ಜನಪದ ಕಲಾವಿದ ಸಿದ್ದನಮಠದ ರಾಮಣ್ಣ ಓದು-ಬರಹ ಇಲ್ಲದೆ ಇದ್ದರೂ ಸಹ ಉತ್ತಮವಾದ ಜನಪದ ಸಾಹಿತ್ಯವನ್ನು ರಚಿಸುವಲ್ಲಿ ಸಿದ್ಧಹಸ್ತರಾಗಿದ್ದು ಅವರಲ್ಲಿರುವ ಜನಪದೀಯ ಪ್ರತಿಭೆ ಆಗಾಧವಾದುದು ಎಂದು ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಜನಪದ ಕಲಾವಿದ ಸಿದ್ದನಮಠದ ರಾಮಣ್ಣ ಓದು-ಬರಹ ಇಲ್ಲದೆ ಇದ್ದರೂ ಸಹ ಉತ್ತಮವಾದ ಜನಪದ ಸಾಹಿತ್ಯವನ್ನು ರಚಿಸುವಲ್ಲಿ ಸಿದ್ಧಹಸ್ತರಾಗಿದ್ದು ಅವರಲ್ಲಿರುವ ಜನಪದೀಯ ಪ್ರತಿಭೆ ಆಗಾಧವಾದುದು ಎಂದು ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಿದ್ದನಮಠ ಗ್ರಾಮದಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಯುಗಧರ್ಮ ರಾಮಣ್ಣ ಪ್ರತಿಷ್ಠಾನದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಕನಕ ಶ್ರೀ ಪ್ರಶಸ್ತಿ ಪುರಸ್ಕೃತ ಯುಗಧರ್ಮ ರಾಮಣ್ಣನವರ ಆರು ಕೃತಿಗಳು ಮತ್ತು ಅಕ್ಷರ ಕುಟೀರದ ಲೋಕಾರ್ಪಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ತಾಲೂಕಿನ ಸಿದ್ದನಮಠ ಈ ಗ್ರಾಮದವರೇ ಆದಂತಹ ದಿವಂಗತ ಎಸ್.ಬಿ.ರಂಗನಾಥ್ ಮತ್ತು ಯುಗಧರ್ಮ ರಾಮಣ್ಣ ಇವರಿಬ್ಬರಿಗೆ ಸರ್ಕಾರದಿಂದ ನೀಡುವ ರಾಜ್ಯೋತ್ಸವ ಪ್ರಶಸ್ತಿಗಳು ದೊರೆತಿದ್ದು ಇಡೀ ರಾಜ್ಯದಲ್ಲಿಯೇ ಒಂದೇ ಗ್ರಾಮದಿಂದ ಇಬ್ಬರಿಗೆ ಪ್ರಶಸ್ತಿ ಸಿಕ್ಕಿರುವುದು ಎಲ್ಲಿಯೂ ಇಲ್ಲ ಎಂದು ಪ್ರಶಂಶಿಸಿದರು.
ರಾಮಣ್ಣನು ಬರೆದಿರುವ ಜನಪದ ಪುಸ್ತಕದ ಕೃತಿಗಳಲ್ಲಿ ಸಾಹಿತ್ಯದ ಶಬ್ದ ಭಂಡಾರವೇ ಅಡಗಿದ್ದು ಉತ್ತಮವಾದ ಕೃತಿಗಳಾಗಿವೆ ಎಂದರು.ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬಂತೆ ಓದು-ಬರಹಗಳು ಇಲ್ಲದೆ ಇದ್ದರೂ ಸಹ ಅಕ್ಷರ ಬಲ್ಲವರಿಂದ ಹೇಳುತ್ತ ಬರೆಸಿ ಜನಪದ ಸಾಹಿತ್ಯವನ್ನು ರಚಿಸುವಲ್ಲಿ ಉತ್ತಮವಾದ ಸಾಧನೆಯನ್ನು ಮಾಡಿದವರಾಗಿದ್ದಾರೆ. ಯುಗಧರ್ಮ ರಾಮಣ್ಣ ರಚಿಸಿದ ಸಾಹಿತ್ಯ ಹೆಚ್ಚು ಹೆಚ್ಚಾಗಿ ಪಸರಿಸಲಿ ಎಂದು ಹಾರೈಸಿದರು.
ಸಾಧಕನ ಹಿಂದೆ ಒಬ್ಬ ಗುರು ಇರಬೇಕು ಎಂದು ಹೇಳುತ್ತಾರೆ ಆದರೆ ರಾಮಣ್ಣನ ಹಿಂದೆ ಯಾವ ಗುರುವಿಲ್ಲ ಮನಸ್ಸಿನಲ್ಲಿಯೇ ಗುರುವನ್ನು ಇಟ್ಟುಕೊಂಡ ರಾಮಣ್ಣ ಇಂದು ನಾಡಿನಾದ್ಯಂತ ಹೆಸರು ಮಾಡಿರುವುದು ಶ್ಲಾಘನೀಯ ಎಂದರು.ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಮಾತನಾಡಿ, ಓದು-ಬರಹಗಳಿಲ್ಲದೆ ಕಣ್ಣಿಗೆ ಕಂಡದ್ದನ್ನು ಮನಮುಟ್ಟುವ ಹಾಗೆ ತನ್ನದೇ ಆದ ಹಾಸ್ಯ ಭರಿತ ಶೈಲಿಯಲ್ಲಿ ಹೇಳುತ್ತಾ ಜನರ ಮನಸ್ಸನ್ನು ಗೆದ್ದಿರುವ ಯುಗಧರ್ಮ ರಾಮಣ್ಣನವರಲ್ಲಿ ಭಾವನೆ, ಮನಸ್ಥಿತಿ, ಸಾಮಾಜಿಕ ಸ್ಫಂಧನೆಗಳು ಎದ್ದುಕಾಣುತ್ತಿದ್ದು ಇವರು ಬರೆದ ಕಾವ್ಯಗಳು ಎಲ್ಲರ ಹೃದಯ ಮುಟ್ಟುವಂತವುಗಳಾಗಿವೆ ಎಂದರು.
ಯುಗಧರ್ಮ ರಾಮಣ್ಣನವರ ಸಾಹಿತ್ಯ ಸೇವೆ ಇನ್ನು ಈ ನಾಡಿಗೆ ಹೆಚ್ಚು-ಹೆಚ್ಚು ಸಿಗುವಂತಾಗಬೇಕಾಗಿದ್ದು ಜನಪದ ಸಾಹಿತ್ಯ ಉಳಿದಿರುವುದು ಇಂತಹ ನಿರಕ್ಷರ ಸಾಹಿತಿಗಳಿಂದ ಎಂದರು.ಈ ಸಮಾರಂಭದಲ್ಲಿ ಯುಗಧರ್ಮ ಪ್ರತಿಷ್ಠಾನದ ವತಿಯಿಂದ ಯುಗಧರ್ಮ ರಾಮಣ್ಣ ಹೆಸರಿನಲ್ಲಿ ಯುಗಧರ್ಮ ಪ್ರಶಸ್ತಿಯನ್ನು ಚಿತ್ರದುರ್ಗದ ಕುಮಾರೇಶ್ವರ ನಾಟಕ ಸಂಘದ ಮಾಲೀಕ ಬಿ.ಕುಮಾರಸ್ವಾಮಿ ಇವರಿಗೆ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ತುಮ್ ಕೋಸ್ ಅಧ್ಯಕ್ಷ ಹೆಚ್.ಎಸ್.ಶಿವಕುಮಾರ್, ಶರಣ ಸಾಹಿತ್ಯ ಪರಿಷತ್ ನ ಗೌರವ ಅಧ್ಯಕ್ಷ ಗುಳ್ಳಹಳ್ಳಿ ಮಲ್ಲಿಕಾರ್ಜುನಪ್ಪ, ಜಿಲ್ಲಾ ಕ.ಸಾ.ಪ ಅಧ್ಯಕ್ಷ ವಾಮದೇವಪ್ಪ, ಬೆಂಗಳೂರಿನ ಸಾಹಿತಿ ನಂರುಶಿ, ಸಿದ್ದೇಶ್, ಪ್ರತಿಷ್ಠಾನದ ಅಧ್ಯಕ್ಷ ರಾಧಕೃಷ್ಣ ಪಲ್ಲಕ್ಕಿ, ಡಾ.ಶ್ರೀನಾಥ್ ಕುಮಾರ್, ಗ್ರಾಮಸ್ಥರು ಭಾಗವಹಿಸಿದ್ದರು.