ಕನ್ನಡಪ್ರಭ ವಾರ್ತೆ ಮೈಸೂರು

ಸರ್ವಾಧಿಕಾರಿ ಪ್ರವೃತ್ತಿ ಬಿಟ್ಟು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಬಾನು ಮತ್ತು ಸದಸ್ಯರನ್ನು ಬಿಡುಗಡೆಗೊಳಿಸಲು ಆಗ್ರಹಿಸಿ ಕೃಷ್ಣರಾಜ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯವರು ನಗರದ ರಾಮಸ್ವಾಮಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ನೇತೃತ್ವ ವಹಿಸಿದ್ದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಎನ್ ಸ್ಟೈನ್ ಫೈಲ್ಸ್ ನಲ್ಲಿ ಹೆಸರಿರುವ ಪ್ರಧಾನಿ ಮೋದಿ ಅವರು ದೇಶದ ಘನತೆಯನ್ನು ಕುಗ್ಗಿಸಿದ್ದಾರೆ. ರೈತರ ಹಿತಾಸಕ್ತಿ ಬಲಿಕೊಟ್ಟು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ಮಂಡಿಯೂರಿದ್ದಾರೆ. ಅವರ ಬಳಿ ಇದು ಯಾವುದಕ್ಕೂ ಉತ್ತರವಿಲ್ಲ. ಯುವ ಕಾಂಗ್ರೆಸ್ ಉದಯ್ ಅವರನ್ನ ಬಂಧಿಸಿರುವುದು ಪ್ರಧಾನಿಯವರ ಸರ್ವಾಧಿಕಾರಿ ಪ್ರವೃತ್ತಿಯನ್ನು ಬಿಂಬಿಸುತ್ತದೆ ಎಂದು ಆರೋಪಿಸಿದರು.

ನೂರಾರು ನ್ಯೂನ್ಯತೆಗಳನ್ನು ಇರಿಸಿಕೊಂಡು ವಿದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಧಾನಿಯವರಿಗಿಂತ ಕೆಚ್ಚೆದೆಯಿಂದ ನಿರ್ಭಯವಾಗಿ ಅವರ ಕೆಟ್ಟ ನಿಲುವುಗಳ ವಿರುದ್ಧ ಧ್ವನಿ ಎತ್ತಿರುವ ಯುವ ಕಾಂಗ್ರೆಸ್ ಗೆ ಗೌರವವಿದೆ. ಯಾರು ಮೋದಿಯವರ ವಿರುದ್ಧ ಮಾತನಾಡುತ್ತಾರೋ ಅವರ ನೈತಿಕ ಬಲ ಕುಗ್ಗಿಸಿ, ಯಾವುದಾದರೂ ರೂಪದಲ್ಲಿ ತೊಂದರೆ ಕೊಡುವುದೇ ಅವರ ಉದ್ದೇಶ. ಅದೇ ದೃಷ್ಟಿಯಿಂದ ಯುವ ಕಾಂಗ್ರೆಸ್ ಸದಸ್ಯರನ್ನು ಬಂಧಿಸುವ ಮೂಲಕ ಪ್ರತಿಭಟಿಸುವ ಹಕ್ಕನ್ನು ಕಸಿದಿದ್ದಾರೆ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಕೆ.ಆರ್. ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಹೊಯ್ಸಳ, ಮುಖಂಡರಾದ ಜಿ. ಸೋಮಶೇಖರ್, ವೆಂಕಟೇಶ್, ಎಂ.ಎಸ್. ಶಶಾಂಕ್ ಗೌಡ, ರೋಹಿತ್ ಸಿಂಗ್, ಕಾರ್ತಿಕ್, ಸೈದ್ ಸಕ್ಲೇನ್, ಕೆ. ವಿವೇಕ್, ನಿತಿನ್, ಮನೋಜ್, ಕರಣ್, ಅಭಿ, ಕಿರಣ್, ಶಾರುಖ್, ಸೈದ್ ಖಾನ್ ಮೊದಲಾದವರು ಇದ್ದರು.