂದು ಸಭೆಗೆ ಸೂಚನಾ ಪತ್ರ ನೀಡಿಲ್ಲ. ಸ್ವಂತ ಆಸ್ತಿಯಲ್ಲಿ ನಿವೇಶನ ಖರೀದಿಸುವ ಮುನ್ನ ಯಾರಿಗೂ ಹೇಳಿಲ್ಲ. ಖರೀದಿಸಿರುವ ನಿವೇಶನ ಬಿಟ್ಟು ಬೇರೆ ನಿವೇಶನದಲ್ಲಿ ಸಂಘದ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ದೂರಿದರು.ಗ್ರಾಮದ ಅಂಚಿನಲ್ಲಿಯೇ ಕಡಿಮೆ ಬೆಲೆಯಲ್ಲಿ ಡೇರಿ ಕಟ್ಟಡಕ್ಕೆ ನಿವೇಶನ ಲಭ್ಯವಿದ್ದರೂ ಪಿ.ನಾಗರಾಜು ತಮ್ಮ ಆಸ್ತಿಯಲ್ಲಿ ಅತಿ ಹೆಚ್ಚು ಬೆಲೆ ನಿವೇಶನ ಖರೀದಿಸಲು ಮಹಾಸಭೆಯಲ್ಲಿ ತೀರ್ಮಾನ ಮಾಡಿಸಿದರು. ವರ್ಷಾನುಗಟ್ಟಲೆ ಸಂಘಕ್ಕೆ ಹಾಲು ಸರಬರಾಜು ಮಾಡಿದ ರೈತರಿಗೆ ಸದಸ್ಯತ್ವ ನೀಡದೆ ವಂಚಿಸುತ್ತಿರುವುದರ ಉದ್ದೇಶ ಏನೆಂದು ಪ್ರಶ್ನಿಸಿದರು.ಸಂಘದಲ್ಲಿ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಇಚ್ಚಾನುಸಾರ ವರ್ತಿಸುತ್ತಾ ವಂಚಿಸುತ್ತಾ ಅವ್ಯವಹಾರ, ಅಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ತಾಳಕ್ಕೆ ತಕ್ಕಂತೆ ವರ್ತಿಸಲು ಸಾಧ್ಯವಿಲ್ಲದೆ ಮತ್ತು ಕುತಂತ್ರಕ್ಕೆ ಬಲಿಯಾಗಲು ಇಷ್ಟವಿಲ್ಲದೆ ಪುಟ್ಟಲಿಂಗಯ್ಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಿದರು.

‍ಅವ್ಯವಹಾರದ ಆರೋಪ ಸತ್ಯಕ್ಕೆ ದೂರ

ರಾಮನಗರ: ಮಾಯಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿವೇಶನ, ಕಟ್ಟಡ ನಿರ್ಮಾಣ ಹಾಗೂ ಚುನಾವಣೆ ಹೆಸರಿನಲ್ಲಿ ಲಕ್ಷಾಂತರ ರು. ಅವ್ಯವಹಾರ ನಡೆದಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಂಘದ ಅಧ್ಯಕ್ಷ ಪಿ.ನಾಗರಾಜು ಸ್ಪಷ್ಟನೆ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂಘಕ್ಕೆ ತಮ್ಮ ಸ್ವಂತ ಜಾಗ ನೀಡಿ ಹಣ ಕಬಳಿಸಿದ್ದಾರೆಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆದರೆ, ನಾನೇ ಸಂಘದ ಕಟ್ಟಡಕ್ಕಾಗಿ 37 ಲಕ್ಷ ರು.ಖರ್ಚು ಮಾಡಿದ್ದೇನೆ. ರೈತರ ಹಣ ತಿನ್ನುವ ಪರಿಸ್ಥಿತಿ ನನಗೆ ಬಂದಿಲ್ಲ ಎಂದರು.

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇಗೆ ಸಂಘದ ಕಟ್ಟಡದ ಜಾಗ ಸ್ವಾಧೀನವಾದ ಹಿನ್ನೆಲೆಯಲ್ಲಿ 1 ಕೋಟಿ 11 ಲಕ್ಷ ಬಂದಿತು. ಆನಂತರ ಈಗಿರುವ ಕಟ್ಟಡದ ಜಾಗ ಅಡಿಗೆ 3 ಸಾವಿರ ಇದ್ದ ದರವನ್ನು 1900 ರು.ಗೆ ನಿಗದಿಪಡಿಸಿ 45 ಲಕ್ಷ ರು.ಗೆ ಖರೀದಿಸಿದೇವು. ಇದಕ್ಕಾಗಿ ಸಂಘದಲ್ಲಿ 37 ಲಕ್ಷ ರು. ಡ್ರಾ ಮಾಡಿಸಿದ್ದೇವೆ. ಹೊಸ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ 10 ಲಕ್ಷ, ಸಂಘದಿಂದ 11 ಲಕ್ಷ ಪಡೆಯಲಾಗಿದೆ. ಉಳಿಕೆ ಹಣ ಸಂಘದಲ್ಲಿಯೇ ಇದೆ ಎಂದು ತಿಳಿಸಿದರು.