ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಕಲ್ಪತರು ನಾಡಿನ ಶ್ರೀರಾಮ ಹಾಗೂ ಆಂಜನೇಯಸ್ವಾಮಿಯ ದೇವಾಲಯಗಳಲ್ಲಿ ಶ್ರೀರಾಮನವಮಿಯನ್ನು ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರ ಸೇರಿದಂತೆ ಜಿಲ್ಲೆಯಾದ್ಯತ ಶ್ರೀರಾಮ ಮತ್ತು ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಶ್ರೀರಾಮನಾಮ ಸ್ಮರಣೆ ಮೊಳಗಿದವು.ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಶ್ರೀರಾಮನಮವಿ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅದೇ ರೀತಿಯ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ, ಶೆಟ್ಟಿಹಳ್ಳಿ ಗೇಟ್‌ನಲ್ಲಿರುವ ಅಭಯ ಆಂಜನೇಯಸ್ವಾಮಿ ದೇವಾಲಯ, ಕೋಟೆ ಆಂಜನೇಯಸ್ವಾಮಿ ದೇವಾಲಯ, ಬಟವಾಡಿ ಆಂಜನೇಯ, ಪುಟ್ಟಾಂಜನೇಯ, ಆರ್‌ಟಿಓ ಕಚೇರಿ ಬಳಿ ಇರುವ ಆಂಜನೇಯ ಸ್ವಾಮಿ ದೇವಾಲಯ, ಟೌನ್‌ಹಾಲ್ ವೃತ್ತದಲ್ಲಿರುವ ನಾಗರಕಟ್ಟೆ ದೇವಾಲಯ ಸೇರಿದಂತೆ ವಿವಿಧೆಡೆ ಇರುವ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ್ದು, ಶ್ರೀರಾಮನಮಮಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.
ಬಟವಾಡಿ ಸರ್ಕಲ್‌ನಲ್ಲಿ ಮೂರ್ತಿ ಮತ್ತು ಶಶಿಹುಲಿಕುಂಟ್ ಮಠ್ ಹಾಗೂ ತುಮಕೂರು ವಿಶ್ವವಿದ್ಯಾಲಯದ ಮುಂಭಾಗ ನಾರಾಯಣಮೂರ್ತಿಯವರ ನೇತೃತ್ವದಲ್ಲಿ ಶ್ರೀರಾಮನವಮಿಯನ್ನು ಆಚರಿಸಿದ್ದು, ಪೆಂಡಾಲ್ ಹಾಕಿ, ಶ್ರೀರಾಮನ ಭಾವಚಿತ್ರ ಇಟ್ಟು ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತರಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆಯನ್ನು ಹಂಚಿದರು. ಶ್ರೀರಾಮನಮವಿ ಅಂಗವಾಗಿ ದೇವಾಲಯಗಳಲ್ಲಿ ಪೂಜೆಯ ನಂತರ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಹೆಸರು ಬೇಳೆ ಹಾಗೂ ಪ್ರಸಾದವನ್ನು ಹಂಚಲಾಯಿತು. ಕೆಲವು ಸಂಘ ಸಂಸ್ಥೆಗಳು, ಯುವಕ ಸಂಘಗಳು ಸಹ ಶ್ರೀರಾಮನಮವಿ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಹಬ್ಬದ ವಿಶೇಷವಾಗಿ ಪಾನಕ, ಮಜ್ಜಿಗೆ, ಹೆಸರು ಬೇಳೆ, ಅನ್ನದಾಸೋಹ ವ್ಯವಸ್ಥೆ ಮಾಡಿದ್ದು ಸಹ ಗಮನ ಸೆಳೆಯಿತು.ಜಾತಿ, ಮತ ಮೀರಿದ, ಸೌಹಾರ್ದತೆಯ ಸಂಕೇತವಾಗಿರುವ ಶ್ರೀರಾಮನವಮಿಯನ್ನು ಮುಸ್ಲಿಂ ಬಾಂಧವರು ಸೇರಿ ಆಚರಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ನಗರದ ಬಿ.ಹೆಚ್. ರಸ್ತೆಯುದ್ದಕ್ಕೂ ಭಕ್ತಾದಿಗಳು ಶ್ರೀರಾಮನ ಭಾವಚಿತ್ರ ಇಟ್ಟು ಪೆಂಡಾಲ್ ಹಾಕಿ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.