ತಿಲಕ್ ನಗರದಲ್ಲಿ ಸಂಭ್ರಮದ ರಾಮನವಮಿ

| Published : Apr 18 2024, 02:21 AM IST

ಸಾರಾಂಶ

ಮೆರವಣಿಗೆಯಲ್ಲಿ ಮಹಿಳೆಯರು ಕಳಸ ಹಿಡಿದು ಸಾಗಿದರು. ಜನಪದ ವಾದ್ಯಗಳೊಂದಿಗೆ ಕೇಸರಿ ಬಾವುಟ ಹಿಡಿದು ಸಾಗಿದ ಯುವಕರು ನೋಡುಗರ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಪಟ್ಟಣದ ತಿಲಕ್ ಬಡಾವಣೆಯಲ್ಲಿ ಶ್ರೀರಾಮ ದೇವಸ್ಥಾನದಲ್ಲಿ ಬುಧವಾರ ಶ್ರೀರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳಗ್ಗೆ ಮಹಿಳೆಯರು ಕಳಸದೊಂದಿಗೆ ಮುಖ್ಯ ರಸ್ತೆ ಮೂಲಕ ಮೆರವಣಿಗೆ ನಡೆಸಿ ದೊಡ್ಡ ಪೇಟೆಯ ವೆಂಕಣ್ಣನ ಬಾವಿಗೆ ಶ್ರೀರಾಮ ದೇವರನ್ನು ಗಂಗಾ ಪೂಜೆಗೆ ಕರೆದೊಯ್ದು ವಾಪಾಸಾದ ನಂತರ ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮ, ಸೀತಾ, ಲಕ್ಷ್ಮಣ, ಆಂಜನೇಯ ದೇವರಿಗೆ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರು ಕಳಸ ಹಿಡಿದು ಸಾಗಿದರು. ಜನಪದ ವಾದ್ಯಗಳೊಂದಿಗೆ ಕೇಸರಿ ಬಾವುಟ ಹಿಡಿದು ಸಾಗಿದ ಯುವಕರು ನೋಡುಗರ ಗಮನ ಸೆಳೆದರು.

ಕಾರ್ಯಕ್ರಮವನ್ನು ಶ್ರೀರಾಮ ದೇವಸ್ಥಾನ ಸಮಿತಿ, ಶ್ರೀ ರಾಮಾಂಜಿನೇಯ ಯುವಕರ ಸಂಘ, ಶ್ರೀ ರಾಮ ಸ್ವ ಸಹಾಯ ಸಂಘದಿಂದ ಆಯೋಜಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ನಾನಾ ಪೂಜಾ ಕಾರ್ಯಗಳೊಂದಿಗೆ ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಸಂಜೆ ಭಕ್ತರಿಗೆ ಪಾನಕ ಹಾಗೂ ಕೋಸುಂಬರಿ ವಿನಿಯೋಗ ನೆರವೇರಿತು.

ಈ ವೇಳೆ ಪಪಂ ಸದಸ್ಯೆ ಲಕ್ಷ್ಮಿ ದೇವಿ, ಸಮಿತಿ ಅಧ್ಯಕ್ಷ ರಾಜಶೇಖರ್, ರಾಮಾಂಜಿನಿ, ಗೋವಿಂದಪ್ಪ, ಕೃಷ್ಣ ಮೂರ್ತಿ, ಬಾಬು ಪ್ರಸಾದ್, ಕೃಷ್ಣ ಮೂರ್ತಿ ರಘು ತಿಲಕ್, ವೆಂಕಟೇಶ, ಮಹೇಶ, ತಿಮ್ಮರಾಜು, ಬಾಸ್ಕರ್, ಹರೀಶ, ಮಹೇಶ, ಶೋಭರಾಣಿ, ಕವಿತಾ, ವತ್ಸಲಾ, ನಾಗಮ್ಮ, ಲಕ್ಷ್ಮಿದೇವಿ ಇದ್ದರು.