ಮಕ್ಕಳ ಹಕ್ಕುಗಳ ಹೋರಾಟಗಾರ ಹಾಗೂ ಕನ್ನಡ ಉಪನ್ಯಾಸಕ ನಮ್ಮಭೂಮಿಯ ರಾಮಾಂಜಿ ಅವರು ಮಧ್ಯ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ, ನರಹತ್ಯೆ, ಮಕ್ಕಳ ಹತ್ಯೆ ವಿರುದ್ಧ ಶನಿವಾರ ಏಕಾಂಗಿ ಪ್ರತಿಭಟನೆ ನಡೆಸಿದರು.

ಉಡುಪಿ: ಮಕ್ಕಳ ಹಕ್ಕುಗಳ ಹೋರಾಟಗಾರ ಹಾಗೂ ಕನ್ನಡ ಉಪನ್ಯಾಸಕ ನಮ್ಮಭೂಮಿಯ ರಾಮಾಂಜಿ ಅವರು ಮಧ್ಯ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ, ನರಹತ್ಯೆ, ಮಕ್ಕಳ ಹತ್ಯೆ ವಿರುದ್ಧ ಶನಿವಾರ ಏಕಾಂಗಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆ 8.30ಕ್ಕೆ ಉಡುಪಿ ನಗರದ ಮಧ್ಯೆ ಇರುವ ಕ್ಲಾಕ್ ಟವರ್ ಸಮೀಪದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ತಮ್ಮ ಮೌನ ಪ್ರತಿಭಟನೆ ಆರಂಭಿಸಿದರು. ತಮ್ಮ ಬಗ್ಗೆ ಪ್ರತಿಭಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಾಂಜಿ, ಮಧ್ಯ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಮತ್ತು ಅದರ ಪರಿಣಾಮದಿಂದ ತಮಗೆ ಅಘಾತವಾಗಿದೆ. ಈ ಯುದ್ಧದಿಂದ ಸಾವಿರಾರು ಅಮಾಯಕರು ಜೀವ, ನೆಲೆ, ಬದುಕು ಕಳೆದುಕೊಳ್ಳುತ್ತಿದ್ದಾರೆ. ಯಾರದ್ದೋ ರಾಜಕೀಯದ ದಾಹಕ್ಕೆ, ಪ್ರಚಾರದ ತೆವಲಿಗೆ, ಅಧಿಕಾರದ ಮದಕ್ಕೆ ನಿರಪರಾಧಿಗಳು ಶಿಕ್ಷೆ ಅನುಭವಿಸುತಿದ್ದಾರೆ, ಪ್ರಕೃತಿಯ ಮೇಲೆಯೂ ಈ ಯುದ್ಧ ಮುಂದಿನ ಅನೇಕ ವರ್ಷಗಳ ಕಾಲ ಭಯಾನಕ ಪ್ರತಿಕೂಲ ಪರಿಣಾಮ ಬೀರಲಿದೆ. ಆದ್ದರಿಂದ ಮಾನವೀಯತೆಯ ಪರವಾಗಿ ತಾವು ಈ ಪ್ರತಿಭಟನೆಯನ್ನು ನಡೆಸುತಿದ್ದೇನೆ ಎಂದರು. ಗಾಂಧೀಜಿ ಅವರ ಆತ್ಮಕತೆಯನ್ನು ಜೊತೆಗಿಟ್ಟುಕೊಂಡು ಪ್ರತಿಭಟನೆಗೆ ಕುಳಿತಿರುವ ಅವರು, ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ನೀಡಿದ ಗಾಂಧಿ ಹುಟ್ಟಿದ ದೇಶವಿದು. ಭಾರತವೇ ಈಗ ಮತ್ತೇ ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಪ್ರಸರಿಸಬೇಕು ಎಂಬುದು ತನ್ನ ಒತ್ತಾಯವಾಗಿದೆ ಎಂದರು.

ತಾನು ಸಾಂಕೇತಿಕವಾಗಿ ಏಕಾಂಗಿಯಾಗಿ ಪ್ರತಿಭಟಿಸುತಿದ್ದೇನೆ, ಅನೇಕ ಮಂದಿ ಪ್ರತ್ಯಕ್ಷವಾಗಿ ಪ್ರತಿಭಟನೆ ಮಾಡಲು ಅಸಾಧ್ಯವಾದವರು ತನಗೆ ಬೆಂಬಲ ಸೂಚಿಸಿದ್ದಾರೆ, ಕುಂದಾಪುರ ಮತ್ತು ಮಂಗಳೂರಿನಿಂದಲೂ ತಮಗೆ ಪ್ರತಿಭಟನೆಗೆ ಆಹ್ವಾನ ಬಂದಿದೆ ಎಂದರು. ಬಿಸಿಲಿನ ನಡುವೆಯೂ ಅವರು ಸಂಜೆವರೆಗೆ ತಮ್ಮ ಪ್ರತಿಭಟನೆ ನಡೆಸಿದರು.