ರಸ್ತೆ ಅಭಿವೃದ್ಧಿಪಡಿಸಲು ಒತ್ತಾಯಿಸಿ ರಾಮಾಪುರ ಬಂದ್‌

| Published : Aug 31 2024, 01:39 AM IST

ರಸ್ತೆ ಅಭಿವೃದ್ಧಿಪಡಿಸಲು ಒತ್ತಾಯಿಸಿ ರಾಮಾಪುರ ಬಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಮಾಪುರ ಗರಿಕೆ ಕಂಡಿ ಅಂತಾರಾಜ್ಯ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಲಾಗಿದ್ದ ಹನೂರಿನ ರಾಮಾಪುರ ಬಂದ್ ಮಾಡುವ ಮೂಲಕ ರಸ್ತೆಯಲ್ಲಿ ಗಿಡಗಳನ್ನು ನೆಟ್ಟು ವಿನೂತನವಾಗಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹನೂರುರಾಮಾಪುರ ಗರಿಕೆ ಕಂಡಿ ಅಂತಾರಾಜ್ಯ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಲಾಗಿದ್ದ ರಾಮಾಪುರ ಬಂದ್ ಮಾಡುವ ಮೂಲಕ ರಸ್ತೆಯಲ್ಲಿ ಗಿಡಗಳನ್ನು ನೆಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆ, ಭಗತ್ ಸಿಂಗ್ ಯುವಕರ ಸಂಘ, ಲಾರಿ ಮಾಲೀಕರ ಸಂಘದ ವಿವಿಧ ಗ್ರಾಮಸ್ಥರು ಕರೆ ನೀಡಲಾಗಿದ್ದ ಬಂದ್‌ಗೆ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ರಾಮಾಪುರ ಬಂದ್ ಬಗ್ಗೆ ಮಾಹಿತಿ ಇಲ್ಲದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಿ ವಾಪಾಸ್ ಆಗಿದ್ದು ಕಂಡು ಬಂದಿತು. ಎಂದಿನಂತೆ ಮೆಡಿಕಲ್ಸ್, ಆಸ್ಪತ್ರೆ, ಕ್ಲಿನಿಕ್‌ಗಳು ಸೇವೆ ಒದಗಿಸಿದ್ದವು.ರಾಮಾಪುರ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

ಮಾನವ ಸರಪಳಿ, ಪಾದಯಾತ್ರೆ: ಪ್ರತಿಭಟನಾನಿರತರು ಕೌದಳ್ಳಿ ನಾಲ್ ರೋಡ್ ಸಂಪರ್ಕ ಕಲ್ಪಿಸುವ ವೃತ್ತದಲ್ಲಿ ಜಮಾಯಿಸಿ ಮಾನವ ಸರಪಳಿ ನಿರ್ಮಿಸಿ ಸರ್ಕಾರ, ಶಾಸಕರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ರಾಮಾಪುರದಿಂದ ಮಂಚಾಪುರ ಗ್ರಾಮಕ್ಕೆಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ವೃತ್ತದವರೆ ಪಾದಯಾತ್ರೆ ನಡೆಸಿ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿದರು.

ಸಸಿ ನೆಟ್ಟು ವಿನೂತನ ಪ್ರತಿಭಟನೆ:

ಪ್ರತಿಭಟನಾನಿರತರು ಗುಂಡಿ ಬಿದ್ದು ಕೆಸರುಮಯವಾಗಿದ್ದ ಹೊಂಡದಲ್ಲಿ ಸಸಿಗಳನ್ನು ನಾಟಿ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ ಎಂದು ಮನವಿ ಮಾಡಿದ್ದ ಸಂಘಟನೆಗಳು ರಸ್ತೆ ತಡೆ ನಡೆಸಿ ವಾಹನಗಳ ಓಡಾಟಕ್ಕೆ ತೊಂದರೆ ಮಾಡುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಹಾಗೂ ವಾಹನ ಓಡಾಟಕ್ಕೆ ತೊಂದರೆ ನೀಡಬಾರದು ಎಂದು ಎಚ್ಚರಿಸಿ ವಾಹನ ಸವಾರರಿಗೆ ಪೊಲೀಸರು ಅನುವು ಮಾಡಿಕೊಟ್ಟರು.

ಉಪತಹಸೀಲ್ದಾರ್‌ಗೆ ಮನವಿ: ಪ್ರತಿಭಟನಾ ನಿರತ ಸ್ಥಳಕ್ಕೆ ರಾಮಾಪುರ ಉಪ ತಹಸೀಲ್ದಾರ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿ ಕೂಡಲೇ ಗುಂಡಿ ಬಿದ್ದಿರುವ ರಸ್ತೆಯನ್ನು ಸರಿಪಡಿಸಿ. ಈ ಭಾಗದಲ್ಲಿ ದಿನನಿತ್ಯ 500ಕ್ಕೂ ಹೆಚ್ಚು ಸರಕು ಸಾಗಾಣಿಕೆ ವಾಹನಗಳು ಸೇರಿದಂತೆ ಪ್ರಯಾಣಿಕರು ಓಡಾಡುವ ಮುಖ್ಯ ರಸ್ತೆ ಇದಾಗಿತ್ತು ದುರಸ್ತಿ ಪಡಿಸಿ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಬಿಗಿ ಪೊಲೀಸ್ ಬಂದೂಬಸ್ತ್: ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೂಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು. ರಾಮಾಪುರ ಸಬ್ ಇನ್ಸ್‌ಪೆಕ್ಟರ್ ಈಶ್ವರ್ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ಬಂದೂಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿಭಟನಾನಿರತರು ಈ ಭಾಗದಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರಿಗೆ ಯಾವುದೇ ತೊಂದರೆ ನೀಡದಂತೆ ಸೂಚನೆ ನೀಡುವ ಮೂಲಕ ಸೂಕ್ತ ಬಂದೋಬಸ್ತ್‌ ಕಲ್ಪಿಸಿದ್ದರು.

ಪ್ರತಿಭಟನಾನಿರತರು ಮಾನವ ಸರಪಳಿ, ರಸ್ತೆ ತಡೆ, ಪಾದಯಾತ್ರೆ ಬಳಿಕ ತಮ್ಮ ಬೇಡಿಕೆ ಮತ್ತು ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಲೋಕೋಪಯೋಗಿ ಇಲಾಖೆ ಎಇಇ ಚಿನ್ನಣ್ಣ, ಉಪ ತಹಸೀಲ್ದಾರ್ ಸುರೇಖಾ ಅವರು ಪ್ರತಿಭಟನಾ ನಿರತರ ಅಹವಾಲನ್ನು ಸ್ವೀಕರಿಸಿದರು. ಈ ವೇಳೆ ಪಿಡಬ್ಲ್ಯೂಡಿ ಎಇಇ ಚಿನ್ನಣ್ಣ ಮಾತನಾಡಿ, ಈಗಾಗಲೇ ಅಜ್ಜೀಪುರ ಕಣಿವೆ ಬೋರೆಯಿಂದ ರಾಮಪುರದವರಿಗೆ ₹10 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಆರ್.ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದೆ. ರಾಮಪುರದಿಂದ ಗರಿಕೆಕಂಡಿವರೆಗಿನ ರಸ್ತೆ ಕಾಮಗಾರಿಗೆ ಟೆಂಡರ್ ಆಗಿದ್ದು ಇನ್ನು 20 ದಿನದೊಳಗೆ ಈ ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು. ಇದೇ ವೇಳೆ ರಾಮಪುರ ವ್ಯಾಪ್ತಿಯಲ್ಲಿ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಉಪ ತಹಸೀಲ್ದಾರ್ ಸುರೇಖಾ ಭರವಸೆ ನೀಡಿದ ಬಳಿಕ ಪ್ರತಿಭಟನಾ ನಿರತರು ಪ್ರತಿಭಟನೆಯನ್ನು ಕೈಬಿಟ್ಟರು. ಇದೇ ವೇಳೆಯಲ್ಲಿ ವಿವಿಧ ಸಂಘಟನೆಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.