ಸಂಕ್ರಾಂತಿ ಹಬ್ಬದ ದಿನವಾದ ಗುರುವಾರದಂದು ಮೊಟ್ಟ ಮೊದಲ ಬಾರಿಗೆ ರಾಮನಗರದಲ್ಲಿ ರಾಮತಾರಕಯಜ್ಞ ನೆರವೇರಿಸಲು ಬನ್ನಿಮಂಟಪ ಸಜ್ಜುಗೊಂಡಿದೆ. ಜೂನಿಯರ್ ಕಾಲೇಜು ಮುಂಭಾಗ ಬೃಹತ್ ಲೈಟಿಂಗ್‌ನ ಕಮಾನು, ಪಟ್ಟಣದ ರಸ್ತೆಗಳು, ಪ್ರಮುಖ ವೃತ್ತಗಳಲ್ಲಿ ರಾಮ, ಲಕ್ಷ್ಮಣ, ಸೀತೆ, ಆಂಜನೇಯ ಹಾಗೂ ವೆಂಕಟೇಶ್ವರ ಮೂರ್ತಿಗಳ ಕಟೌಟ್ ಗೆ ಲೈಟಿಂಗ್ ವ್ಯವಸ್ಥೆಗಳನ್ನು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಸಪ್ತಗಿರಿಗಳ ನಾಡು ರಾಮನಗರದಲ್ಲಿ ಮೊದಲ ಬಾರಿಗೆ ಆಚರಿಸಲಾಗುತ್ತಿರುವ ಐತಿಹಾಸಿಕ ಶ್ರೀ ರಾಮೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಜಿಲ್ಲಾ ಕೇಂದ್ರ ಮದುವಣಗಿತ್ತಿಯಂತೆ ಸಿಂಗಾರಗೊಂಡು ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಈಗಾಗಲೇ ಹಬ್ಬದ ಆಚರಣೆಗೆ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ರಾಮನಗರದಲ್ಲಿ ಹಳೇ ಬೆಂಗಳೂರು - ಮೈಸೂರು ಹೆದ್ದಾರಿ, ಪ್ರತಿಯೊಂದು ರಸ್ತೆ, ಬೀದಿಗಳು ಎರಡು ಬದಿಯಲ್ಲಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಪ್ರಮುಖ ವೃತ್ತಗಳಲ್ಲಿ ದೇವತೆಗಳ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇಡೀ ರಾಮನಗರ ಜಗಮಗಿಸುತ್ತಿದೆ.

ಸಂಕ್ರಾಂತಿ ಹಬ್ಬದ ದಿನವಾದ ಗುರುವಾರದಂದು ಮೊಟ್ಟ ಮೊದಲ ಬಾರಿಗೆ ರಾಮನಗರದಲ್ಲಿ ರಾಮತಾರಕಯಜ್ಞ ನೆರವೇರಿಸಲು ಬನ್ನಿಮಂಟಪ ಸಜ್ಜುಗೊಂಡಿದೆ. ಜೂನಿಯರ್ ಕಾಲೇಜು ಮುಂಭಾಗ ಬೃಹತ್ ಲೈಟಿಂಗ್‌ನ ಕಮಾನು, ಪಟ್ಟಣದ ರಸ್ತೆಗಳು, ಪ್ರಮುಖ ವೃತ್ತಗಳಲ್ಲಿ ರಾಮ, ಲಕ್ಷ್ಮಣ, ಸೀತೆ, ಆಂಜನೇಯ ಹಾಗೂ ವೆಂಕಟೇಶ್ವರ ಮೂರ್ತಿಗಳ ಕಟೌಟ್ ಗೆ ಲೈಟಿಂಗ್ ವ್ಯವಸ್ಥೆಗಳನ್ನು ಮಾಡಲಾಗಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಿದ್ದು, ಜರ್ಮನ್ ಟೆಂಟ್ ಹಾಕಲಾಗಿದೆ. ಮುಖ್ಯ ವೇದಿಕೆಯ ಬಲಭಾಗದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 15 ಸಾವಿರ ಚೇರ್‌ಗಳ ವ್ಯವಸ್ಥೆ ಮಾಡಲಾಗಿದೆ. ನಗರದ 50ಕ್ಕೂ ಹೆಚ್ಚು ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿಗಳ ಅಳವಡಿಕೆ ಮಾಡಲಾಗುತ್ತಿದೆ. ನಗರಸಭೆ ಕುಡಿಯುವ ನೀರು, ರಸ್ತೆಗಳ ಸ್ವಚ್ಛತೆ ಸೇರಿದಂತೆ ಜೂನಿಯರ್ ಕಾಲೇಜು ಮೈದಾನದಲ್ಲಿ ಊಟದ ಸಂದರ್ಭದಲ್ಲಿ ಸ್ವಚ್ಚತೆ, ಶೌಚಾಲಯ ವ್ಯವಸ್ಥೆಯ ಹೊಣೆ ಹೊತ್ತಿದ್ದಾರೆ.

ಬಿಗಿ ಬಂದೋಬಸ್ತ್ :

ಇನ್ನು ರಾಮೋತ್ಸವ ಪ್ರಯುಕ್ತ ಬಂದೋಬಸ್ತ್ ನೀಡುವ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆ ಜರುಗದಂತೆ ತಡೆಯುವ ಸಲುವಾಗಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಿದೆ. ಇವರಿಗೆ ಗೃಹ ರಕ್ಷಣ ದಳದ ಸಿಬ್ಬಂದಿ ಸಾಥ್ ನೀಡಲಿದ್ದಾರೆ.

ಕಾರ್ಯಕ್ರಮ ಯಶಸ್ಸಿಗೆ ಪೊಲೀಸರು ಸ್ಥಬ್ಧ ಚಿತ್ರಗಳು ಸಾಗುವ ರಸ್ತೆಯಲ್ಲಿ ಈಗಾಗಲೇ ಟ್ರಯಲ್ ರನ್ ನಡೆಸಿದ್ದು, ಒಬ್ಬರು ಎಸ್ಪಿ, 4 ಎಎಸ್ಪಿಗಳು, 6 ಡಿವೈಎಸ್‌ಪಿಗಳು, 23 ಇನ್ಸ್ ಪೆಕ್ಟರ್ ಗಳು, 45 ಸಬ್ ಇನ್ಸ್ ಪೆಕ್ಟರ್ ಗಳು ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಪೊಲೀಸರನ್ನು ಕಾರ್ಯಕ್ರಮಕ್ಕೆ ನಿಯೋಜಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.

-----

ರಸಮಂಜರಿ ಕಾರ್ಯಕ್ರಮ

ವೇದಿಕೆಯ ಆಕರ್ಷಣೆಯಾಗಿ ಜ.18ರಂದು ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ , ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ರಾಗಿಣಿ ದ್ವಿವೇದಿ ಅವರು ರಾಮೋತ್ಸವದ ಮೆರಗನ್ನು ಮತ್ತಷ್ಟು ಹೆಚ್ಚಿಸಲು ಆಗಮಿಸಲಿದ್ದಾರೆ. ಅಲ್ಲದೆ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರು ರಸಸಂಜೆ ಕಾರ್ಯಕ್ರಮದ ಮೂಲಕ ರಸದೌತಣ ಉಣ ಬಡಿಸುವರು. ಹಿನ್ನೆಲೆ ಗಾಯಕರಾದ ಗಾಯತ್ರಿ ಐಶ್ವರ್ಯ ರಂಗರಾಜನ್ , ಪೃಥ್ವಿಭಟ್ , ನಿಶಾನ್ ರೈ, ಲಹರಿ ಮಹೇಶ್ , ಸುನೀಲ್ ಗುಜಗೊಂಡ ಮತ್ತಿತರರು ತಮ್ಮ ಸಿರಿಕಂಠದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದು, ಖ್ಯಾತ ನಿರೂಪಕಿ ಅನುಶ್ರೀ ನಿರೂಪಣೆ ಮಾಡಲಿದ್ದಾರೆ.

----

ಮದ್ಯ ಮಾರಾಟ ನಿಷೇಧ

ರಾಮನಗರದಲ್ಲಿ ರಾಮೋತ್ಸವದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಜ.16 ರಂದು ಬೆಳಗ್ಗೆ 6 ರಿಂದ 18ರ ಮಧ್ಯರಾತ್ರಿ 12ರವರೆಗೆ ನಗರಸಭಾ ವ್ಯಾಪ್ತಿ, ಕಸಬಾ ಮತ್ತು ಕೈಲಂಚಾ, ಕೂಟಗಲ್ ಹೋಬಳಿಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿದೆ.

ಕರ್ನಾಟಕ ಅಬಕಾರಿ ನಿಯಮಗಳು 1968ರ ನಿಯಮ 3ರನ್ವಯ ಎಲ್ಲಾ ರೀತಿಯ ಮದ್ಯ ಸನ್ನದುಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಯಶವಂತ್ ವಿ. ಗುರುಕರ್ ಅವರು ಆದೇಶ ಹೊರಡಿಸಿದ್ದಾರೆ.