ಕಾರ್ಮಿಕ, ರೈತ ವಿರೋಧಿ ನೀತಿವಿರೋಧಿಸಿ ಪ್ರತಿಭಟನೆ

| Published : May 21 2025, 12:30 AM IST

ಸಾರಾಂಶ

29 ಕಾರ್ಮಿಕ ಪರವಾದ ಕಾನೂನುಗಳನ್ನು ಹರಣಗೊಳಿಸಿ ಕಾರ್ಮಿಕ ವಿರೋಧಿ 4 ಕಾಯಿದೆಗಳನ್ನು ಜಾರಿಗೆ ತರಲು ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯವರು (ಜೆಸಿಟಿಯು) ನಗರದ ರಾಮಸ್ವಾಮಿ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿದರು.

ದೈತ್ಯ ಏಕಸ್ವಾಮ್ಯ ಬಂಡವಾಳಶಾಹಿಗಳ ಅಣತಿಯ ಮೇರೆಗೆ ಕೇಂದ್ರ ಬಿಜೆಪಿ ಸರ್ಕಾರವು ದುಡಿಯುವ ಜನರ ಜೀವನ ಮತ್ತು ಜೀವನೋಪಾಯದ ಮೇಲೆ ನಿರಂತರ ಫ್ಯಾಸಿಸ್ಟ್ ದಾಳಿಗಳನ್ನು ಎಸುಗುತ್ತಿದೆ. ಕಾರ್ಪೋರೇಟ್‌ ಗಳ ಹಿತಾಸಕ್ತಿಗಾಗಿ ದುಡಿಯುವ ಜನರ ಮೇಲೆ ವಾಸ್ತವವಾಗಿ ಗುಲಾಮಗಿರಿಯ ಷರತ್ತುಗಳನ್ನು ಹೇರುವ ಸಮಗ್ರ ನೀಲನಕ್ಷೆಗೆ ಅನುಗುಣವಾಗಿ ಸರ್ಕಾರ ಮುಂದಾಗಿದೆ ಎಂದು ಅವರು ಆರೋಪಿಸಿದರು.

29 ಕಾರ್ಮಿಕ ಪರವಾದ ಕಾನೂನುಗಳನ್ನು ಹರಣಗೊಳಿಸಿ ಕಾರ್ಮಿಕ ವಿರೋಧಿ 4 ಕಾಯಿದೆಗಳನ್ನು ಜಾರಿಗೆ ತರಲು ಮುಂದಾಗಿದೆ. ಇದರಿಂದ ಕಾರ್ಮಿಕರು ತಮ್ಮ ಬಹುತೇಕ ಹಕ್ಕುಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅಸ್ತಿತ್ವದಲ್ಲಿರುವ ಉದ್ಯೋಗಗಳನ್ನು ಕಡಿತಗೊಳಿಸಿ, ಕಾಯಂ ಉದ್ಯೋಗಗಳನ್ನು ಶಾಶ್ವತವಾಗಿ ರದ್ದುಗೊಳಿಸಲಾಗುತ್ತದೆ. ಗುತ್ತಿಗೆ, ಹೊರಗುತ್ತಿಗೆ, ಹೊಸದಾಗಿ ಜಾರಿಗೊಳಿಸಲಾಗುವ ನಿಗದಿತ ಅವಧಿ ಉದ್ಯೋಗ ಇತ್ಯಾದಿಗಳು ಆಳುವ ಬಂಡವಾಳಶಾಹಿ ವರ್ಗ ಮತ್ತು ಅದರ ಅಧೀನ ಸರ್ಕಾರಗಳು ತಮ್ಮ ಇಚ್ಛೆಯಂತೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮತ್ತು ವಜಾ ಮಾಡಲು ಕೈಗೊಂಡ ಕರಾಳ ವಿನ್ಯಾಸವಾಗಿದೆ ಎಂದು ಅವರು ಕಿಡಿಕಾರಿದರು.

ರಾಜ್ಯದಲ್ಲೂ ಕೃಷಿ ಮಾರುಕಟ್ಟೆಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ದುರ್ಬಲಗೊಳಿಸಿ ಖಾಸಗಿ ಮಾರುಕಟ್ಟೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸ್ಮಾರ್ಟ್ ಮೀಟರ್ ಅಳವಡಿಕೆ ಮೂಲಕ ವಿದ್ಯುತ್ ಖಾಸಗೀಕರಣಕ್ಕೆ ಬೆಂಬಲ ನೀಡಲಾಗುತ್ತಿದ್ದು, ಕೃಷಿ ಪಂಪ್ ಸೆಟ್‌ ಗಳಿಗೂ ಪ್ರಿಪೇಯ್ಡ್ ಮೀಟರ್ ಅಳವಡಿಕೆ ಮಾಡಲಾಗುತ್ತಿದೆ. ಕಾರ್ಮಿಕ ವಿರೋಧಿ ಲೇಬರ್ ಕೋಡ್‌ ಗಳ ಜಾರಿಗೆ ಕ್ರಮ ವಹಿಸುತ್ತಿದೆ. ಯಾವುದೇ ಓಟಿ ಸೌಲಭ್ಯ ಇಲ್ಲದೇ ದಿನಕ್ಕೆ 12 ಗಂಟೆ ದುಡಿಸಿಕೊಳ್ಳಲು ಕಾರ್ಖಾನೆಗಳಿಗೆ ಅನುಮತಿ ನೀಡಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಆರೋಗ್ಯ ಸೇರಿದಂತೆ ಪ್ರತಿಯೊಂದು ನಾಗರಿಕ ಸೌಲಭ್ಯಗಳನ್ನು ಖಾಸಗೀಕರಣ ಮಾಡುತ್ತಿರುವುದು ಜನ ವಿರೋಧಿಯಾಗಿದ್ದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಂಟಿ ಸಮಿತಿಯ ಮುಖಂಡರಾದ ಎಚ್.ಆರ್. ಶೇಷಾದ್ರಿ, ಬಿ. ರಾಮಕೃಷ್ಣ, ದೇವದಾಸ್, ಚಂದ್ರಶೇಖರ ಮೇಟಿ, ಉಮಾದೇವಿ, ಪಿ.ಎಸ್. ಸಂಧ್ಯಾ, ಹರೀಶ್, ಮುದ್ದುಕೃಷ್ಣ, ಜಯರಾಂ, ಎನ್.ಕೆ. ಬಾಲಾಜಿ ರಾವ್, ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಪಿ. ಮರಂಕಯ್ಯ, ಮಂಡಕಳ್ಳಿ ಮಹೇಶ್, ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಎಂ. ಬಸವರಾಜು, ಕರ್ನಾಟಕ ರೈತ ಸಂಘದ ಕಂದೇಗಾಲ ಶ್ರೀನಿವಾಸ್, ಪ್ರಾಂತ ರೈತ ಸಂಘದ ಜಗದೀಶ್ ಸೂರ್ಯ, ಕೆ. ಬಸವರಾಜು ಮೊದಲಾದವರು ಇದ್ದರು.

-----------------

eom/mys/shekar/